15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ – ಯಾರ್ಯಾರಿಗೆ ಸಿಗಲಿದೆ ಇದರ ಲಾಭ?
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಲ್ಲೇ ಎಲ್ಲ ವರ್ಗದ ವಿದ್ಯುತ್ ಬಳಕೆದಾರರಿಗೆ ಕರ್ನಾಟಕ ರಾಜ್ಯ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗವು ಗುಡ್ ನ್ಯೂಸ್ ನೀಡಿದೆ. ಗೃಹ ಬಳಕೆಯ ವಿದ್ಯುತ್ ಬಳಕೆಯ ದರ ಇಳಿಕೆ ಮಾಡಲಾಗಿದೆ. ಈ ಮೂಲಕ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ.
ಇದನ್ನೂ ಓದಿ: ಭೀಕರ ಚಂಡಮಾರುತಕ್ಕೆ 5 ಜನರು ಸಾವು – 500 ಕ್ಕೂ ಅಧಿಕ ಮಂದಿಗೆ ಗಾಯ, ಪ್ರಧಾನಿ ಮೋದಿ ಸಂತಾಪ!
ಗೃಹ ಬಳಕೆಯಲ್ಲಿ 100 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್ಗೆ 1.10 ರೂ. ಕಡಿಮೆ ಮಾಡಲಾಗಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಸೋಮವಾರದಿಂದಲೇ (ಏಪ್ರಿಲ್ 01) ಜಾರಿಯಾಗಲಿದೆ. ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್ ದರ ನಿಗದಿ ಮಾಡಿದೆ.
ಮೊದಲು 100ಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ 7 ರೂ. ಬದಲಿಗೆ ಪ್ರತಿ ಯುನಿಟ್ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗಿದೆ. ಇನ್ನು 100 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರು ಈಗಾಗಲೆ ಪ್ರತಿ ಯುನಿಟ್ಗೆ 4.75 ರೂ. ಪಾವತಿಸುತ್ತಿದ್ದಾರೆ. ಆದರೆ ಸರ್ಕಾರ 200 ಯುನಿಟ್ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುವುದರಿಂದ ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ. ಗ್ರಾಹಕರಿಗೆ ದರ ಕಡಿತದ ಲಾಭ ಏಪ್ರಿಲ್ನಲ್ಲಿ ಬರುವ ಬಿಲ್ನಲ್ಲಿ ಬರುವುದಿಲ್ಲ. ಮೇ ತಿಂಗಳಿನಲ್ಲಿ ಬರುವ ಬಿಲ್ನಲ್ಲಿ ಈ ದರ ಅನ್ವಯವಾಗಲಿದೆ.