ಬಿಗ್ ಬಾಸ್ ಮನೆಯಿಂದ ನಟಿ ಸಿರಿ ಔಟ್- ದೊಡ್ಮನೆಯಲ್ಲಿ ಫಲ ನೀಡಲಿಲ್ಲ ಸೇಫ್ ಗೇಮ್
ನಟಿ ಸಿರಿ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಮಾರ್ಗದರ್ಶಕರಂತಿದ್ದ ಸಿರಿಯನ್ನು ಬಿಗ್ ಬಾಸ್ ಮನೆ ಸದಸ್ಯರು ಭಾರವಾದ ಮನಸಿನಿಂದ ಬೀಳ್ಕೊಟ್ಟಿದ್ದಾರೆ. ಈಗ ಬಿಗ್ ಬಾಸ್ ಸದಸ್ಯರ ಸಂಖ್ಯೆ 9ಕ್ಕೆ ಇಳಿಕೆ ಆಗಿದೆ.
ಇದನ್ನೂ ಓದಿ:ಕಾರ್ತಿಕ್ನೇ ಬೇಕು.. ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ? – ಕಾರ್ತಿಕ್ ಬಳಿ ನೇರವಾಗಿ ಕೇಳಿದ ನಮೃತಾ!
ನಾಮಿನೇಟ್ ಆದವರ ಪೈಕಿ ಕೊನೆಯಲ್ಲಿ ಮೈಕಲ್ ಹಾಗೂ ಸಿರಿ ಉಳಿದುಕೊಂಡಿದ್ದರು. ಸುದೀಪ್ ಅವರು ಸಿರಿ ಹೆಸರು ತೆಗೆದುಕೊಂಡರು. ಸಿರಿಗಿಂತ ಮನೆ ಮಂದಿ ಹೆಚ್ಚು ಬೇಸರಗೊಂಡಿದ್ದರು. ಸಂಗೀತಾ ಅವರು ಬಿಕ್ಕಿ ಬಿಕ್ಕಿ ಅತ್ತರು. ಬಿಗ್ ಬಾಸ್ ಮನೆಯಲ್ಲಿ ಸಿರಿ ಅವರು ಸೇಫ್ ಗೇಮ್ ಆಡುತ್ತಿದ್ದಾರೆ ಎನ್ನುವ ಆರೋಪ ಮೊದಲಿನಿಂದಲೂ ಇತ್ತು. ವೀಕ್ಷಕರಿಗೂ ಕೆಲವು ಬಾರಿ ಹೀಗೆಯೇ ಅನಿಸಿದ್ದಿದೆ. ಇದೇ ಸಿರಿ ಅವರಿಗೆ ಮುಳುವಾಗಿದೆ.
ಈ ವಾರ ನಮ್ರತಾ, ಡ್ರೋನ್ ಪ್ರತಾಪ್ ಅವರಿಬ್ಬರನ್ನು ಹೊರತುಪಡಿಸಿ ಇನ್ನೆಲ್ಲರೂ ನಾಮಿನೇಟ್ ಆಗಿದ್ದರು. ವಿನಯ್, ತನಿಷಾ, ಕಾರ್ತಿಕ್, ತುಕಾಲಿ, ವರ್ತೂರು ಸಂತು, ಮೈಖಲ್, ಸಿರಿ, ಸಂಗೀತಾ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಅದರಲ್ಲಿ ವಿನಯ್, ತುಕಾಲಿ ಅವರುಗಳು ಶನಿವಾರದ ಎಪಿಸೋಡ್‌ನಲ್ಲೇ ಬಚಾವಾಗಿದ್ದರು. ಭಾನುವಾರದ ಎಪಿಸೋಡ್‌ನಲ್ಲಿ ಸಂಗೀತಾ, ಮೈಖಲ್, ತನಿಷಾ, ಕಾರ್ತಿಕ್, ಸಿರಿ, ವರ್ತೂರು ಸಂತು ಅವರುಗಳು ನಾಮಿನೇಷನ್ನಲ್ಲಿ ಉಳಿದಿದ್ದರು. ಭಾನುವಾರದ ಎಪಿಸೋಡ್ ಆರಂಭವಾದ ಕೆಲವು ಹೊತ್ತಿನಲ್ಲಿ ಮೊದಲಿಗೆ ಸಂಗೀತಾ ಎಲಿಮಿನೇಷನ್‌ನಿಂದ ಪಾರಾಗಿರುವುದನ್ನು ಸುದೀಪ್ ಘೋಷಿಸಿದರು. ಅದಾದ ಬಳಿಕ ತನಿಷಾರನ್ನು ಘೋಷಿಸಿದರು. ಬಳಿಕ ಕಾರ್ತಿಕ್ ಮಹೇಶ್ ಪಾರಾದರು. ಅದಾದ ಬಳಿಕ ವರ್ತೂರು ಸಂತೋಷ್, ಸಿರಿ, ಮೈಖಲ್ ಅವರುಗಳು ಉಳಿದಿದ್ದರು. ಆಗ ಸುದೀಪ್ ಬೀಗಗಳನ್ನು ತೆಗೆಯುವ ಆಕ್ಟಿವಿಟಿ ಒಂದನ್ನು ಮಾಡಿಸಿದರು. ಅದರಲ್ಲಿ ವರ್ತೂರು ಅವರು ಗೆದ್ದು ಉಳಿದುಕೊಂಡರು. ‘ನಿಮಗಾಗಿ ಜನ ಮತ ಹಾಕುತ್ತಿದ್ದಾರೆ ಆ ಮತಕ್ಕೆ ಅವಮಾನ ಆಗದಂತೆ ಆಟ ಆಡಿ, ಬೀನ್ ಮೇಲೆ ಕುಳಿತುಕೊಂಡೇ ಇರುವುದು ಆಟ ಅಲ್ಲ’’ ಎಂದು ಖಡಕ್ ಆಗಿ ಎಚ್ಚರಿಕೆಯನ್ನು ವರ್ತೂರು ಅವರಿಗೆ ನೀಡಿದರು. ಅದಾದ ಬಳಿಕ ಉಳಿದ ಸಿರಿ ಹಾಗೂ ಮೈಖಲ್ ಅವರ ಚಿತ್ರಗಳ ಬೋರ್ಡ್‌ಗಳನ್ನು ಇಟ್ಟು, ಯಾರು ಉಳಿಯಬೇಕು, ಯಾರು ಹೋಗಬೇಕು ಎಂದು ಅನ್ನಿಸುತ್ತದೆಯೇ ಅವರ ಚಿತ್ರಗಳ ಮೇಲೆ ಇನ್ ಹಾಗೂ ಔಟ್ ಎಂದು ಸೀಲ್ ಹಾಕುವಂತೆ ಹೇಳಿದರು. ವಿನಯ್, ನಮ್ರತಾ ಹಾಗೂ ತುಕಾಲಿ ಸಂತು ಅವರು ಮೈಖಲ್ ಅವರು ಉಳಿಯಬೇಕೆಂದು ಸೀಲ್ ಹಾಕಿದರೆ, ಸಂಗೀತಾ, ಕಾರ್ತಿಕ್, ತನಿಷಾ, ವರ್ತೂರು ಸಂತು, ಡ್ರೋನ್ ಪ್ರತಾಪ್ ಅವರುಗಳು ಸಿರಿ ಅವರು ಉಳಿಯಬೇಕೆಂದು ಮತ ಹಾಕಿದರು. ಬಹುಮತ ಸಿರಿ ಅವರ ಪರವಾಗಿತ್ತು. ಆದರೆ ಜನರ ಅಭಿಪ್ರಾಯ ಬೇರೆಯೇ ಇತ್ತು. ಅಂತಿಮವಾಗಿ ಮೈಖಲ್ ಮನೆಯಲ್ಲಿ ಉಳಿದುಕೊಂಡರು, ಸಿರಿ ಅವರು ಮನೆಯಿಂದ ಹೊರಗೆ ಹೋದರು