‘ಹ್ಯಾಪಿ ಮ್ಯಾರೀಡ್ ಲೈಫ್’ ಎಂದ ಆದಿಲ್ ಖಾನ್ – ರಾಖಿ ಸಾವಂತ್ ಮದುವೆ ಪ್ರಹಸನ ಸುಖಾಂತ್ಯ
ಬಾಲಿವುಡ್ ನಟಿ ರಾಖಿ ಸಾವಂತ್ ಎಲ್ಲೇ ಹೋದರೂ ಮದುವೆ ವಿಚಾರದ್ದೇ ಮಾತು. ಆಹಾ ನನ್ ಮದ್ವೆಯಂತೆ ಎಂದು ಸದಾ ವಿವಾದದಲ್ಲೇ ಇರುವ ನಟಿ ರಾಖಿ ಸಾವಂತ್ ಗೆ ಈಗ ಕೊನೆಗೂ ಮದುವೆಯಾಗಿದೆ. ಮೈಸೂರು ಹುಡುಗ ಆದಿಲ್ ಖಾನ್ ಜೊತೆ ರಾಖಿ ಸಾವಂತ್ ಸುತ್ತಾಟ ಕಂಡವರು ಕೂಡಾ ಇದೆಷ್ಟು ದಿನ ಹೀಗೆ ಮುಂದುವರೆಯುತ್ತೋ ಏನೋ ಅಂತಾ ಗುಸು ಗುಸು ಗಾಸಿಪ್ ಮಾಡ್ತಿದ್ದರು. ಆದರೆ, ರಾಖಿ ಮಾತ್ರ ನಾನು ಆದಿಲ್ ಪ್ರೇಯಸಿ ಮಾತ್ರ ಅಲ್ಲ. ನಾವಿಬ್ಬರೂ ಮದುವೆಯಾಗಿದ್ದೇವೆ ಅಂತಾ ಟಾಂ ಟಾಂ ಅಂತಾ ಸುದ್ದಿ ಮಾಡುತ್ತಲೇ ಇದ್ದಳು. ಆದರೆ, ಆದಿಲ್ ಖಾನ್ ಮಾತ್ರ ಎಲ್ಲೂ ಮದುವೆಯ ಮ್ಯಾಟರ್ ಬಾಯಿಯೇ ಬಿಟ್ಟಿರಲಿಲ್ಲ. ಆದಿಲ್ ನನ್ನ ಮದುವೆ ವಿಚಾರ ಹೇಳದೇ ಇದ್ದರೆ ನಾನು ಜೀವಾನೇ ಬಿಡ್ತೀನಿ ಅಂತಾ ಮತ್ತೆ ರಂಪ ಮಾಡಿದ್ದಳು ರಾಖಿ. ಕೊನೆಗೂ ಆದಿಲ್ ಖಾನ್ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.
ಇದನ್ನೂ ಓದಿ: ‘ಪಠಾಣ್’ ನಿರ್ದೇಶಕನ ಜೊತೆ ಪ್ರಭಾಸ್ ಸಿನಿಮಾ – ಮಾಸ್ ಅವತಾರಕ್ಕೆ ಕಾಯ್ತಿದ್ದಾರೆ ಫ್ಯಾನ್ಸ್
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿರುವ ರಾಖಿ, ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಂಗಿಯ ಮದುವೆ ಆಗುವ ತನಕ ಈ ವಿಷಯವನ್ನು ಯಾರಿಗೂ ಗೊತ್ತಾಗುವುದು ಬೇಡ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆಯವರಿಗೂ ನಾನು ಇಷ್ಟವಿಲ್ಲ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ ಎಂದು ರಾಖಿ ಗೋಳಾಡಿಕೊಂಡಿರುವುದು ಕೂಡಾ ಫುಲ್ ವೈರಲ್ ಆಗಿತ್ತು. ರಾಖಿ ಗೋಳಾಟದ ಬೆನ್ನಲ್ಲೇ ಆದಿಲ್ (Adil Khan) ತಮ್ಮ ಮದುವೆ ಬಗ್ಗೆ ಬರೆದುಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
“ನಾನು ಯಾವತ್ತೂ ರಾಖಿಯನ್ನು ಮದುವೆಯಾಗಿದ್ದಾಗಿ ಹೇಳಿರಲಿಲ್ಲ. ಅದಕ್ಕೆ ಕೆಲವು ಕಾರಣಗಳಿತ್ತು. ಕೆಲವೊಂದು ಕಾರಣಗಳಿಂದ ನಮ್ಮ ಮದುವೆ ವಿಚಾರವನ್ನು ಮುಚ್ಚಿಟ್ಟೆ. ರಾಖಿ ನಮಗೆ ಹ್ಯಾಪಿ ಮ್ಯಾರೀಡ್ ಲೈಫ್” ಎಂದು ಬರೆದುಕೊಂಡಿದ್ದಾರೆ. ಗಂಡ ಆದಿಲ್ ಖಾನ್ ಪೋಸ್ಟ್ ಗೆ ಲವ್ ಯೂ ಜಾನ್ ಎಂದು ರಾಖಿ ಪ್ರತಿಕ್ರಿಯೆ ನೀಡಿದ್ದಾರೆ.