ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 12  ಗ್ರಾಮಗಳು ಸರ್ವ ನಾಶ, ಬರೋಬ್ಬರಿ 2400 ಮಂದಿ ಸಾವು

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 12  ಗ್ರಾಮಗಳು ಸರ್ವ ನಾಶ, ಬರೋಬ್ಬರಿ 2400 ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 2400ಕ್ಕೆ ಏರಿಕೆಯಾಗಿದೆ. 9000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.

ಭಾನುವಾರ ಈ ದುರಂತ ಸಂಭವಿಸಿದ್ದು, ಭೂಕಂಪದಿಂದ ಸುಮಾರು 12 ಗ್ರಾಮಗಳು ಸರ್ವ ನಾಶವಾಗಿವೆ. ಅಲ್ಲಿನ ಸಾವಿರಾರು ಮನೆಗಳು ನೆಲಸಮವಾಗಿವೆ. ನೂರಾರು ಜನ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗೆ ಸತತ ಪ್ರಯತ್ನ ನಡೆಯುತ್ತಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತೀವ್ರಗೊಂಡ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ – ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 1,100ಕ್ಕೆ ಏರಿಕೆ!

ಭೂಕಂಪದ ಕೇಂದ್ರ ಬಿಂದು ಹೆರಾತ್ ನಗರದ ವಾಯುವ್ಯಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ನಗರದಲ್ಲಿ ಕನಿಷ್ಠ ಐದು ಪ್ರಬಲ ಕಂಪನಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ. ಅಲ್ಲದೇ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಹೆರಾತ್‍ನಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿದ್ದು, ಇದರಿಂದ ಭೂಕಂಪ ಪೀಡಿತ ಪ್ರದೇಶಗಳಿಂದ ವಿವರಗಳನ್ನು ಪಡೆಯುವುದು ಕಷ್ಟವಾಗಿದೆ. ಇದರಿಂದಾಗಿಯೂ ಸಹ ಪರಿಹಾರ ಕಾರ್ಯದಲ್ಲಿ ವಿಳಂಬವಾಗುತ್ತಿದೆ. ಇದರ ನಡುವೆಯೂ ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ ಸರ್ಕಾರ ಅಲ್ಲಿನ ಶ್ರೀಮಂತರು, ಹಾನಿಗೊಳಗಾದ ಜನರ ನೆರವಿಗೆ ಕೈಜೋಡಿಸಬೇಕು ಎಂದು ಕೇಳಿಕೊಂಡಿದೆ.

Shwetha M