ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಯಶಸ್ವಿ – ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನ ಕಳಿಸಲು ಅಡಿ ಇಟ್ಟ ಇಸ್ರೋ!

ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಯಶಸ್ವಿ – ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನ ಕಳಿಸಲು ಅಡಿ ಇಟ್ಟ ಇಸ್ರೋ!

ಭೂಮಿ, ಸಮುದ್ರ, ಗಾಳಿ ಬಳಿಕ ಈಗ ಎಲ್ಲಾ ದೇಶಗಳು ಬಾಹ್ಯಾಕಾಶದಲ್ಲಿ ಶಕ್ತಿಪ್ರದರ್ಶನವನ್ನ ತೋರಲು ಪೈಪೋಟಿಗೆ ಬಿದ್ದಿದೆ. ಈಗಾಗಲೇ ಅಮೇರಿಕಾ, ರಷ್ಯಾ, ಚೀನಾ ದೇಶಗಳು ಬಾಹ್ಯಾಕಾಶದಲ್ಲಿ ತಮ್ಮ ಪ್ರಾಬಲ್ಯವನ್ನ ವಿಸ್ತರಿಸುತ್ತಾ ಬಂದಿವೆ. ಈ ಜಿದ್ದಾಜಿದ್ದಿನ ವಿಜ್ಞಾನಕ್ರಾಂತಿಯಲ್ಲಿ ಭಾರತ ಕೂಡ ಮುಂಚೂಣಿಯಲ್ಲೇ ಇದೆ.  ಇತ್ತೀಚೆಗಷ್ಟೇ ಇಸ್ರೋ ತನ್ನ ಯಶಸ್ವೀ ಚಂದ್ರಯಾನ ಮತ್ತು ಆದಿತ್ಯ -L1 ಯೋಜನೆ ಮೂಲಕ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು. ಭಾರತದ ಹೆಮ್ಮೆ ನಮ್ಮ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಮ್ಮೆ ಭಾರತದ ಕೀರ್ತಿಯನ್ನ ಮುಗಿಲೆತ್ತರಕ್ಕೆ ಹಬ್ಬಿಸಿದೆ. ಎಲ್ಲವೂ ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆಯೇ ನಡೆದಿದ್ದು, ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಕಾರ್ಯದಲ್ಲಿ ಇಸ್ರೋ ಗ್ಯಾಂಡ್ ಸಕ್ಸಸ್ ಕಂಡಿದೆ. ಇಸ್ರೋದ ಈ ದಿಟ್ಟ ಹೆಜ್ಜೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸದೊಂದು ಮೈಲುಗಲ್ಲು ನೆಡಲಿದೆ. ಹಾಗಾದರೆ ಹೇಗಿತ್ತು ಗೊತ್ತಾ ಇಸ್ರೋ ಕೈಗೊಂಡ ಯೋಜನೆಯ ಮೊದಲ ಹೆಜ್ಜೆ..? ಭಾರತದ ವಿಜ್ಞಾನಿಗಳ ಮುಂದಿನ ಪಯಣ ಹೇಗಿರುತ್ತೆ ಅನ್ನೋ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಇಸ್ರೋ ತಂತ್ರಜ್ಞಾನಕ್ಕೆ ಫುಲ್‌ ಡಿಮ್ಯಾಂಡ್!‌ – ‘ಚಂದ್ರಯಾನ-3’ ರಾಕೆಟ್ ನೋಡಿ ತಂತ್ರಜ್ಞಾನ ಕೇಳಿತ್ತು ಅಮೆರಿಕ

ಇಸ್ರೋದ ವಿಜ್ಞಾನಕ್ರಾಂತಿಗೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡ್ತಿದೆ. ಚಂದ್ರನ ಅಧ್ಯಯನ, ಸೂರ್ಯನ ಅಧ್ಯಯನದ ಬಳಿಕ ಈಗ ಇಸ್ರೋ ಬೇರೆಯದ್ದೆ ಗುರಿಯನ್ನ ಹೊಂದಿದೆ. ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನ ಯೋಜನೆಗೆ, ಇಸ್ರೋ ಸಿದ್ಧತೆ ನಡೆಸಿದೆ. ಇದೀಗ ತನ್ನ ಪ್ರಯತ್ನದಲ್ಲಿ ದೊಡ್ಡ ಸಕ್ಸಸ್ ಕೂಡ ಕಂಡಿದ್ದು, ಮೊದಲ ಹೆಜ್ಜೆಯಲ್ಲಿ ಇತಿಹಾಸ ನಿರ್ಮಿಸಿದೆ. ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಆದರೆ ಉಡಾವಣೆಗೂ ಮುನ್ನ ತಾಂತ್ರಿಕ ದೋಷದಿಂದ 3 ಬಾರಿ ವಿಫಲವಾಗಿ ಕೆಲಕಾಲ ಆತಂಕವೂ ಉಂಟಾಗಿತ್ತು. ಶನಿವಾರ ಬೆಳಗ್ಗೆ 8:45ಕ್ಕೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ಸಜ್ಜಾಗಿತ್ತು. ಅದಕ್ಕೂ ಮುನ್ನ 8:30 ಗಂಟೆಗೆ ಉಡ್ಡಯನಕ್ಕೆ ಇಸ್ರೋ ಸಮಯ ನಿಗದಿಪಡಿಸಿತ್ತು, ಆದ್ರೆ ಹವಾಮಾನ ವೈಪರಿತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಟಕ್ಕೆ ರಾಕೆಟ್‌ ಉಡಾವಣೆ ಮಾಡಲಾಯಿತು. ಯಶಸ್ವಿಯಾಗಿ ಹಾರಾಟ ನಡೆಸಿದ, ರಾಕೆಟ್‌ ಸೇಫ್‌ ಲ್ಯಾಂಡಿಂಗ್‌ ಆಗಿದೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಇಸ್ರೋ ಪರೀಕ್ಷೆಗೆ TV-D1 ಎಂದು ಹೆಸರಿಸಲಾಗಿದೆ. ಇಂತಹ ಉದ್ದೇಶಿತ ಮೂರು ಪರೀಕ್ಷೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕ ಹಂತದ ರಾಕೆಟ್ ಟಿವಿ-ಡಿ1 ನಭಕ್ಕೆ ಚಿಮ್ಮಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ. TV-D1 ಪರೀಕ್ಷಾರ್ಥ ಹಾರಾಟವು ಗಗನಯಾನ ಮಿಷನ್‌ನ ನಿರ್ಣಾಯಕ ಭಾಗವಾಗಿದೆ. ಇದು ಮೂವರು ಸಿಬ್ಬಂದಿಯನ್ನು 3 ದಿನಗಳ ಕಾರ್ಯಾಚರಣೆಗಾಗಿ 400 ಕಿಲೋಮೀಟರ್ ದೂರದ ಕಕ್ಷೆಗೆ ಕಳುಹಿಸುವುದು, ಈ ಮೂಲಕ ಹಿಂದೂ ಮಹಾಸಾಗರದ ನೀರಿನಲ್ಲಿ ಸೇಫ್ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು ಇದರೊಂದಿಗೆ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

TV-D1 ಟೆಸ್ಟಿಂಗ್ ಗಗನಯಾನ ಸಂದರ್ಭದಲ್ಲಿ ಗಗನ ಯಾತ್ರಿಗಳು ಕುಳಿತುಕೊಳ್ಳ ಬೇಕಾಗಿದ್ದ ಕ್ರ್ಯೂ ಮಾಡ್ಯೂಲ್ ನ ಸಾಮರ್ಥ್ಯವನ್ನ ಪರೀಕ್ಷಿಸುವ ಉದ್ದೇಶ ಹೊಂದಿದೆ. GSLV ರಾಕೆಟ್ ಮೂಲಕ ಕ್ರ್ಯೂ ಮಾಡ್ಯೂಲ್ ಅನ್ನೂ ಉಡಾವಣೆ ಮಾಡಲಿದೆ. ಸುಮಾರು 17 ಕಿಲೋಮೀಟರ್ ಎತ್ತರದಲ್ಲಿರುವಾಗ ಕ್ರ್ಯೂ ಎಸ್ಕೇಪ್ ಸಿಸ್ಟಮ್ ಮತ್ತು ಸಿಬ್ಬಂದಿ ಮಾಡ್ಯೂಲ್ ರಾಕೆಟ್‌ನಿಂದ ಹೊರಬರುತ್ತದೆ. ನಂತರ ಸಿಬ್ಬಂದಿ ಮಾಡ್ಯೂಲ್ ಅನ್ನು ಹೆಚ್ಚಿನ ಎತ್ತರಕ್ಕೆ ಅಂದರೆ ರಾಕೆಟ್‌ನಿಂದ ಮತ್ತೆ ಸುಮಾರು 2 ಕಿಲೋ ಮೀಟರ್ ಎತ್ತರಕ್ಕೆ ಕೊಂಡೊಯ್ಯಲಾಗುತ್ತದೆ. ನಂತರ ಭೂಮಿಗೆ ಮರು ಪ್ರವೇಶಿಸಲು ಕ್ರ್ಯೂ ಮಾಡ್ಯೂಲ್ ತನ್ನ ವೇಗವನ್ನ ಕಡಿಮೆ ಮಾಡುತ್ತಾ ಬರುತ್ತದೆ. ಬಳಿಕ ಪ್ಯಾರಾಚೂಟ್ ಮೂಲಕ ಶ್ರೀಹರಿಕೋಟಾದ ಬಾಹ್ಯಾಕಾಶ ಪೋರ್ಟ್‌ನ ಕರಾವಳಿಯಿಂದ ಸುಮಾರು 10 ಕಿಮೀ ದೂರದಲ್ಲಿರುವ ಬಂಗಾಳ ಕೊಲ್ಲಿ ಸಮುದ್ರದಲ್ಲಿ  ಸ್ಪ್ಲಾಶ್‌ಡೌನ್ ಆಗುತ್ತೆ. ನಂತರ, ಭಾರತೀಯ ನೌಕಾಪಡೆಯ ಹಡಗು ಮತ್ತು ಡೈವಿಂಗ್ ತಂಡವನ್ನು ಬಳಸಿಕೊಂಡು ಸಿಬ್ಬಂದಿ ಮಾಡ್ಯೂಲ್ ಅನ್ನು ಮರುಪಡೆಯಲಾಗುತ್ತದೆ.

ಟಿವಿ- ಡಿ1 ವಾಹನವು ಮಾರ್ಪಡಿಸಿದ ವಿಕಾಸ್ ಎಂಜಿನ್ ಒಳಗೊಂಡಿದ್ದು, ಕ್ರ್ಯೂ ಮಾಡ್ಯೂಲ್ ಮತ್ತು ಕ್ರ್ಯೂ ಎಸ್ಕೇಪ್ ಸಿಸ್ಟಂ ಅನ್ನು ಬಳಸುತ್ತದೆ. ಇದು 34.9 ಮೀಟರ್ ಎತ್ತರ ಮತ್ತು 44 ಟನ್‍ಗಳಷ್ಟು ತೂಕ ಹೊಂದಿದೆ. 2024ರ ಮೊದಲ ತ್ರೈಮಾಸಿಕದಲ್ಲಿ ಎರಡನೇ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಎರಡೂ ಪರೀಕ್ಷಾರ್ಥ ಉಡಾವಣೆಗಳ ಬಳಿಕ 2024ರ ಕೊನೆಯಲ್ಲಿ ಅಂತಿಮ ಗಗನಯಾನ ಕೈಗೊಳ್ಳುವ ಯೋಜನೆ ಹೊಂದಲಾಗಿದೆ. ಮೊದಲ ಎರಡು ಉಡಾವಣೆಗಳು ಮಾನವರಹಿತವಾಗಿರಲಿದೆ. ಮೂರನೇ ಬಾರಿ ಪರೀಕ್ಷಾರ್ಥ ಉಡಾವಣೆಯಲ್ಲಿ ಒತ್ತಡೀಕೃತ ಸಿಬ್ಬಂದಿ ಮಾಡ್ಯೂಲ್‍ನ್ನು ಕಳುಹಿಸಲು ಯೋಜನೆ ರೂಪಿಸಲಾಗಿದೆ. ಮಾನವ ಸಹಿತ ಉಡಾವಣೆಗೂ ಮುನ್ನ ಹೀಗೆ ನಾಲ್ಕು ಪರೀಕ್ಷೆಗಳನ್ನು ನಡೆಸುವಂತೆ ಗಗನಯಾನ ಸಲಹಾ ಸಮಿತಿ ಸೂಚಿಸಿದೆ. ಅದರಲ್ಲೂ ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯನ್ನು ಕರಾರುವಕ್ಕಾಗಿ ಪರೀಕ್ಷಿಸುವಂತೆ ತಿಳಿಸಿದೆ. ಮಾನವ ಸಹಿತ ಗಗನಯಾನವು ಪರೀಕ್ಷಾರ್ಥ ಉಡಾವಣೆಗಳು ಫಲಿತಾಂಶದ ಮೇಲೆ ಆಧಾರವಾಗಿದೆ. ಇನ್ನು ಗಗನಯಾನ ಮಿಷನ್‍ಗೆ 3,040 ಕೋಟಿ ರೂ. ಖರ್ಚು ಮಾಡಲಾಗಿದೆ. ಮಾನವ ಸಹಿತ ಗಗನಯಾನ ಯೋಜನೆಗೆ ನಾಲ್ವರು ಫೈಟರ್ ಜೆಟ್ ಪೈಲಟ್‍ಗಳನ್ನು ಭಾರತೀಯ ವಾಯುಪಡೆ ಗುರುತಿಸಿದೆ. ಇವರು ರಷ್ಯಾಗೆ ತೆರಳಿ ಅಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ.

ಗಗನಯಾನ ಯೋಜನೆ, ಇಸ್ರೋದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವಾಗಿದೆ. ಕನಿಷ್ಠ ಮೂವರು ಗಗನಯಾತ್ರಿಗಳನ್ನ ಭೂಮಿಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಕೆಳಕಕ್ಷೆಗೆ ಅಂದರೆ ಲೋ ಅರ್ಥ್ ಆರ್ಬಿಟ್​ಗೆ ತಲುಪಿಸಿ 3ರಿಂದ 7ದಿನಗಳ ವರೆಗೆ ಕಕ್ಷೆಯ ಸುತ್ತ ಸುತ್ತಿಸಲಾಗುತ್ತೆ. ನಂತ್ರ ಭೂಮಿಗೆ ಸುರಕ್ಷಿತವಾಗಿ ಇಳಿಸುವ ಬಹು ದೊಡ್ಡ ಯೋಜನೆ ಇದಾಗಿದೆ. ಈಗಾಗಲೇ ಅಮೆರಿಕಾ, ರಷ್ಯಾ, ಚೀನಾ ಬಾಹ್ಯಾಕಾಶಕ್ಕೆ ತಮ್ಮ ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಿರೋದು ಗೊತ್ತಿರುವಂತದ್ದೇ. ಖಾಸಗಿ ಸಂಸ್ಥೆಗಳಾದ ಸ್ಪೇಸ್ ಎಕ್ಸ್, ಬ್ಲೂ ಒರಿಜಿನ್ ಅಂತಹ ಖಾಸಗಿ ಸಂಸ್ಥೆಗಳು ಸ್ಪೇಸ್ ಟೂರಿಸಂ ಮೂಲಕ ಮಾನವ ಸಹಿತ ಪ್ರವಾಸಗಳನ್ನ ಕೈಗೊಳ್ಳುತ್ತಿವೆ. 2024 ಅಥವಾ 2025 ರಲ್ಲಿ ಭಾರತವೂ ಗಗನಯಾನ ಮಿಷನ್ ಆರಂಭಿಸುವ ಮೂಲಕ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಜಗತ್ತಿನ ನಾಲ್ಕನೇ ದೇಶವೆಂಬ ಹೆಗ್ಗಳಿಕೆ ಪಾತ್ರವಾಗಲಿದೆ.

ಅಮೇರಿಕ, ರಷ್ಯಾದಂತ ದೇಶಗಳು ನಡೆಸಿದ ಬಾಹ್ಯಾಕಾಶಯಾನಗಳ ಬಗ್ಗೆ ನಾವೆಲ್ಲ ಕೇಳಿರ್ತೇವೆ. ಆ ಸಂದರ್ಭದಲ್ಲಿ ಅಂತರಿಕ್ಷಾ ಯಾನದ ಬಗ್ಗೆ ನಮಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮಾನವರನ್ನು ಯಾವ ರೀತಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತೆ.. ಮತ್ತೆ ಭೂಮಿಗೆ ಮರು ಪ್ರವೇಶ ಹೇಗಿರುತ್ತೆ… ತುಂಬಾ ದೂರದಿಂದ ಕುಳಿತು ಕೇಳೋ ನಮಗೆ ಇದೂ ಒಂದು ಅದ್ಬುತ ಅಂತ ಅಂದುಕೊಳ್ತೇವೆ. ಆದರೆ ಈಗ ನಮ್ಮ ಹೆಮ್ಮೆಯ ಇಸ್ರೋ ಇದೇ ಅದ್ಭುತವನ್ನ ಮಾಡೋದಿಕ್ಕೆ ಹೊರಟಿದೆ. TV-D1  ಪರೀಕ್ಷೆಯ ಉದ್ದೇಶ ಏನಾಗಿತ್ತು..? 2014 ರಲ್ಲೇ ಪ್ರಾರಂಭವಾಗಿ 2024 ರಲ್ಲಿ ನಡೆಯಲಿರುವ ಈ ಯೋಜನೆಯ ತಯಾರಿ ಹೇಗಿದೆ..? ಉಡಾವಣೆಯಾಗುವ ಮೊದಲು ನಡೆಯಬೇಕಾಗಿರುವ ಹಂತಗಳೇನು..? ಈಗಾಗಲೇ ಕಡಿಮೆ ವೆಚ್ಚದ ಬಜೆಟ್ ಮೂಲಕವೇ ಭಾರತ ಚಂದ್ರಯಾನ ಮತ್ತು ಆದಿತ್ಯ -L1 ಮಿಷನ್ ಸಕ್ಸಸ್ ಮಾಡಿ ಬ್ರಾಂಡ್ ಕ್ರಿಯೇಟ್ ಮಾಡಿದೆ. ಇದರ ಮುಂದುವರಿದ ಭಾಗವಾಗಿ ಇಸ್ರೋದ ಮಾನವ ಸಹಿತ ಗಗನಯಾನದ ಕುತೂಹಲಕಾರಿ ವಿಷಯವನ್ನ ತಿಳಿದುಕೊಳ್ಳೋಣ.

ಮಾನವಸಹಿತ ಗಗನಯಾನದ ಸಿದ್ಧತೆ ಹೇಗಿದೆ..?

ಸುಮಾರು 10 ಸಾವಿರ ಕೋಟಿ ಬಜೆಟ್ ನಲ್ಲಿ ನಡೆಯುತ್ತಿರುವ ಗಗನಯಾನ ಮಿಷನ್ 2024 ರಲ್ಲಿ ಉಡಾವಣೆಯಾಗಲಿದೆ. ಮೂವರು ಗಗನಯಾತ್ರಿಗಳನ್ನ ಭೂಮಿ ಕೆಳ ಕಕ್ಷೆಯಲ್ಲಿ 3 ದಿನಗಳವರೆಗೆ ಸುತ್ತಿಸಿ ನಂತರ ಸಮುದ್ರಕ್ಕೆ splash down ಮಾಡುವ ಮೂಲಕ ಸುರಕ್ಷಿತವಾಗಿ ಭೂಮಿಗೆ ಕರೆತರಲಾಡುತ್ತದೆ. ಅಷ್ಟಕ್ಕೂ ಈ ಯೋಜನೆ ಆರಂಭವಾಗಿದ್ದು 2007 ರಲ್ಲಿ. ಆದರೆ 2014 ರಲ್ಲಿ ಇದಕ್ಕೆ ಸಂಬಂಧಿತ ಬಜೆಟ್ ಹೆಚ್ಚಿಸಿದರಿಂದ ಇನ್ನಷ್ಟು ರೂಪರೇಷೆಗಳೊಂದಿಗೆ ಗಗನಯಾನ ಯೋಜನೆಯನ್ನ ಅಪ್​ಗ್ರೇಡ್ ಮಾಡಲಾಗಿತ್ತು. ಅಂತಿಮವಾಗಿ 2024 ರಲ್ಲಿ 400 ಕಿಲೋಮೀಟರ್ ದೂರದ ಭೂಮಿಯ ಕೆಳ ಕಕ್ಷೆಯಲ್ಲಿ ಮಾನವನನ್ನು ಸುತ್ತಿಸಲು ನಿರ್ಧರಿಸುವ ಇಸ್ರೋ ಆ ಅವಧಿಯೊಳಗೆ ಹಲವು ಪರೀಕ್ಷಾ ಹಾರಾಟಗಳನ್ನ ನಡೆಸಲಿದೆ.

ರೀಎಂಟ್ರಿ ಸ್ಪೇಸ್ ಕಾಪ್ಸುಲ್ ನೌಕೆ ವಿಶೇಷತೆ ಏನು..?

reentry space capsule. ಇದು ಬಾಹ್ಯಾಕಾಶದಿಂದ ಭೂಮಿಗೆ ಮರುಪ್ರವೇಶಿಸಲು ಬೇಕಾಗಿರುವ ನೌಕೆಯಾಗಿರುತ್ತೆ. ಭೂಮಿಗೆ ಮರು ಪ್ರವೇಶ ಮಾಡುವ ಸಂದರ್ಭ ಅತ್ಯಂತ ಕ್ರಿಟಿಕಲ್ ಹಂತವಾಗಿರುತ್ತೆ. ಯಾಕಂದ್ರೆ ಭೂಮಿಯಿಂದ ಉಡಾವಣೆಗೊಳ್ಳೋದು ಹಾಗೇ ಮತ್ತೆ ಭೂಮಿಗೆ ರಿಟರ್ನ್ ಬರೋದು. ಇವೆರಡರ ಮೆಕ್ಯಾನಿಸಮ್ ಕಂಪ್ಲೀಟ್ ಆಗಿ ಒಂದಕ್ಕೊಂದು ವಿರುದ್ಧವಾಗಿರುತ್ತೆ. ಭೂಮಿಯ ಕೆಳ ಕಕ್ಷೆಯಿಂದ ಭೂಮಿಯ ವಾತಾವರಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ನೌಕೆಯೂ ಮುಖ್ಯವಾಗಿ ಭೂಮಿಯ ಗ್ರಾವಿಟಿ ಮತ್ತೂ  ಗಾಳಿಯನ್ನ ಎದುರಿಸಬೇಕಾಗುತ್ತದೆ. ಭೂಮಿಯ ಗ್ರಾವಿಟಿಯು ನೌಕೆಯನ್ನ ಭೂಮಿಯ ಕಡೆಗೆ ರಭಸವಾಗಿ ಎಳೆಯುತ್ತದೆ. ಹಾಗಾಗಿ ನೌಕೆಯು ಅತ್ಯಂತ ವೇಗದಲ್ಲಿ ಇರುತ್ತದೆ. ನೌಕೆಯು ಅತಿಯಾದ ವೇಗದಲ್ಲಿ ಬರುತ್ತಿದ್ದಂತೆ  ಗಾಳಿಯ ಕೆಮಿಕಲ್ ಬಾಂಡ್ ಬ್ರೇಕ್ ಆಗೋದಿಕ್ಕೆ ಶುರುವಾಗುತ್ತೆ. ಇದೂ ಅಲ್ಲಿ ದೊಡ್ಡ ಘರ್ಷಣೆಯನ್ನ ಸೃಷ್ಟಿ ಮಾಡುತ್ತದೆ. ಮತ್ತು ನೌಕೆಯ ವೇಗವನ್ನ ಕಡಿಮೆ ಮಾಡುತ್ತೆ. ಇದು ನೌಕೆಗೆ ಒಂದು ಅಡ್ವಾಂಟೇಜ್ ಆಗಿದ್ದರೂ ಕೂಡಾ ಘರ್ಷಣೆಯಿಂದಾಗಿ ನೌಕೆಯ ಸುತ್ತ ಮುತ್ತ electrically ಚಾರ್ಜ್ಡ್ ಪ್ಲಾಸ್ಮಾವೂ ಸೃಷ್ಟಿಯಾಗುತ್ತೆ. ಈ ಪ್ಲಾಸ್ಮಾ ಅತ್ಯಂತ ಬಿಸಿಯಾಗಿರುತ್ತೆ. ಹಾಗಾಗಿ ಮರು-ಪ್ರವೇಶದ ಸಮಯದಲ್ಲಿ ಸ್ಪೇಸ್ ಕ್ರಾಫ್ಟ್ ಮತ್ತು ಗಗನ ಯಾತ್ರಿಗಳನ್ನ ರಕ್ಷಿಸಲು ಬಾಹ್ಯಾಕಾಶ ನೌಕೆಗೆ ವಿಶೇಷ ಹೀಟ್ ಶಿಲ್ಡ್ ಗಳ ಅಗತ್ಯವಿರುತ್ತದೆ.

ಪಾಡ್ ಅಬೊರ್ಟ್ ಟೆಸ್ಟ್ ನಲ್ಲೂ ಇಸ್ರೋ ಯಶಸ್ವಿ!

ಇನ್ನೂ Pad Abort ಟೆಸ್ಟ್ ಕೂಡಾ ಇಸ್ರೋ ಯಶಸ್ವೀಯಾಗಿ ಮಾಡಿದೆ. ಗಗನಯಾತ್ರಿಗಳನ್ನ ಒಳಗೊಂಡ ಮೊದಲ ಮಿಷನ್ ಆಗಿರೋದ್ರಿಂದ  ಗಗನಯಾತ್ರಿಗಳ ಸುರಕ್ಷತೆಯೂ ಇಸ್ರೋ ಗೇ ಮುಖ್ಯವಾಗಿರುತ್ತೆ. ಸಿಬ್ಬಂದಿ ಕುಳಿತುಕೊಳ್ಳುವ crew ಮಾಡ್ಯೂಲ್​ನ ಹೊತ್ತ ರಾಕೆಟ್ ಒಂದು ವೇಳೆ ವೈಫಲ್ಯಗೊಂಡಿದಲ್ಲಿ ಸುರಕ್ಷಿತವಾಗಿ ಗಗನಯಾತ್ರಿಗಳನ್ನ ಒಳಗೊಂಡಿದ್ದ ಬಾಹ್ಯಾಕಾಶ ನೌಕೆಯನ್ನ ರಾಕೆಟ್ ನಿಂದ ಹೊರಹಾಕುವ ಈ ಲಾಂಚ್ ಎಸ್ಕೇಪ್ ಸಿಸ್ಟಮ್ ಅನ್ನೂ 2018 ರಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಇನ್ನು ಶನಿವಾರ ನಡೆದ TV-D1 ಮಿಷನ್ ಇದೂ ಭೂಮಿಯಿಂದ ಸುಮಾರು 17 ಕಿಲೋಮೀಟರ್ ಎತ್ತರದಲ್ಲಿ ನಡೆಸಿದ ಪರೀಕ್ಷೆಯಾಗಿತ್ತು. ಈ ಪರೀಕ್ಷಾ ಹಂತದಲ್ಲಿ ಇನ್ನು D2, D3, D4 ಸೀರಿಸ್ ಗಳು ಇದ್ದು ಮುಂದಿನ ಹಂತಗಳಲ್ಲಿ ಇಸ್ರೋ ಇವುಗಳನ್ನ ನಡೆಸಲಿದೆ. ಇವೆಲ್ಲವೂ ಭೂಮಿಯಿಂದ ಒಂದಿಷ್ಟು ದೂರದಲ್ಲಿ ನಡೆಸುವಂತಹ ಪರೀಕ್ಷಾ ಹಾರಾಟಗಳಾಗಿರುತ್ತವೆ.  ಆದರೆ 2024ರಲ್ಲಿ ಬಾಹ್ಯಾಕಾಶಕ್ಕೆ ಮಾನವರನ್ನ ಕಳುಹಿಸುವ ಮೊದಲು ಭೂಮಿಯ ಕೆಳ ಕಕ್ಷೆಗೆ ಎರಡು ಬಾರಿ ಮಾನವ ರಹಿತ ಬಾಹ್ಯಾಕಾಶ ಪ್ರಯಾಣವನ್ನ ನಡೆಸಲಾಗುತ್ತೆ. ಅವುಗಳಲ್ಲಿ ಒಂದು ಮಾನವ ರಹಿತ ಬಾಹ್ಯಾಕಾಶ ನೌಕೆ ಹಾರಾಟದಲ್ಲಿ ವ್ಯೋಮಿತ್ರ ಎಂಬ ಹೆಸರಿನ ಮಹಿಳಾ ರೋಬೊಟ್ ಅನ್ನೂ ಕಳುಹಿಸಲಾಗುತ್ತೆ. ಸಾಮಾನ್ಯವಾಗಿ ಇತರೆ ದೇಶಗಳಲ್ಲಿ ಬಾಹ್ಯಾಕಾಶದಲ್ಲಿ ಮಾನವ ಹಾರಾಟಕ್ಕಿಂತ ಮೊದಲು ಪ್ರಾಣಿಗಳನ್ನು ಕಳುಹಿಸೋದನ್ನ ನಾವು ಕೇಳಿರ್ತೆವೆ. 1957 ರಲ್ಲಿ ಮೊದಲ ಬಾರಿಗೆ ಲೈಕಾ ಎಂಬ ಹೆಸರಿನ ನಾಯಿಯನ್ನ ಸೊವಿಯತ್ ಯೂನಿಯನ್ ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಆದರೆ ಭಾರತವೂ ಹುಮನೋಯ್ಡ್ ರೋಬೊಟ್ ಕಳುಹಿಸುವ ಉದ್ದೇಶ ಇಟ್ಟುಕೊಂಡಿದ್ದು ಈ ಮೂಲಕ ಇತರ ದೇಶಗಳಿಗಿಂತ ಭಿನ್ನವಾಗಿ ನಿಂತಿದೆ. ಮುಂದೆ ಈ ಎಲ್ಲಾ ಪರೀಕ್ಷೆಗಳು ಯಶಸ್ವಿಯಾದಲ್ಲಿ 2024 ರಲ್ಲಿ ಭಾರತವೂ ಗಗನಯಾನ ಮಿಷನ್ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸದೊಂದು ಇತಿಹಾಸವನ್ನ ಸೃಷ್ಟಿಸಲಿದೆ.

ಭಾರತದ ಬಾಹ್ಯಾಕಾಶ ಯಾನಕ್ಕೆ ರಷ್ಯಾದ ಸಹಕಾರ!

ಈಗಾಗಲೇ ಈ ಯೋಜನೆಗೆ ಇಸ್ರೋ ರಷ್ಯಾದ ರೊಸ್ಕೊಸ್ಮೋಸ್ ಬಾಹ್ಯಾಕಾಶ ಕೇಂದ್ರದ ಸಹಕಾರವನ್ನ ಕೂಡಾ ಪಡೆದುಕೊಂಡಿದೆ. ರೊಸ್ಕೊಸ್ಮೋಸ್ ಬಾಹ್ಯಾಕಾಶ ಕೇಂದ್ರವೂ ಗಗನಯಾನ ಯೋಜನೆಯ ಭಾರತೀಯ ಗಗನಯಾತ್ರಿಗಳಿಗೆ ತರಬೇತಿಯನ್ನ ಕೂಡಾ ಪ್ರಾರಂಭಿಸಿದೆ. ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣ ಶಕ್ತಿಯಲ್ಲಿ  ಪ್ರಯಾಣ ಮಾಡೋದು ಸವಾಲಿನ ವಿಷಯವಾಗಿರುತ್ತದೆ. ಶೂನ್ಯ ಗುರುತ್ವಾಕರ್ಷಣ ಶಕ್ತಿಯಲ್ಲಿ ಮನುಷ್ಯನ ದೇಹವು ಹಗುರವಾಗುತ್ತಾ ಆತನ ರಕ್ತ ಪರಿಚಲನೆಯಲ್ಲೂ ಏರುಪೇರಾಗುವ ಸಂಭವವಿರುತ್ತೆ. ಹಾಗಾಗಿ ದೇಹವನ್ನ  ಅಂತಹ ವಾತಾವರಣದಲ್ಲಿ ಸಮತೋಲನದಲ್ಲಿ ಇಟ್ಟುಕೊಳ್ಳೋದಿಕ್ಕೇ ಗಗನಯಾತ್ರಿಗಳು ದೀರ್ಘ ಕಾಲದ ತರಬೇತಿಗಗೂ ಒಳಗಾಗಬೇಕಾಗುತ್ತದೆ. ಇನ್ನೂ ರೊಸ್ಕೊಸ್ಮೋಸ್ ಕೇವಲ ತರಬೇತಿ ಮಾತ್ರವಲ್ಲಾ.. ಗಗನಯಾತ್ರಿಗಳಿಗೆ ಬಾಹ್ಯಾಕಾಶ  ಸೂಟ್ ಗಳನ್ನ ತಯಾರಿಸುವ ಜವಾಬ್ದಾರಿಯನ್ನ ಕೂಡಾ ತೆಗೆದುಕೊಂಡಿದೆ. ಇನ್ನೂ ಭಾರತದಲ್ಲೇ ಕೆಲವು ಸಂಸ್ಥೆಗಳು ಈ ಯೋಜನೆಗೆ ಕೈ ಜೋಡಿಸಿವೆ. ಸ್ಪೇಸ್ ಕ್ರಾಫ್ಟ್ ನ ಬಹು ಮುಖ್ಯ ಭಾಗವಾದ crew module ಅಂದ್ರೆ ಸಿಬ್ಬಂದಿ ಕುಳಿತುಕೊಳ್ಳುವಂತಹ ಮಾಡ್ಯೂಲ್ ಅನ್ನೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿದೆ. ಜೊತೆಗೆ ಇನ್ನು ಮುಖ್ಯವಾಗಿ ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿ ಇರುವಷ್ಟು ದಿನ ತೆಗೆದು ಕೊಳ್ಳಬೇಕಾದ ಗುಣಮಟ್ಟದ ಆಹಾರವನ್ನ ನೀಡುವ ಸಲುವಾಗಿ ಹಲವಾರು ಸಂಸ್ಥೆಗಳು ಇಸ್ರೋ ಜೊತೆ ಕಾರ್ಯ ನಿರ್ವಹಿಸುತ್ತಿವೆ. ಮುಖ್ಯವಾಗಿ DRDO ಅಡಿಯಲ್ಲಿರುವ ಮೈಸೂರು ಮೂಲದ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿಯು ಈ ಅದ್ಭುತ ಪ್ರಯಾಣಕ್ಕಾಗಿ ವಿಶೇಷ ಆಹಾರ ಪದಾರ್ಥಗಳು ಮತ್ತು ಮೆನುಗಳನ್ನು ಸಿದ್ಧಪಡಿಸುತ್ತಿವೆ. ಶೂನ್ಯ ಗ್ರಾವಿಟಿಯಲ್ಲಿ ಗಗನಯಾತ್ರಿಗಳು ತಮ್ಮ ಇಷ್ಟದ ಆಹಾರವನ್ನ ಸೇವಿಸೋದಿಕ್ಕೆ ಆಗೋದಿಲ್ಲ. ಅಲ್ಲಿ ತೇಲಾಡುವಂತಹ ಮತ್ತು ಹಗುರ ತೂಕದ ಅನುಭವವಾಗೋದ್ರಿಂದ ಅದಕ್ಕೆ ತಕ್ಕಂತಹ ಮತ್ತು ಗುಣಮಟ್ಟದ ಸಂಸ್ಕರಿಸಿದ ಆಹಾರವನ್ನ ಸಿದ್ದಪಡಿಸೋದು ಬಹಳ ಮುಖ್ಯವಾಗಿರುತ್ತದೆ.

ಇಸ್ರೋ ಪರೀಕ್ಷೆಯ ಉದ್ದೇಶವೇನು..?

ಗಗನಯಾನದಲ್ಲಿ ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆಯೇ ಅನ್ನೋದು ಖಾತ್ರಿಯಾಗಲಿದೆ. ಇದು ಗಗನಯಾತ್ರಿಗಳ ಸುರಕ್ಷತೆಯನ್ನ ಖಚಿತಪಡಿಸುತ್ತದೆ. ಅಲ್ಲದೆ ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.  ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಸಿಗುತ್ತದೆ. ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದು ಖಾತ್ರಿ ಪಡಿಸಿಕೊಳ್ಳುವುದರಿಂದ, ಯೋಜನೆಯ ಯಶಸ್ಸು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಇಸ್ರೋ ತನ್ನ ಮಾನವಸಹಿತ ಗಗನಯಾನ ಬಾಹ್ಯಾಕಾಶ ಮಿಷನ್​ನ ಪರೀಕ್ಷೆ ನಡೆಸುತ್ತಿದೆ.

ಒಟ್ಟಿನಲ್ಲಿ ಗಗನಯಾನ ಮಿಷನ್ 3 ರಿಂದ 7 ದಿನಗಳ ವರೆಗಿನ ಕಡಿಮೆ ಅವಧಿಯ ಮೊದಲ ಬಾಹ್ಯಾಕಾಶಯಾನ ಯೋಜನೆ ಆಗಿದೆ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2040 ರ ಒಳಗೆ ಸ್ಪೇಸ್ ಸ್ಟೇಷನ್ ನಿರ್ಮಿಸಲು ಮತ್ತು ಮಾನವನನ್ನು ಚಂದ್ರನ ಮೇಲೆ ಇಳಿಸುವ ಕುರಿತಾಗಿ ಇಸ್ರೋ ಸಂಸ್ಥೆಗೆ ನಿರ್ದೇಶನ ನಿಡಿದ್ದಾರೆ.  ಹಾಗಾಗಿ ಭಾರತದ ಮುಂದಿನ ಎಲ್ಲಾ ಬಾಹ್ಯಾಕಾಶ ಯೋಜನೆಗಳಿಗೆ ಇದೂ ದೊಡ್ಡ ಮೈಲಿಗಲ್ಲು ಆಗುವುದರಿಂದ ಗಗನಯಾನ ಮಿಷನ್ ಅತ್ಯಂತ ಮಹತ್ವದ್ದಾಗಲಿದೆ.

Shantha Kumari