ಮಿನಿ ಹರಾಜಿಗೂ ಮುನ್ನ ಸಿಎಸ್ ಕೆ ತಂಡದಿಂದ ನಾಲ್ವರು ಆಟಗಾರರು ಹೊರಕ್ಕೆ?

ಟಿ-20 ವಿಶ್ವಕಪ್ ಪೈನಲ್ ಹಂತಕ್ಕೆ ತಲುಪಿದ್ದು, ಇದರ ಬೆನ್ನಲೇ ಐಪಿಎಲ್ ಕೂಡ ಸದ್ದು ಮಾಡುತ್ತಿದೆ. ಇದೇ ಡಿಸೆಂಬರ್ ನಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಹರಾಜಿಗೂ ಮುನ್ನ ಪ್ರತಿ ತಂಡಗಳು ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಮಂಡಳಿಗೆ ನೀಡಬೇಕಾಗಿದೆ. ಇದರ ಸಲುವಾಗಿ ಸಿಎಸ್ ಕೆ ಫ್ರಾಂಚೈಸಿ ಕೂಡ ತಂಡದಿಂದ ಕೆಲ ಆಟಗಾರರನ್ನು ಕೈಬಿಡುವ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್?: ಜಡ್ಡು ಪತ್ನಿಗೆ ತಂಗಿಯೇ ಎದುರಾಳಿ!

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಕ್ರಿಸ್ ಜೋರ್ಡಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 3.60 ಕೋಟಿ ರೂ.ಗೆ ಖರೀದಿಸಿತ್ತು. ಜೋರ್ಡಾನ್ ಐಪಿಎಲ್ 2022 ರಲ್ಲಿ ಚೆನ್ನೈ ಪರ ಒಟ್ಟು 4 ಪಂದ್ಯಗಳನ್ನು ಆಡಿ, ಅದರಲ್ಲಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದರು. ಹಾಗೆಯೇ 10 ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ತುಂಬಾ ದುಬಾರಿಯಾಗಿದ್ದರು. ಆದ್ದರಿಂದ ಈ ವರ್ಷದ ಮಿನಿ ಹರಾಜಿನ ಮೊದಲು ಸಿಎಸ್ ಕೆ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

2022 ರ ಮೆಗಾ ಹರಾಜಿನಲ್ಲಿ, ಕಿವೀಸ್ ವೇಗದ ಬೌಲರ್ ಆಡಮ್ ಮಿಲ್ನೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ರೂ. 1.90 ಕೋಟಿಗೆ ಖರೀದಿಸಿತ್ತು. ಐಪಿಎಲ್ 2022 ರಲ್ಲಿ, ಅವರು ಚೆನ್ನೈ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಅದರಲ್ಲಿ ಅವರು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಈ ಬಾರಿ ಮಿನಿ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಲು ಸಿಎಸ್​ಕೆ ಮುಂದಾಗಿದೆ.

2022 ರ ಮೆಗಾ ಹರಾಜಿನಲ್ಲಿ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ನಾರಾಯಣ ಜಗದೀಶನ್ ಅವರನ್ನು ರೂ. 20 ಲಕ್ಷಗಳ ಮೂಲ ಬೆಲೆಗೆ ಸಿಎಸ್ ಕೆ ಖರೀದಿಸಿತ್ತು. ಕಳೆದ ವರ್ಷ ನಾರಾಯಣ್ ಚೆನ್ನೈ ಪರ ಒಟ್ಟು 2 ಪಂದ್ಯಗಳನ್ನು ಆಡಿದ್ದರು. ಅದರಲ್ಲಿ ಅವರು 40 ರನ್ ಗಳಿಸಿದರು. ಈ ವರ್ಷದ ಮಿನಿ ಹರಾಜಿಗೂ ಮುನ್ನ ನಾರಾಯಣ್ ಜಗದೀಶನ್ ಅವರನ್ನು ಬಿಡುಗಡೆ ಮಾಡಲು ಸಿಎಸ್‌ಕೆ ನಿರ್ಧರಿಸಿದೆ.

ನ್ಯೂಜಿಲೆಂಡ್ ಬೌಲಿಂಗ್ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರನ್ನು ಮೆಗಾ ಹರಾಜಿನಲ್ಲಿ 1.9 ಕೋಟಿ ರೂಗಳಿಗೆ ತೆಗೆದುಕೊಳ್ಳಲಾಗಿತ್ತು. 2022 ರಲ್ಲಿ ಚೆನ್ನೈ ಪರ ಒಟ್ಟು 6 ಪಂದ್ಯಗಳನ್ನು ಆಡಿದ್ದ ಅವರು 4 ವಿಕೆಟ್ ಗಳನ್ನು ಪಡೆದಿದ್ದರು. ಆದರೆ ಈ ಬಾರಿ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಚೆನ್ನೈ ಮುಂದಾಗಿದೆ ಎಂದು ತಿಳಿದುಬಂದಿದೆ.

suddiyaana