ಮಕ್ಕಳಲ್ಲಿ ದಿಢೀರ್ ಉಸಿರಾಟ ಸಮಸ್ಯೆ – ಎರಡೇ ದಿನದಲ್ಲಿ 12 ಮಕ್ಕಳು ಸಾವು

ಮಕ್ಕಳಲ್ಲಿ ದಿಢೀರ್ ಉಸಿರಾಟ ಸಮಸ್ಯೆ – ಎರಡೇ ದಿನದಲ್ಲಿ 12 ಮಕ್ಕಳು ಸಾವು

ಪಶ್ಚಿಮ ಬಂಗಾಳದಾದ್ಯಂತ ಜನರಿಗೆ ಉಸಿರಾಟ ಸಂಬಂಧಿತ ಸೋಂಕು ಅಡೆನೋವೈರಸ್ ಅತೀ ವೇಗವಾಗಿ ಹರಡುತ್ತಿದೆ. ಇದರ ಪರಿಣಾಮವಾಗಿ ಕಳೆದ  24 ಗಂಟೆಗಳಲ್ಲಿ 7 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಡೆನೋವೈರಸ್ ಸೋಂಕಿನಿಂದಾಗಿ ಬುಧವಾರ ಒಂದೇ ದಿನ 7 ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ, ಈ ಋತುವಿನಲ್ಲಿ ಇನ್‌ಫ್ಲುಯೆಂಜಾ ತರಹದ ಕಾಯಿಲೆಗಳು ಹೆಚ್ಚಾಗಿದೆ. ಪ್ರಾಣ ಕಳೆದುಕೊಂಡ 7 ಮಕ್ಕಳು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಆದರೆ ಅಡೆನೋವೈರಸ್ ನಿಂದಾಗಿಯೇ ಸಾವನ್ನಪ್ಪಿದ್ದಾರೆಯೇ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವರದಿ ಬಂದ ಬಳಿಕವಷ್ಟೇ ಈ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿದೇಶಿ ಸಿನಿಮಾ ನೋಡಿದ್ರೆ ಹುಷಾರ್ – ಮಕ್ಕಳಿಗೆ 5 ವರ್ಷ ಜೈಲು.. ಹೆತ್ತವರಿಗೆ 6 ತಿಂಗಳು ಶಿಕ್ಷೆ..!

ಇದುವರೆಗಿನ ಅಂಕಿಅಂಶಗಳ ಪ್ರಕಾರ 0-2 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಸೋಂಕು ಎಲ್ಲಾ ವಯಸ್ಸಿನ ಜನರಿಗೆ ತಗುಲುವ ಸಾಧ್ಯತೆ ಇದೆ. ಬುಧವಾರ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ಮಕ್ಕಳು ಮತ್ತು ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳವಾರ (ಫೆಬ್ರವರಿ 28) ಕೂಡ ಉಸಿರಾಟದ ತೊಂದರೆಯಿಂದ ಐವರು ಮಕ್ಕಳು ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಈ ಸೋಂಕಿನ ಲಕ್ಷಣಗಳು ಶೀತ ಅಥವಾ ಜ್ವರ, ಗಂಟಲು ನೋವು, ಗಂಟಲು ಊತ, ನ್ಯುಮೋನಿಯಾ, ಕಾಂಜಂಕ್ಟಿವಿಟಿಸ್ ಮತ್ತು ಕಿಬ್ಬೊಟ್ಟೆ ಊತದಿಂದ ಕೂಡಿರುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಈ ಸೋಂಕು ಹೆಚ್ಚು ಅಪಾಯ ತಂದೊಡ್ಡಬಹುದು. ಅಲ್ಲದೇ ಉಸಿರಾಟ ಸಮಸ್ಯೆ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಜನರು ಜಾಗರೂಕರಾಗಿರಲು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಅಡೆನೊವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕದ ಮೂಲಕ ಹರಡಬಹುದು. ಕೆಮ್ಮು ಮತ್ತು ಸೀನುವಿಕೆಯಿಂದಾಗಿ, ಗಾಳಿಯ ಮೂಲಕವೂ ಈ ಸೋಂಕು ತಗುಲಬಹುದು. ಪ್ರಸ್ತುತ ಅಡೆನೊವೈರಸ್‌ಗೆ ಯಾವುದೇ ಔಷಧಗಳು ಲಭ್ಯವಿಲ್ಲ. ಪ್ರಸ್ತುತ ಇದರಿಂದ ಬಳಲುತ್ತಿರುವ ರೋಗಿಗಳಿಗೆ ನೋವು ನಿವಾರಕಗಳು ಅಥವಾ ಅದರ ರೋಗಲಕ್ಷಣಗಳ ಚಿಕಿತ್ಸೆಗಾಗಿ ಬಳಸಬಹುದಾದ  ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.

ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ತುರ್ತು ಸಭೆ ನಡೆಸಿದ್ದಾರೆ. ಸರ್ಕಾರವು ತುರ್ತು ಸಹಾಯವಾಣಿ ಸಂಖ್ಯೆಯನ್ನು ಘೋಷಿಸಿದೆ. ಸೇವೆಯ ಅಗತ್ಯವಿದ್ದವರು 1800-313444-222 ಸಂಖ್ಯೆಗೆ ಕರೆ ಮಾಡಬಹುದು ಎಂದು ಸರ್ಕಾರ ಹೇಳಿದೆ.

suddiyaana