100 ವರ್ಷಗಳ ನಂತರ ಈ ನದಿಯಲ್ಲಿ ಈಜಲು ಸಿಕ್ಕಿತು ಅನುಮತಿ – ಸೀನ್ ನದಿಯಲ್ಲಿ ಇನ್ನು ಸ್ವಿಮ್ಮಿಂಗ್ ಮಜಾ..!

100 ವರ್ಷಗಳ ನಂತರ ಈ ನದಿಯಲ್ಲಿ ಈಜಲು ಸಿಕ್ಕಿತು ಅನುಮತಿ – ಸೀನ್ ನದಿಯಲ್ಲಿ ಇನ್ನು ಸ್ವಿಮ್ಮಿಂಗ್ ಮಜಾ..!

ಅಲ್ಲಿನ ಜನತೆ ಕಾದಿದ್ದು ಹತ್ತಲ್ಲ, ಐವತ್ತಲ್ಲ.. ನೂರು ವರ್ಷಗಳಿಂದ. ಆ ನದಿಯಲ್ಲಿ ಈಜಾಡಬೇಕೆಂದು ಕನಸು ಕಂಡವರು ಅದೆಷ್ಟೋ ಮಂದಿ. ಆದರೆ, ಆ ಅವಕಾಶ ಸಿಗಲೇ ಇಲ್ಲ. ಕೊನೆಗೂ ಬರೋಬ್ಬರಿ ನೂರು ವರ್ಷಗಳ ನಂತರ ನದಿಯಲ್ಲಿ ಈಜಾಡುವುದಕ್ಕೆ ಅವಕಾಶ ಸಿಕ್ಕಿದೆ. ಮೊದಲು ಸಾರ್ವಜನಿಕರಿಗೆ ಅವಕಾಶ ಸಿಗುವುದು ಮಾತ್ರ ಡೌಟು. ಯಾಕೆಂದರೆ, ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧರಾಗಲು ಈಜುಗಾರರಿಗೆ ಈ ನದಿಯಲ್ಲಿ ಈಜಲು ಮೊದಲು ಅವಕಾಶ ನೀಡಲಾಗುತ್ತಿದೆ.

ಇದನ್ನೂ ಓದಿ: ಈ ಜಾಗ ಎಷ್ಟು ಸುಂದರವೋ ಅಷ್ಟೇ ಭಯಾನಕ…! “ರೂಪಕುಂಡ” ರಹಸ್ಯವೇನು ಗೊತ್ತಾ…?

ನೂರು ವರ್ಷಗಳಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಹರಿಯುವ ಸೀನ್ ನದಿಯಲ್ಲಿ ಈಜಾಡುವುದಕ್ಕೆ ನಿಷೇಧವಿತ್ತು. ಕೊನೆಗೂ ಈ ನಿಷೇಧ ಈಗ ತೆರವುಗೊಂಡಿದೆ. 1923ರಲ್ಲಿ ಕಳಪೆ ನೀರಿನ ಗುಣಮಟ್ಟದ ಕಾರಣದಿಂದಾಗಿ ಸಾರ್ವಜನಿಕರಿಗೆ ಈಜಾಡುವುದಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಪ್ಯಾರಿಸ್ ಮೇಯರ್ ಅನ್ನಿ ಹಿಡಾಲ್ಗೊ ಅವರು ಈ ನಿಷೇಧವನ್ನು 2025 ರಲ್ಲಿ ಸಂಪೂರ್ಣವಾಗಿ ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ. ಆದರೆ, ಇದಕ್ಕೂ ಮೊದಲು, ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧರಾಗಲು ಈಜುಗಾರರಿಗೆ ಇದೇ ನದಿಯಲ್ಲಿ ಈಜಲು ಅವಕಾಶ ನೀಡಲಾಗುತ್ತದೆ.

ನದಿ ನೀರಿನ ಗುಣಮಟ್ಟವನ್ನು ಸುಧಾರಣೆ ಮಾಡಲು ಮತ್ತು ಪ್ಯಾರಿಸ್ ನಗರದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಪ್ಯಾರಿಸ್ ಮಹಾನಗರ ಪಾಲಿಕೆ ಈವರೆಗೂ 1.54 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದೆ. ಸೀನ್ ನದಿಯಲ್ಲಿ ಈಜಲು ಮೂರು ಪ್ರದೇಶಗಳಲ್ಲಿ ಮಾತ್ರವೇ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೇಯರ್ ತಿಳಿಸಿದ್ದಾರೆ. ಇನ್ನು ಕೆಲವೆಡೆ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ. ಸೀನ್ ನದಿಗೆ ಎಕ್ಸಲೆಂಟ್ ಕೆಟಗರಿ ವಾಟರ್ ಎಂಬ ಪ್ರಮಾಣಪತ್ರವೂ ಸಿಕ್ಕಿದೆ. ಆದ್ದರಿಂದ, ಈಗ ಇಲ್ಲಿ ಈಜಲು ಜನರು ಯಾವುದೇ ಸಮಸ್ಯೆ ಎದುರಿಸ ಬೇಕಿಲ್ಲ ಎನ್ನಲಾಗಿದೆ. ಒಲಿಂಪಿಕ್ ಕ್ರೀಡಾಕೂಟದ ಸಮಯದಲ್ಲಿ ಸೀನ್ ನದಿಯಲ್ಲಿ ಕೆಲವು ಕಾರ್ಯಕ್ರಮಗಳು ನಡೆಯಲಿವೆ. 123 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ನದಿಯಲ್ಲಿ ಯಾವುದೇ ರೀತಿಯ ಬಹು ರಾಷ್ಟ್ರೀಯ ಸ್ವಿಮ್ಮಿಂಗ್ ಇವೆಂಟ್‌ಗಳು ಕೂಡಾ ನಡೆಯಲಿದೆ. ಮಾಧ್ಯಮದೊಂದಿಗಿನ ಸಂವಾದದಲ್ಲಿ ಮಾತನಾಡಿರುವ ಮೇಯರ್ ಅನ್ನಿ, ಸೀನ್ ನದಿಯಲ್ಲಿ ಜನರು ಮತ್ತೆ ಮೋಜು ಮಾಡುವುದನ್ನು ನೋಡುವುದು ನಮ್ಮ ಕನಸಾಗಿತ್ತು. ಇದಕ್ಕಾಗಿ ಸಾಕಷ್ಟು, ಶ್ರಮ, ಹಣ ಖರ್ಚು ಮಾಡಿದ್ದೇವೆ. ಆದರೆ, ಈಗ ಕನಸು ನನಸಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಕನಸನ್ನು ನನಸಾಗಿಸಿಕೊಂಡಿದ್ದೇವೆ. ಒಲಿಂಪಿಕ್‌ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಉಳಿದಿದ್ದು, ಅದಕ್ಕೂ ಮೊದಲು ಉಳಿದ ಕಾರ್ಯಗಳನ್ನೂ ಕೂಡ ಮುಗಿಸಲಾಗಿವುದು ಎಂದಿದ್ದಾರೆ.

suddiyaana