ಕರ್ನಾಟಕದ ತೆರಿಗೆದಾರರ ಹಣದಲ್ಲಿ ತೆಲಂಗಾಣ ಪತ್ರಿಕೆಗಳಿಗೆ ಜಾಹೀರಾತು, ಕಾಂಗ್ರೆಸ್ ಢೋಂಗಿತನ ಕಳಚುತ್ತಿದೆ – ಬಿಜೆಪಿ ಲೇವಡಿ

ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಈ ವೇಳೆ ರಾಜ್ಯದ ದಿನಪತ್ರಿಕೆಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಜಾಹೀರಾತು ಪ್ರಕಟಿಸುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಇಂಥ ಯಾವುದೇ ಜಾಹೀರಾತು ಪ್ರಕಟಿಸಬೇಕಿದ್ದರೆ, ತನ್ನ ಅನುಮತಿ ಕಡ್ಡಾಯ ಎಂದು ಅದು ತಾಕೀತು ಮಾಡಿದೆ. ಇದೇ ವೇಳೆ, ತನ್ನ ತನ್ನ ಅನುಮತಿ ಇಲ್ಲದೆ ಜಾಹೀರಾತು ಪ್ರಕಟಿಸಿದ್ದಕ್ಕೆ ಅದು ಕಿಡಿಕಾರಿದ್ದು, ಕರ್ನಾಟಕ ಮುಖ್ಯ ಕಾರ್ಯದರ್ಶಿಯಿಂದ ಸ್ಪಷ್ಟನೆ ಬಯಸಿದೆ. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರ ವಿರುದ್ದ ಕಿಡಿಕಾರಿದೆ. ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಬೋರ್‌ವೆಲ್ ನಲ್ಲಿ ನೀರಿನ ಬದಲು ಹಾಲು! – ಬಿಳಿ ದ್ರವ ಸಂಗ್ರಹಿಸಲು ಮುಗಿಬಿದ್ದ ಜನ!
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸಿ.ಎಂ ಸಿದ್ದರಾಮಯ್ಯ ತೆಲಂಗಾಣದಲ್ಲಿ ಮತದಾರರಿಗೆ ಅಮಿಷವೊಡ್ಡುವ ಕಾನೂನುಬಾಹಿರ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಚುನಾವಣೆಗೂ ಮುನ್ನಾ ಸುಳ್ಳು ಹೇಳಿಕೆ ನೀಡಲು ತೆರಿಗೆದಾರರ ಹಣದಿಂದ ಹಾಕಲಾದ ಕಾಂಗ್ರೆಸ್ ಜಾಹಿರಾತುಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಕರ್ನಾಟಕಕ್ಕೆ ಅವಮಾನ ಎಂದು ಟೀಕಾ ಪ್ರಹಾರ ನಡೆಸಿದೆ.
ಮತ್ತೊಂದೆಡೆ ಟ್ವೀಟ್ ಮಾಡಿರುವ ಬಿಜೆಪಿ ಹಿರಿಯ ನಾಯಕ ಅರವಿಂದ್ ಬೆಲ್ಲದ್, ಕರ್ನಾಟಕದ ತೆರಿಗೆದಾರರ ಹಣವನ್ನು ತೆಲಂಗಾಣ ಪತ್ರಿಕೆಗಳಿಗೆ ಜಾಹೀರಾತು ನೀಡಲು ಪೋಲು ಮಾಡಿದ ಕರ್ನಾಟಕ ಸರ್ಕಾರಕ್ಕೆ ಚುನಾವಣೆ ಆಯೋಗ ಚಾಟಿ ಏಟು ನೀಡಿದೆ. ಗ್ಯಾರಂಟಿಗಳನ್ನು ನೀಡಲಾಗದವರು ಹೊಗಳುಭಟ್ಟರಂತೆ ತಮ್ಮನ್ನು ತಾವು ಪತ್ರಿಕೆಗಳಲ್ಲಿ ಹೊಗಳಿಸಿಕೊಂಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಕಾಂಗ್ರೆಸ್ ಪಕ್ಷದ ಢೋಂಗಿತನ ಕಳಚುತ್ತಿದೆ ಎಂದು ಟೀಕಿಸಿದ್ದಾರೆ.