81.5 ಕೋಟಿ ಭಾರತೀಯರ ಆಧಾರ್ ಮತ್ತು ಪಾಸ್ ಪೋರ್ಟ್ ಡೇಟಾ ಸೋರಿಕೆ? -ಗೌಪ್ಯತೆ ಕಾಪಾಡುವಲ್ಲಿ ಎಡವಿದ್ರಾ ಮೋದಿ?
ರಾಜ್ಯದ ಯೋಜನೆಗಳೇ ಆಗಿರಲಿ, ಕೇಂದ್ರ ಸರ್ಕಾರದ ಸ್ಕೀಮ್ಗಳೇ ಇರಲಿ. ಮಕ್ಕಳನ್ನ ಶಾಲೆಗೆ ಸೇರಿಸೋದ್ರಿಂದ ಹಿಡಿದು ಡೆತ್ ಸರ್ಟಿಫಿಕೇಟ್ ಸಿಗ್ಬೇಕಂದ್ರೂ ಕೈಯಲ್ಲಿ ಆಧಾರ್ ಕಾರ್ಡ್ ಇರ್ಲೇಬೇಕು. ನಮ್ಮ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ ಆಧಾರ್ ಕಂಪಲ್ಸರಿ. ಹೀಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಕೇಳೋ ಸರ್ಕಾರ ಅದರ ಸೇಫ್ಟಿ ವಿಚಾರದಲ್ಲಿ ಮಾತ್ರ ತನ್ನ ಜವಾಬ್ದಾರಿ ಮರೆತಿದೆ. ಇದ್ರ ಪರಿಣಾಮ ಕೋಟ್ಯಂತರ ಭಾರತೀಯರ ವೈಯಕ್ತಿಕ ಮಾಹಿತಿಗಳನ್ನ ಮಾರಾಟಕ್ಕೆ ಇಟ್ಟಿರೋ ಗಂಭೀರ ಆರೋಪ ಕೇಳಿ ಬಂದಿದೆ. ಅದೂ ಕೂಡ ಬರೋಬ್ಬರಿ 81.5 ಕೋಟಿ ಭಾರತೀಯರ ಖಾಸಗಿ ಮಾಹಿತಿ ಹ್ಯಾಕ್ ಮಾಡಲಾಗಿದ್ದು, ಭಾರತದ ಅತಿದೊಡ್ಡ ಡೇಟಾ ಸೋರಿಕೆಯಾಗಿದೆ.
ಸೋಶಿಯಲ್ ಮೀಡಿಯಾ, ಬಿಟ್ ಕಾಯಿನ್ ಸೇರಿದಂತೆ ಕೆಲವೊಮ್ಮೆ ಸರ್ಕಾರಿ ದಾಖಲೆಗಳಿಗೂ ಕನ್ನ ಹಾಕ್ತಿದ್ದ ಸೈಬರ್ ಕಳ್ಳರು ಇದೀಗ ಕೋಟ್ಯಂತರ ಭಾರತೀಯರ ಖಾಸಗಿ ಮಾಹಿತಿಯನ್ನೇ ಕದ್ದಿದ್ದಾರೆ. ಪ್ರಸ್ತುತ ಭಾರತದಲ್ಲಿ 142 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಪಾಪ್ಯುಲೇಷನ್ ನಲ್ಲಿ ಚೀನಾವನ್ನೇ ಭಾರತ ಹಿಂದಿಕ್ಕಿದೆ. ಇಂಥ ಅತಿದೊಡ್ಡ ರಾಷ್ಟ್ರ, ಅತೀ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಅತಿದೊಡ್ಡ ಸೈಬರ್ ಕ್ರೈಂ ಕೂಡ ನಡೆದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 81.5 ಕೋಟಿ ಭಾರತೀಯರ ಆಧಾರ್ ಕಾರ್ಡ್ ನಲ್ಲಿನ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ. ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರಿಸೆಕ್ಯುರಿಟಿ ಈ ಆಘಾತಕಾರಿ ಸುದ್ದಿಯನ್ನ ವರದಿ ಮಾಡಿದೆ. ಇದು ಭಾರತದ ಅತೀದೊಡ್ಡ ಡೇಟಾ ಸೋರಿಕೆ ಎಂದಿದ್ದು, ಡಾರ್ಕ್ ವೆಬ್ನಲ್ಲಿ ಈ ಮಾಹಿತಿಗಳನ್ನು ಪ್ರಕಟಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಡೇಟಾ ಸೋರಿಕೆ ವರದಿಯಿಂದ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, ಹ್ಯಾಕರ್ ಗಳ ಬೆನ್ನು ಬಿದ್ದಿದ್ದಾರೆ.
ಅಸಲಿಗೆ ಕೋಟ್ಯಂತರ ಭಾರತೀಯರ ಆಧಾರ್, ಪಾಸ್ ಪೋರ್ಟ್ ಮಾಹಿತಿಗಳು, ಹೆಸರುಗಳು, ಫೋನ್ ನಂಬರ್ಸ್, ಕಾಯಂ ಹಾಗೂ ತಾತ್ಕಾಲಿಕ ವಿಳಾಸಗಳು ಸೇರಿದಂತೆ ವೈಯಕ್ತಿಕ ಮಾಹಿತಿಗಳು ಲೀಕ್ ಆಗಿರುವ ಆರೋಪ ಕೇಳಿ ಬಂದಿದೆ. ರಿಸೆಕ್ಯುರಿಟಿ ವರದಿ ಅನ್ವಯ ಹ್ಯಾಕರ್ ವೊಬ್ಬ ಮಾಹಿತಿ ಕದ್ದಿರುವ ಆರೋಪವಿದೆ. ಬ್ರಿಚ್ ಫೋರಂನಲ್ಲಿ ಜಾಹೀರಾತು ಪ್ರಕಟಿಸಿದ್ದ ಹ್ಯಾಕರ್, 81.5 ಕೋಟಿ ಭಾರತೀಯರ ಆಧಾರ್ ಹಾಗೂ ಪಾಸ್ ಪೋರ್ಟ್ ಮಾಹಿತಿಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿದ್ದ. pwn0001 ಎಂಬ ಹೆಸರನ್ನು ಬಳಸಿಕೊಂಡು ಜಾಹೀರಾತು ನೀಡಿರುವ ಹ್ಯಾಕರ್, 81.5 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಗಳನ್ನು ಕಳವು ಮಾಡಿದ್ದಾಗಿ ಬಹಿರಂಗಪಡಿಸಿದ್ದಾನೆ. ಅಲ್ಲದೆ 80,000 ಡಾಲರ್ ಗೆ ಭಾರತೀಯರ ವೈಯಕ್ತಿಕ ಮಾಹಿತಿಗಳು ಮಾರಾಟಕ್ಕಿವೆ ಎಂದು ಬರೆದುಕೊಂಡಿದ್ದಾರೆ. ಸೋರಿಕೆಯಾಗಿರುವ ಮಾಹಿತಿಗಳಲ್ಲಿ ಭಾರತೀಯ ನಾಗರಿಕರ ಹೆಸರು, ತಂದೆ ಹೆಸರು, ಮೊಬೈಲ್ ಸಂಖ್ಯೆ, ಪಾಸ್ ಪೋರ್ಟ್ ಸಂಖ್ಯೆ, ಆಧಾರ್ ಸಂಖ್ಯೆ, ವಯಸ್ಸು, ಲಿಂಗ, ವಿಳಾಸ, ಜಿಲ್ಲೆ, ಪಿನ್ ಕೋಡ್, ರಾಜ್ಯ ಸೇರಿದಂತೆ ಹಲವು ಮಾಹಿತಿಗಳು ಮಾರಾಟವಾಗುತ್ತಿರೋದಾಗಿ ವರದಿಯಾಗಿದೆ.
ಇದನ್ನೂ ಓದಿ : ಹಮಾಸ್ ಪರ ಯುದ್ಧಕ್ಕಿಳಿದ ಯೆಮೆನ್.. ರಷ್ಯಾದಲ್ಲಿ ಇಸ್ರೇಲಿಗರ ಮೇಲೆ ದಾಳಿ – ಜಗತ್ತಿಗೇ ಹರಡಿತಾ ಯುದ್ಧ?
ಅಷ್ಟಕ್ಕೂ ಈ ಹ್ಯಾಕರ್ ಭಾರತೀಯರ ಆಧಾರ್ ಮಾಹಿತಿಗಳನ್ನ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಅಂದ್ರೆ ಐಸಿಎಂಆರ್ ನಿಂದ ಕಳವು ಮಾಡಿರೋದಾಗಿ ವರದಿ ತಿಳಿಸಿದೆ. ಈ ಮಾಹಿತಿಗಳು ಕೋವಿಡ್ -19 ಮಾಹಿತಿಗಳ ಭಾಗವಾಗಿದ್ದು, ಇದು ಐಸಿಎಂಆರ್ ಬಳಿಯಿತ್ತು. ಡೇಟಾ ಸ್ಯಾಂಪಲ್ ಗಳನ್ನು ಪರಿಶೀಲಿಸಲಾಗಿದ್ದು, ಇವು ನಿಜವಾದ ಮಾಹಿತಿಗಳಾಗಿವೆ ಎಂದು ಬಹಿರಂಗಪಡಿಸಿದೆ. ಭಾರತೀಯರ ಡೇಟಾ ಸೋರಿಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭಾರತೀಯರ ಡೇಟಾ ಸೋರಿಕೆ ಕುರಿತಂತೆ ತನಿಖೆ ನಡೆಸುತ್ತಿರೋದಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ಎಲ್ಲಿ ಸೋರಿಕೆಯಾಗಿದೆ, ಹೇಗೆ ಸೋರಿಕೆಯಾಗಿದೆ ಅನ್ನೋದನ್ನ ಪತ್ತೆ ಹಚ್ಚುತ್ತಿರೋದಾಗಿ ಹೇಳಿದ್ದಾರೆ. ಹಾಗೇ ಸೆಂಟ್ರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ಹ್ಯಾಕರ್ ಪತ್ತೆಗೆ ತನಿಖೆಗಿಳಿದಿದೆ. ಈ ಬಗ್ಗೆ ಐಸಿಎಂಆರ್ ಗೆ ಮಾಹಿತಿ ಕೂಡ ನೀಡಲಾಗಿದೆ. ಇನ್ನು ಮಾಹಿತಿ ಸೋರಿಕೆ ತಡೆಗಟ್ಟುವ ಉದ್ದೇಶದಿಂದ್ಲೇ ಆಧಾರ್ ಬಳಕೆದಾರರು ತಮ್ಮ ಡೇಟಾವನ್ನು ರಕ್ಷಿಸಿಕೊಳ್ಳುವ ಅವಕಾಶ ನೀಡಲಾಗಿದೆ. ತಮ್ಮ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಬಯೋಮೆಟ್ರಿಕ್ ಲಾಕ್ ಮತ್ತು ಅನ್ ಲಾಕಿಂಗ್ ಮೂಲಕ ಡೇಟಾ ಗೌಪ್ಯತೆ ಕಾಪಾಡಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್‍ಸೈಟ್ ನಲ್ಲಿ ಅವಕಾಶ ನೀಡಲಾಗಿದೆ. ಬಯೋಮೆಟ್ರಿಕ್ ವಿಧಾನದಂತೆ ಫಿಂಗರ್ ಪ್ರಿಂಟ್, ಐರಿಸ್ ಮತ್ತು ಮುಖ ಲಾಕ್ ಮಾಡಲಾಗುತ್ತೆ. ಇದ್ರಿಂದ ಆಧಾರ್ ಬಳಕೆದಾರರ ಮಾಹಿತಿ ಸೋರಿಕೆ ತಡೆಗಟ್ಟಬಹುದು. ಅಷ್ಟಕ್ಕೂ ಬಯೋಮೆಟ್ರಿಕ್ ಲಾಕ್ ಮಾಡೋದು ಹೇಗೆ ಅಂದ್ರೆ UIDAI ಸೈಟ್ ಗೆ ಹೋಗಿ ಮೊದಲು ನಿಮ್ಮ ಪ್ರೊಫೈಲ್ ಗೆ ಲಾಗ್ ಇನ್ ಮಾಡಿ. ಬಳಿಕ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಬಯೋಮೆಟ್ರಿಕ್ಸ್ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ. ಬಯೋಮೆಟ್ರಿಕ್ ಲಾಕ್ ಸಕ್ರಿಯಗೊಳಿಸಿ ಆಯ್ಕೆಯನ್ನ ಟಿಕ್ ಮಾಡಿ ಸರಿ ಮೇಲೆ ಟ್ಯಾಪ್ ಮಾಡಿ. ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿದ್ರೆ ನಿಮ್ಮ ಆಧಾರ್ ಕಾರ್ಡ್ ನ ವಿವರಗಳು ಲಾಕ್ ಆಗುತ್ತವೆ.
ಸದ್ಯ ಕೋಟ್ಯಂತರ ಭಾರತೀಯರ ಆಧಾರ್, ಪಾಸ್ ಪೋರ್ಟ್ ಮಾಹಿತಿಗಳು, ಹೆಸರುಗಳು, ಫೋನ್ ಸಂಖ್ಯೆಗಳು, ಕಾಯಂ ಹಾಗೂ ತಾತ್ಕಾಲಿಕ ವಿಳಾಸಗಳು ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಕಳವು ಮಾಡಲಾಗಿದೆ. ಆದರೆ, ಈ ದೊಡ್ಡ ಪ್ರಮಾಣದ ಡೇಟಾ ಸೋರಿಕೆಯನ್ನು ಕೇಂದ್ರ ಸರ್ಕಾರ ಈ ತನಕ ಅಧಿಕೃತವಾಗಿ ದೃಢೀಕರಿಸಿಲ್ಲ. ಈ ಬಗ್ಗೆ ಐಸಿಎಂಆರ್ ಕೂಡ ಅಧಿಕೃತವಾಗಿ ದೂರು ನೀಡಿಲ್ಲ. ಆದರೆ ಸಿಬಿಐ ಸ್ವಯಂಪ್ರೇರಿತವಾಗಿ ತನಿಖೆಗಿಳಿದಿದೆ. ಯಾಕಂದ್ರೆ ಆಧಾರ್ ನಲ್ಲಿರುವ ಮಾಹಿತಿ ಪ್ರತಿಯೊಬ್ಬರ ಮೂಲಕಭೂತ ಹಕ್ಕು. ಇದೇ ಕಾರಣಕ್ಕೆ 2017ರಲ್ಲಿ ಸುಪ್ರೀಂ ಕೋರ್ಟ್ ಖಾಸಗಿತನ ಮೂಲಭೂತ ಹಕ್ಕು ಎಂದು ಮಹತ್ವದ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‍ನ ಈ ತೀರ್ಪು ಕೇಂದ್ರ ಸರ್ಕಾರದ ಆಧಾರ್ ಯೋಜನೆಗೆ ಭಾರೀ ಹಿನ್ನಡೆಯನ್ನೇ ಉಂಟು ಮಾಡಿತ್ತು. ಆವತ್ತು ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಏನಿತ್ತು ಅನ್ನೋದನ್ನ ನಾವಿಲ್ಲಿ ತಿಳಿಯಬೇಕಾಗುತ್ತೆ.
ಆಧಾರ್ ಯೋಜನೆ ಆರಂಭದಲ್ಲೇ ಒಬ್ಬ ವ್ಯಕ್ತಿಯ ಎಲ್ಲ ಮಾಹಿತಿಯನ್ನು ಸರ್ಕಾರ ಒಂದೆಡೆ ದಾಖಲಿಸುವುದು ಅವರ ಖಾಸಗಿತನಕ್ಕೆ ಧಕ್ಕೆ ಉಂಡು ಮಾಡುತ್ತದೆ ಎಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಸತತ ಆರು ದಿನಗಳ ಕಾಲ ಸುಪ್ರೀಂ ಕೋರ್ಟ್ ನಲ್ಲಿ ಸುದೀರ್ಘ ವಿಚಾರಣೆ ನಡೆಸಿ 2017ರ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನಿಡಿತ್ತು. ಚೀಫ್ ಜಸ್ಟೀಸ್ ಜೆ.ಎಸ್ ಖೇಹರ್ ನೇತೃತ್ವದ 9 ನ್ಯಾಯಾಧೀಶರ ಪೀಠದಿಂದ ಈ ಆದೇಶ ಹೊರಬಿದ್ದಿತ್ತು. ಆಧಾರ್ ಯೋಜನೆಗಾಗಿ ಪಡೆದ ಖಾಸಗಿ ದಾಖಲೆಗಳು ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ಖಾಸಗಿತನ ಒಂದು ಮೂಲಭೂತ ಹಕ್ಕಾಗಿದ್ದು ಅದು ಜೀವನ ನಡೆಸುವ ಹಕ್ಕಿಗೆ ಅಗತ್ಯ. ಆಧಾರ್ ಒಂದು ಉತ್ತಮ ಯೋಜನೆಯಾಗಿದ್ದರೂ ಖಾಸಗಿತನ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಇನ್ನು ಇದೇ ವೇಳೆ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಆಧಾರ್ ಸಂಖ್ಯೆಯನ್ನು ಸಂಯೋಜನೆಗೊಳಿಸುವುದು ಖಾಸಗಿತನದ ಉಲ್ಲಂಘನೆಯೇ ಎಂದು ಕೇಂದ್ರ ಸರ್ಕಾರ ಪ್ರಶ್ನೆ ಕೇಳಿತ್ತು. ಆದ್ರೆ ಇದಕ್ಕೆ ಸುಪ್ರೀಂ ಕೋರ್ಟ್ ಯಾವುದೇ ಹೇಳಿಕೆ ನೀಡಿರಲಿಲ್ಲ. ಈ ನಿರ್ಧಾರವನ್ನ ಸುಪ್ರೀಂ ಕೋರ್ಟ್‍ನ ಪ್ರತ್ಯೇಕ ಹಾಗೂ ಸಣ್ಣ ಪೀಠಕ್ಕೆ ಬಿಡಲಾಗಿತ್ತು. ಅಲ್ಲದೆ ಈ ಹಿಂದೆ 1954 ರಲ್ಲಿ 8 ನ್ಯಾಯಾಧೀಶರ ಪೀಠ ಹಾಗೂ 1962ರಲ್ಲಿ 6 ನ್ಯಾಯಧೀಶರ ಪೀಠ ಖಾಸಗಿತನ ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿದ್ದವು. ಒಟ್ಟಾರೆ ಜನಜೀವನ ಡಿಜಿಟಲ್ ಆದಂತೆಲ್ಲಾ ಎಷ್ಟು ಲಾಭಗಳಿವೆಯೋ ಅಷ್ಟೇ ದುರುಪಯೋಗ ಕೂಡ ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಪ್ರಸ್ತುತ 142 ಕೋಟಿ ಜನಸಂಖ್ಯೆ ಇದೆ. ವಿಶ್ವದಲ್ಲೇ ಅತೀಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಇಂಥಾದ್ದೊಂದು ಕೃತ್ಯ ಎಸಗಿರುವುದು ಆತಂಕ ಮೂಡಿಸಿದೆ. 81.5 ಕೋಟಿ ಜನರ ಡೇಟಾ ಕದ್ದಿರುವುದು ಅತಿದೊಡ್ಡ ಅಪರಾಧವಾಗಿದೆ. ವೈಯಕ್ತಿಯ ಮಾಹಿತಿಯನ್ನ ಮಾರಾಟಕ್ಕೆ ಇಟ್ಟಿರೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಭಾರೀ ಚರ್ಚೆಯಾಗುವಂತೆ ಮಾಡಿದೆ. ಹೀಗಾಗಿ ಭಾರತೀಯರ ಖಾಸಗಿ ಮಾಹಿತಿಗಳನ್ನ ಸೋರಿಕೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.