ICMR ವೆಬ್ ಸೈಟ್ ಮೇಲೆ ಸೈಬರ್ ದಾಳಿ –ಚೀನಾ ಕೈವಾಡ?

ICMR ವೆಬ್ ಸೈಟ್ ಮೇಲೆ ಸೈಬರ್ ದಾಳಿ –ಚೀನಾ ಕೈವಾಡ?

ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸರ್ವರ್ ಅನ್ನು 6,000 ಕ್ಕೂ ಹೆಚ್ಚು ಬಾರಿ ಹ್ಯಾಕ್ ಮಾಡಲು ಯತ್ನ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಈ ಕುತಂತ್ರದ ಹಿಂದೆ ಚೀನಾ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ನ. 30 ರಂದು ಏಮ್ಸ್ ವೆಬ್ ಸೈಟ್ ಮೇಲೆ ಸೈಬರ್ ದಾಳಿ ನಡೆದಿತ್ತು. ಇದಾದ 24 ಗಂಟೆಗಳ ಅವಧಿಯಲ್ಲಿ ಐಸಿಎಂಆರ್ ವೆಬ್ ಸೈಟ್ ಅನ್ನು ಸುಮಾರು 6,000 ಬಾರಿ ಹ್ಯಾಕ್ ಮಾಡುವ ಯತ್ನ ನಡೆಸಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಆಪತ್ತು ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಾಪದ ವೇಳೆ ಫೇಸ್ ಬುಕ್ ಲೈವ್ – ಶಾಸಕನನ್ನು ಅಮಾನತುಗೊಳಿಸಿದ ಸ್ಪೀಕರ್

ಐಸಿಎಂಆರ್ ವೆಬ್ ಮೇಲೆ ಹಾಂಕಾಂಗ್ ಮೂಲದ ಹ್ಯಾಕರ್ ಗಳಿಂದ ದಾಳಿ ನಡೆದಿದೆ. ‘ಐಸಿಎಂಆರ್’ ವೈಬ್ ಸೈಟ್ ಸುರಕ್ಷಿತವಾಗಿದೆ. ರಾಷ್ಟ್ರೀಯ ತಂತ್ರಜ್ಞಾನ ಮಾಹಿತಿ ಕೇಂದ್ರ ಈ ವೆಬ್ ಸೈಟ್ ನಿರ್ವಹಣೆ ಮಾಡುತ್ತಿದೆ. ಎನ್ಐಸಿ ಸೈಬರ್ ದಾಳಿಯ ಕುರಿತು ಮಾಹಿತಿ ನೀಡಿದ್ದು, ಹ್ಯಾಕಿಂಗ್ ಯತ್ನ ತಡೆದಿರುವುದಾಗಿ ಸಂದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ ಲೆಫ್ಟಿನೆಂಟ್ ಜನರಲ್ ರಾಜೇಶ್ ಪಂತ್ ನೇತೃತ್ವದ ಸಿಇಆರ್ ಟಿ, ಎನ್ ಐಸಿ, ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ತಜ್ಞರು ದೆಹಲಿಯ ಏಮ್ಸ್ ಸರ್ವರ್ ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಇತ್ತೀಚಿನ ಸೈಬರ್ ದಾಳಿಯಲ್ಲಿ ಏಮ್ಸ್ ನ 100 ಭೌತಿಕ ಮತ್ತು ವರ್ಚುವಲ್ ಸರ್ವರ್ ಗಳಲ್ಲಿ 5 ಕರಪ್ಟ್ ಆಗಿದೆ. ಅಲ್ಲದೇ ಈ ಸೈಬರ್ ದಾಳಿ ಹಿಂದೆ ಚೀನಾ ಕೈವಾಡವಿದೆ ಎಂದು ಶಂಕೆ ತಜ್ಞರು ವ್ಯಕ್ತಪಡಿಸಿದ್ದಾರೆ.

ದೆಹಲಿಯ ಮತ್ತೊಂದು ಆಸ್ಪತ್ರೆಯ ವೆಬ್ ಸೈಟ್ ಮೇಲೂ ಸೈಬರ್ ದಾಳಿ ನಡೆದಿರುವ ಕುರಿತು ವರದಿಯಾಗಿದೆ. ಆದರೆ ಇದನ್ನು ಅಧಿಕಾರಿಗಳು ಅಲ್ಲಗೆಳೆದಿದ್ದಾರೆ. ಅಲ್ಲದೇ ಚೀನಾ ಕೈವಾಡದ ಶಂಕೆ ಇಲ್ಲ. ಇದೆಲ್ಲಾ ವದಂತಿಯಷ್ಟೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ.

suddiyaana