ಭಾರತದ ಬೆಂಬಲಕ್ಕೆ ನಿಂತ 5 ರಾಷ್ಟ್ರಗಳು – ಚೀನಾ ಉದ್ಧಟತನಕ್ಕೆ ಏಷ್ಯಾ ರಾಷ್ಟ್ರಗಳ ವಿರೋಧ!
ಚೀನಾ ತನ್ನ ವಿಸ್ತರಣಾವಾದದ ಹಪಾಹಪಿಯನ್ನು ಪ್ರದರ್ಶಿಸುತ್ತಲೇ ಇದೆ. ಚೀನಾ ಹೊಸದಾಗಿ ರಿಲೀಸ್ ಮಾಡಿರುವ ಮ್ಯಾಪ್ನಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲಪ್ರದೇಶ ಮತ್ತು ಅಕ್ಸಾಯ್ ಚಿನ್ನನ್ನ ತನ್ನೊಳಗೆ ಸೇರಿಕೊಂಡುಬಿಟ್ಟಿದೆ. ಚೀನಾದ ಈ ನಡೆಯನ್ನು ವಿರೋಧಿಸಿದ್ದ ಭಾರತದ ನಿಲುವಿಗೆ ಈಗ ಏಷ್ಯಾದ ಐದು ಪ್ರಮುಖ ರಾಷ್ಟ್ರಗಳು ಬೆಂಬಲ ಸೂಚಿಸಿವೆ.
ಇತ್ತೀಚಿಗೆ ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್ ಚಿನ್ ಸೇರಿದಂತೆ ಕೆಲವೊಂದು ಭಾಗಗಳನ್ನು ಸೇರಿಸಿ ಹೊಸ ನಕ್ಷೆ ಬಿಡುಗಡೆ ಮಾಡಿದ್ದ ಚೀನಾ ನಿಲುವಿಗೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಚೀನಾದ ನಿರ್ಧಾರ ವಿರೋಧಿಸಿದ್ದ ಭಾರತದ ನಿಲುವಿಗೆ ವಿಯೆಟ್ನಾಂ, ತೈವಾನ್, ಮಲೇಷ್ಯಾ, ಫಿಲಿಪ್ಪೀನ್ಸ್ ಮತ್ತು ಬ್ರೂನೀ ದೇಶಗಳು ಬೆಂಬಲ ನೀಡಿವೆ ಎಂದು ವರದಿಯಾಗಿದೆ.
ಚೀನಾದ ನಡೆಯ ಬಗ್ಗೆ ವಿಯಾಟ್ನಾಂ ಪ್ರತಿಕ್ರಿಯಿಸಿದೆ. ಚೀನಾ ಬಿಡುಗಡೆ ಮಾಡಿರುವ ನಕ್ಷೆ ದಕ್ಷಿಣ ಚೀನಾ ಸಮುದ್ರದ ಮೇಲಿನ ಇತರೆ ದ್ವೀಪ ಪ್ರದೇಶಗಳ ಸಾರ್ವಭೌಮತೆಯ ಉಲ್ಲಂಘನೆಯಾಗಲಿದೆ. ಜತೆಗೆ ಸಮುದ್ರದ ಗಡಿ ನಿಯಮ ಉಲ್ಲಂಘನೆ ಎಂದು ಆರೋಪಿಸಿದೆ. ಪಶ್ಚಿಮ ಫಿಲಿಪ್ಪೀನ್ ಸಮುದ್ರದ ಭಾಗಗಳನ್ನು ಚೀನಾ ತನ್ನ ಹೊಸ ನಕಾಶೆಯಲ್ಲಿ ತನ್ನದು ಎಂದು ಬಿಂಬಿಸಿಕೊಂಡಿದೆ.
ಭಾರತದ ವಿರೋಧಕ್ಕೆ ಸಹಮತ ವ್ಯಕ್ತಪಡಿಸಿರುವ ಫಿಲಿಫೈನ್ಸ್, ಮಲೇಷ್ಯಾ, ತೈವಾನ್ ಸರಕಾರಗಳು, ಅಂತಾರಾಷ್ಟ್ರೀಯ ಗಡಿ ನಿಯಮಗಳಿಗೆ ವಿರುದ್ಧವಾಗಿ ಚೀನಾ ವರ್ತಿಸುತ್ತಿದೆ. ನೆರೆ ರಾಷ್ಟ್ರಗಳ ಭೂಮಿಯನ್ನು ಅತಿಕ್ರಮಿತಿ ಇತರೆ ದೇಶದ ಸಾರ್ವಭೌಮ ನೀತಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿವೆ.
ಚೀನಾದ ಪ್ರತಿಪಾದನೆಗಳಿಗೆ ಯಾವ ಆಧಾರವೂ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಚೀನಾದ ‘ಸ್ಟ್ಯಾಂಡರ್ಡ್’ ನಕ್ಷೆಯನ್ನು ತಿರಸ್ಕರಿಸಿದೆ. “ಅಸಂಬದ್ಧ ಪ್ರತಿಪಾದನೆಗಳನ್ನು ಮಾಡುವುದರಿಂದ ಮಾತ್ರವೇ ಬೇರೆ ವ್ಯಕ್ತಿಗಳ ಜಾಗವು ನಿಮ್ಮದಾಗುವುದಿಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಚೀನಾಕ್ಕೆ ಚಾಟಿ ಬೀಸಿದ್ದರು.
ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಆಗಸ್ಟ್ 28ರಂದು ವಿವಾದಾತ್ಮಕ ನಕ್ಷೆ ಬಿಡುಗಡೆ ಮಾಡಿತ್ತು. ದಕ್ಷಿಣ ಚೀನಾ ಸಮುದ್ರದವರೆಗೂ ಚೀನಾದ ಗಡಿ ಇದೆ ಎಂದು ಅದು ತೋರಿಸಿದೆ. ಭಾರತದ ಜತೆಗಿನ ತನ್ನ ದಕ್ಷಿಣದ ಗಡಿಯಲ್ಲಿ ಅರುಣಾಚಲ ಪ್ರದೇಶ, ದೋಕ್ಲಂ ಪ್ರಸ್ಥಭೂಮಿಯನ್ನು ಚೀನಾದ ಗಡಿಗಳ ಒಳಗೆ ಚಿತ್ರಿಸಿಕೊಂಡಿದೆ. ಪಶ್ಚಿಮದಲ್ಲಿ ಅಕ್ಸಾಯ್ ಚಿನ್ ಅನ್ನೂ ತನ್ನದೇ ಎಂದು ತೋರಿಸಿದೆ.
ಚೀನಾದ ಈಶಾನ್ಯ ಮೂಲೆಯು ರಷ್ಯಾ ಜತೆ ಗಡಿ ಹಂಚಿಕೊಂಡಿದೆ. ಇಲ್ಲಿ ಅಮೂರ್ ಮತ್ತು ಉಸ್ಸುರಿ ನದಿಗಳ ಸಂಗಮಗೊಳ್ಳುವ ಜಾಗದಲ್ಲಿ ಇರುವ ಬೊಲ್ಷೊಯ್ ಉಸ್ಸುರಿಯಸ್ಕಿ ದ್ವೀಪವನ್ನು 20 ವರ್ಷಗಳ ಹಿಂದೆಯೇ ವಿಭಜಿಸುವ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದವು. ಆದರೂ ಈಗ ಚೀನಾ ಈ ದ್ವೀಪವನ್ನು ತನ್ನ ನಕ್ಷೆಯಲ್ಲಿ ಸೇರಿಸಿಕೊಂಡಿದೆ.
ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಚರ್ಚೆ ಇನ್ನೂ ತಾಜಾ ಇರುವಾಗ, ಇಂಡೋನೇಷ್ಯಾದಲ್ಲಿ ಏಸಿಯಾನ್ ಶೃಂಗ ಹಾಗೂ ಭಾರತದಲ್ಲಿ ಜಿ20 ಶೃಂಗ ನಡೆಯುವ ಕೊಂಚ ಮುಂಚೆಯ ಸೂಕ್ತ ಸಮಯ ನೋಡಿ ಚೀನಾ ಈ ನಕ್ಷೆ ಬಿಡುಗಡೆ ಮಾಡಿದೆ. ಚೀನಾ ಜತೆ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ವಿವಾದ ಹೊಂದಿರುವ ಬಹುತೇಕ ದೇಶಗಳು ಏಸಿಯಾನ್ ಸದಸ್ಯರಾಗಿವೆ.