ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ – ಹಂದಿಗಳನ್ನು ಕೊಲ್ಲಲು ಜಿಲ್ಲಾಡಳಿತ ಆದೇಶ!
ಕೇರಳ: ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಅಲ್ಲಿನ ಜನರು ಆತಂಕದಿಂದ ದಿನ ಕಳೆಯುವಂತೆ ಆಗಿದೆ. ಆಫ್ರಿಕನ್ ಹಂದಿ ಜ್ವರ ಪತ್ತೆಯಾಗುತ್ತಿದ್ದಂತೆ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಹಂದಿ ಜ್ವರ ಪತ್ತೆಯಾದ ಹಿನ್ನೆಲೆ ಕಣಿಚಾರ್ ಪ್ರದೇಶದಲ್ಲಿನ ಎರಡು ಫಾರ್ಮ್ ಗಳಲ್ಲಿ ಇರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಆಫ್ರಿಕನ್ ಹಂದಿ ಜ್ವರ ಮಲೆಯಂಪಾಡಿಯಲ್ಲಿರುವ ಖಾಸಗಿ ಫಾರ್ಮ್ ಗಳಲ್ಲಿ ಪತ್ತೆಯಾಗಿರುವುದಾಗಿ ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಹಿನ್ನೆಲೆ ಹಂದಿ ಸಾಕಾಣೆ ಕೇಂದ್ರದ ಒಂದು ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೋಂಕು ಪತ್ತೆಯಾದ ಸ್ಥಳವೆಂದು ಘೋಷಿಸಲಾಗಿದೆ. ಮತ್ತು 10 ಕಿಲೋ ಮೀಟರ್ ವ್ಯಾಪ್ತಿವರೆಗಿನ ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಮಳೆಯ ಆರ್ಭಟ – ರಸ್ತೆ ನಿರ್ಮಾಣ ನಿಯಮದಲ್ಲಿ ಬದಲಾವಣೆ ಮಾಡಿದ ಸರ್ಕಾರ
ಸುಮಾರು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಎರಡು ಫಾರ್ಮ್ ನಲ್ಲಿರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಶಿಷ್ಟಾಚಾರದ ನಿಯಮದಂತೆ ಆ ಹಂದಿಗಳನ್ನು ಹೂಳಲು ಸೂಚನೆ ನೀಡಲಾಗಿದೆ. ಈ ಪ್ರದೇಶದಲ್ಲಿನ ಹಂದಿಗಳ ಮಾರಾಟ ಮತ್ತು ಸಾಗಾಟವನ್ನು ಮೂರು ತಿಂಗಳ ಕಾಲದವರೆಗೆ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಫಾರ್ಮ್ ಗಳಲ್ಲಿ ಸೋಂಕಿಗೆ ಒಳಗಾಗಿರುವ ಹಂದಿಗಳನ್ನು ಬೇರೆ ಫಾರ್ಮ್ ಗಳಿಂದ ಖರೀದಿಸಲಾಗಿತ್ತೇ ಎಂಬ ಬಗ್ಗೆ ಶೀಘ್ರವೇ ವರದಿ ಸಲ್ಲಿಸುವಂತೆ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.