ವಿಶ್ವಕಪ್ ನಲ್ಲಿ ಜಗತ್ತನ್ನೇ ಗೆದ್ದ AFG | NZ, AUSಗೂ ನೀರು ಕುಡಿಸಿದ್ದೇಗೆ?
ಆಫ್ಘನ್ ಯಶಸ್ಸಿನ ಹಿಂದಿದೆ ಭಾರತ

ವಿಶ್ವಕಪ್ ನಲ್ಲಿ ಜಗತ್ತನ್ನೇ ಗೆದ್ದ AFG | NZ, AUSಗೂ ನೀರು ಕುಡಿಸಿದ್ದೇಗೆ?ಆಫ್ಘನ್ ಯಶಸ್ಸಿನ ಹಿಂದಿದೆ ಭಾರತ

ಸಾಧಿಸೋ ಛಲ ಇದ್ರೆ ಏನು ಬೇಕಾದ್ರೂ ಮಾಡ್ಬೋದು ಅನ್ನೋದನ್ನ ಈ ಬಾರಿ ಅಫ್ಘಾನಿಸ್ತಾನದ ಆಟಗಾರರು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇವ್ರಿಂದ ಏನೂ ಆಗಲ್ಲ ಅಂತಾ ಆಡಿಕೊಂಡವರೇ ಇಂದು ಕೊಂಡಾಡುತ್ತಿದ್ದಾರೆ. ನಿಂದಿಸಿದವರೇ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವಮಾನ ಮಾಡಿದ್ದವ್ರೇ ಸನ್ಮಾನ ಮಾಡ್ತಿದ್ದಾರೆ. ಮದ್ದು ಗುಂಡುಗಳ ಸದ್ದಿನ ನಡುವೆ ನೆತ್ತರು ಚಿಮ್ಮುತ್ತಿದ್ದ ತಾಲಿಬಾನಿಗಳ ನೆಲದಲ್ಲಿ ಈಗ ಕ್ರಿಕೆಟ್ ಅನ್ನೋ ಕ್ರೀಡೆ ಖುಷಿಯ ಸಿಹಿ ಹಂಚಿದೆ. ಪಟಾಕಿಗಳ ಸದ್ದು ಮುಗಿಲು ಮುಟ್ಟಿದೆ. ಬೀದಿ ಬೀದಿಯಲ್ಲೂ ಬಣ್ಣದೋಕುಳಿಯ ಸಂಭ್ರಮವೇ ತುಂಬಿದೆ. ಆಫ್ಘಾನಿಸ್ತಾನ ತಂಡವನ್ನ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ಕೊಂಡಿದ್ದ ಘಟಾನುಘಟಿ ತಂಡಗಳಿಗೆ ಈ ಟೀಂ ನೀರು ಕುಡಿಸಿದೆ. ಸೋಲಿನ ಗುದ್ದು ಕೊಟ್ಟು ಟೂರ್ನಿಯಿಂದಲೇ ಹೊರದಬ್ಬಿದೆ. ಟಿ20 ವಿಶ್ವಕಪ್‌ನಲ್ಲಿ ಸೂಪರ್-8ನ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ರಶೀದ್ ಖಾನ್ ಬಳಗ, ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಆ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವಿಗೆ ಅಫ್ಘನ್ ಹೋರಾಡಿದ ರೀತಿ ಮೈ ಜುಮ್​ ಎನಿಸುವಂತಿದೆ.

ಇದನ್ನೂ ಓದಿ: ಸೆಮೀಸ್ ಫೈಟ್ ​ಗೆ ICC ಹೊಸ ರೂಲ್ಸ್ – IND Vs ENG ಪಂದ್ಯ ವಿವಾದವಾಗಿದ್ದೇಕೆ?

ಛಲಗಾರ ಆಫ್ಘನ್ನರು!

ಐಸಿಸಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್​ಗೇರಿದೆ. ಕೆರಿಬಿಯನ್ ದ್ವೀಪದ ಕಿಂಗ್ಸ್​ಟೌನ್​ನಲ್ಲಿ ಬಾಂಗ್ಲಾ ವಿರುದ್ಧ ಅಫ್ಘಾನಿಸ್ತಾನ್ ತಂಡ ವಿಜಯ ಸಾಧಿಸುತ್ತಿದ್ದಂತೆ, ಅತ್ತ ತಾಲಿಬಾನಿಗಳ ನಾಡಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಪ್ರಮುಖ ನಗರಗಳಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಬಣ್ಣದೋಕುಳಿಯೊಂದಿಗೆ ಸಂಭ್ರಮಿಸಿದ್ದಾರೆ. ಒಂದು ಕಾಲದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ವಿಶ್ವ ಕ್ರಿಕೆಟ್‌ನಲ್ಲಿ ಚಿಕ್ಕ ತಂಡವಾಗಿ ಅಂದ್ರೆ ಒಂಥರಾ ಗಲ್ಲಿ ಕ್ರಿಕೆಟ್ ಟೀಮ್​ನಂತೆ ನೋಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಕಂಪ್ಲೀಟ್ ಚೇಂಜ್. ಹಂತಹಂತವಾಗಿ ಆಟದಲ್ಲಿ ಯಶಸ್ವಿಯಾದ ಆಟಗಾರರು ಇದೀಗ ದೊಡ್ಡ ತಂಡಗಳಿಗೆ ಶಾಕ್ ನೀಡುವ ಮಟ್ಟಕ್ಕೆ ಏರಿದ್ದಾರೆ. ಪ್ರಸ್ತುತ ಟಿ20 ವಿಶ್ವಕಪ್ ಫಲಿತಾಂಶವೇ ಇದಕ್ಕೆ ಉದಾಹರಣೆ. ಲೀಗ್ ಹಂತದ ಪಂದ್ಯದ ವೇಳೆ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ಆಘಾತ ನೀಡಿತ್ತು. ಮತ್ತೊಂದ್ಕಡೆ ವಿಶ್ವ ಕ್ರಿಕೆಟ್​ನ ಬಲಿಷ್ಠ ತಂಡಗಳ ಪೈಕಿ ಆಸ್ಟ್ರೇಲಿಯಾ ಕೂಡ ಒಂದು. ಆದ್ರೆ ಸೂಪರ್-8ನಲ್ಲಿ ಆಸ್ಟ್ರೇಲಿಯಾಗೆ ಮೊದಲ​ ಆಘಾತ ನೀಡಿದ್ದೇ ಈ ಆಫ್ಘನ್ ತಂಡ. ಕೊನೇ ಪಂದ್ಯದಲ್ಲಿ ಬಾಂಗ್ಲಾಗೆ ಮಣ್ಣು ಮುಕ್ಕಿಸುವುದರೊಂದಿಗೆ ಅಫ್ಘಾನಿಸ್ತಾನ ಆಸಿಸ್​ ತಂಡವನ್ನ ವಿಶ್ವಕಪ್​ನಿಂದ ಕಿಕ್​ಔಟ್​ ಮಾಡಿತು. ಸದ್ಯ ಸೆಮೀಸ್​ಗೆ ಎಂಟ್ರಿ ನೀಡಿರುವ ಅಫ್ಘನ್ ಮುಂದಿನ ಟಾರ್ಗೆಟ್​, ಬಲಿಷ್ಠ ಸೌತ್ ಆಫ್ರಿಕಾ. ಈ ಸೆಮಿಫೈನಲ್​ನಲ್ಲಿ ಚೋಕರ್ಸ್ ಹಣೆಪಟ್ಟಿಯ ಸೌತ್ ಆಫ್ರಿಕಾವನ್ನೇ ಮಣಿಸಿ ಫೈನಲ್​​ಗೇರಿದ್ರು ಅಚ್ಚರಿ ಪಡ್ಬೇಕಿಲ್ಲ.  ಅಲ್ದೇ ಅಫ್ಘಾನಿಸ್ತಾನ ತಂಡ 2023 ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿತ್ತು. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿತ್ತು. ಪಾಕಿಸ್ಥಾನದೊಂದಿಗೆ ಅಂಕದಲ್ಲಿ ಸಮನಾಗಿದ್ದರೂ ನೆಟ್ ರನ್ ರೇಟ್ ವ್ಯತ್ಯಾಸದಿಂದಾಗಿ ಆರನೇ ಸ್ಥಾನಕ್ಕೆ ಸೀಮಿತವಾಗಿದೆ. ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ಒಂದು ತಂಡದ ಗೆಲುವಿನಲ್ಲಿ ಆನ್​ಫೀಲ್ಡ್​ನಲ್ಲಿ ಆಟಗಾರರ ಆಟ ಎಷ್ಟು ಮುಖ್ಯನೋ ತೆರೆ ಹಿಂದಿನ ತಂತ್ರಗಾರಿಕೆ ಕೂಡ ಅಷ್ಟೇ ಇಂಪಾರ್ಟೆಂಟ್. ಗೇಮ್​​ಪ್ಲಾನ್, ಸ್ಟ್ರಾಟರ್ಜಿ ರೂಪಿಸ್ತಿದ್ದ ಹೆಡ್ ಕೋಚ್ ಜೊನಾಥನ್ ಟ್ರಾಟ್, ಬೌಲಿಂಗ್ ಕನ್ಸಲ್​ಟೆಂಟ್​​ ಡ್ವೇನ್ ಬ್ರಾವೋಗೆ ಈ ಕ್ರೆಡಿಟ್ ಸಲ್ಲಲೇಬೇಕು. ಯಾಕಂದ್ರೆ, ಕ್ರೂಶಿಯಲ್ ಟೈಮ್​ನಲ್ಲಿ ಇವರು ನೀಡ್ತಿದ್ದ ಸಣ್ಣ ಸಣ್ಣ ಸಜೇಷನ್ಸ್, ಆನ್​ಫೀಲ್ಡ್​ನಲ್ಲಿ ಬಿಗ್ ಇಂಪ್ಯಾಕ್ಟ್​ ತಂದು ಕೊಡ್ತು. ಒಂದು ರೀತಿ ಹೆಡ್ ಕೋಚ್ ಜೋನಾಥನ್ ಟ್ರಾಟ್, ಅನ್​ಅಫಿಶಿಯಲ್ ಕ್ಯಾಪ್ಟನ್ ಆಗಿದ್ರು ಅಂದ್ರೂ ತಪ್ಪಾಗಲ್ಲ.

ಇನ್ನು ಆಫ್ಘನ್ ಈ ಯಶಸ್ಸಿನ ಹಿಂದೆ ಭಾರತ ಕೂಡ ಸಾಕಷ್ಟು ಬೆಂಬಲ ನೀಡಿದೆ. ಇದು ಅಫ್ಘಾನಿಸ್ತಾನಕ್ಕೆ ಕ್ರಿಕೆಟ್‌ನಲ್ಲಿ ಬೆಳೆಯಲು ಮತ್ತು ಯಶಸ್ವಿಯಾಗಲು ಕಾರಣವಾಗಿದೆ. ಆಫ್ಘನಿಸ್ತಾನ ಯುದ್ಧ ಮತ್ತು ಭಯೋತ್ಪಾದನೆಯಿಂದ ನರಳುತ್ತಿರೋದು ಇಡೀ ಜಗತ್ತಿಗೇ ಗೊತ್ತಿದೆ. ಇದೇ ಕಾರಣಕ್ಕೆ ಅಫ್ಘಾನಿಸ್ತಾನದ ಅನುಭವಿ ಆಟಗಾರರಾದ ಮೊಹಮ್ಮದ್ ನಬಿ, ಮೊಹಮ್ಮದ್ ಶೆಹಜಾದ್ ಮತ್ತು ಮಾಜಿ ನಾಯಕ ಅಸ್ಗರ್  ಯುದ್ಧದ ಪರಿಸ್ಥಿತಿಗಳಿಂದಾಗಿ ತಮ್ಮ ಮನೆಗಳನ್ನೇ ತೊರೆದಿದ್ರು. ಬಳಿಕ ಪಾಕಿಸ್ತಾನದ ಪೇಶಾವರದ ನಿರಾಶ್ರಿತರ ಶಿಬಿರಗಳಲ್ಲಿ ವಾಸ್ತವ್ಯ ಹೂಡಿದ್ರು. ಯುದ್ಧದಿಂದಾಗಿ ಅಫ್ಘಾನಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದು ಅಸಾಧ್ಯ. ಇದೇ ಕಾರಣಕ್ಕೆ ತರಬೇತಿ ಹಾಗೂ ಪಂದ್ಯಗಳನ್ನು ನಡೆಸಲು ಬೇರೆ ಕಡೆ ಹೋಗಬೇಕಾಯಿತು.  ಇಂಥಾ ಟೈಮಲ್ಲಿ BCCI ಗ್ರೇಟರ್ ನೋಯ್ಡಾದಲ್ಲಿರುವ ಶಾಹಿದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣವನ್ನು ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ತಾತ್ಕಾಲಿಕ ‘ಹೋಮ್ ಗ್ರೌಂಡ್’ ಆಗಿ ಒದಗಿಸಿದೆ. ಹಾಗೇ ಅಭ್ಯಾಸ ಪಂದ್ಯಗಳಿಗೂ ಕೂಡ ಅವಕಾಶ ಮಾಡಿಕೊಟ್ಟಿದೆ. ಹೀಗೆ ಸಿಕ್ಕಿರೋ ಅವಕಾಶವನ್ನ ಸದುಪಯೋಗ ಪಡಿಸಿಕೊಂಡ ಆಫ್ಘನ್ನರು ಕ್ರಿಕೆಟ್​ನಲ್ಲಿ ಒಂದೊಂದೇ ಮೆಟ್ಟಿಲು ಮೇಲೇರುತ್ತಿದ್ದಾರೆ. ಕ್ರಿಕೆಟ್​ ಲೋಕದ ಈ ಸಾಧನೆ ತಾಲಿಬಾನಿಗಳ ನಾಡಲ್ಲಿ ಸಂಭ್ರಮಕ್ಕೆ ಒಂದು ಕಾರಣವಾಗಿದೆ.

Shwetha M