ಬಿಗ್ ಬಾಸ್ ಮನೆಗೆ ಜಡ್ಜ್ ಆಗಿ ಬಂದ ನಟಿ ಶ್ರುತಿ – ವಿನಯ್ ಸೈಲೆಂಟ್ ಗೇಮ್ ಗೆ ಎಚ್ಚರಿಕೆ

ಬಿಗ್ ಬಾಸ್ ಮನೆಗೆ ಜಡ್ಜ್ ಆಗಿ ಬಂದ ನಟಿ ಶ್ರುತಿ – ವಿನಯ್ ಸೈಲೆಂಟ್ ಗೇಮ್ ಗೆ ಎಚ್ಚರಿಕೆ

ಬಿಗ್​ಬಾಸ್ ಕನ್ನಡ ಸೀಸನ್ 10 ಜನರಿಗೆ ಮನರಂಜನೆಗಿಂತ ಕಿರಿ ಕಿರಿ ಉಂಟು ಮಾಡಿದ್ದೇ ಜಾಸ್ತಿ. ಪ್ರತೀ ಸೀಸನ್ ಬಂದಾಗ್ಲೂ ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳೆಲ್ಲಾ ಫ್ರೆಂಡ್ಸ್ ಥರ ಇರ್ತಿದ್ರು. ಆದ್ರೆ ಈ ಸಲ ಸಿಟ್ಟು, ಜಗಳ, ವೈಯಕ್ತಿಯ ದ್ವೇಷಗಳೇ ತುಂಬಿಕೊಂಡಿದೆ. ಅದ್ರಲ್ಲೂ ಟಾಸ್ಕ್ ಶುರುವಾದ್ರಂತೂ ಯಾರು ಯಾರ ಮೇಲೆ ಫೈಟ್ ಮಾಡ್ತಾರೋ, ಹೊಡೆದಾಡಿಕೊಳ್ತಾರೋ ಗೊತ್ತೇ ಆಗಲ್ಲ. ಇಡೀ ವಾರ ಬಿಗ್ ಬಾಸ್  ಸ್ಪರ್ಧಿಗಳ ಅತಿರೇಕದ ವರ್ತನೆ ನೋಡುವ ವೀಕ್ಷಕರಿಗೆ ವೀಕೆಂಡ್ ಬಂದ್ರೆ ಸಾಕಪ್ಪ ಅನ್ನಿಸಿಬಿಡುತ್ತೆ. ಯಾಕಂದ್ರೆ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಬರ್ತಾರೆ. ಒಂದಷ್ಟು ಜನರಿಗೆ ಮಂಗಳಾರತಿ ಮಾಡ್ತಾರೆ ಅಂತಾ ವೀಕೆಂಡ್ ಎಪಿಸೋಡ್ಸ್ ಗೆ ಕಾಯ್ತಿರ್ತಾರೆ. ಆದ್ರೆ ಬಹುಶಃ ಈ ವಾರ ವೀಕ್ಷಕರಿಗೆ ನಿರಾಸೆಯಾಗುವ ಎಲ್ಲಾ ಚಾನ್ಸಸ್ ಇದೆ.

ಇದನ್ನೂ ಓದಿ : ʼಸಲಾರ್‌ʼ ಬಿಗ್‌ ರೆಕಾರ್ಡ್‌ – ಮೊದಲ ದಿನವೇ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್!‌  

ಬಿಗ್ ಬಾಸ್ ಸೀಸನ್ 3 ನಲ್ಲಿ ಸ್ಪರ್ಧಿಯಾಗಿದ್ದ ನಟಿ ಶ್ರುತಿ ಬಳಿಕ ಬಿಗ್ ಬಾಸ್ ವಿನ್ನರ್ ಆಗಿದ್ರು. ಇದೀಗ ಜಡ್ಜ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮುಖ್ಯದ್ವಾರದ ಮೂಲಕ ಶ್ರುತಿ ಬರ್ತಿದ್ದಂತೆ ಸ್ಪರ್ಧಿಗಳು ಖುಷಿ ಪಟ್ಟಿದ್ದಾರೆ. ಹಾಗಂತ ಶ್ರುತಿ ಅವ್ರೇನು ಗೆಸ್ಟ್ ಆಗಿ ದೊಡ್ಡ ಮನೆಗೆ ಕಾಲಿಟ್ಟಿಲ್ಲ. ನ್ಯಾಯಾಧೀಶೆಯಾಗಿ ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳೋಕೆ ಎಂಟ್ರಿ ಕೊಟ್ಟಿದ್ದಾರೆ. ಶ್ರುತಿ ಎಂಟ್ರಿ ಬೆನ್ನಲ್ಲೇ ಗಾರ್ಡನ್ ನಲ್ಲಿ ನ್ಯಾಯಾಲಯ ನಿರ್ಮಾಣವಾಗಿದೆ. ಈ ನ್ಯಾಯಾಲಯಕ್ಕೆ ಶ್ರುತಿಯವರೇ ಜಡ್ಜ್. ಸ್ಪರ್ಧಿಗಳನ್ನ ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆ ಪ್ರಶ್ನೆಯ ಬಗ್ಗೆ ಇತರೆ ಸ್ಪರ್ಧಿಗಳಿಂದ ಅಭಿಪ್ರಾಯಗಳನ್ನೂ ಪಡೆಯುತ್ತಿದ್ದಾರೆ. ಇನ್ನು ಪದೇಪದೇ ಕಿರಿಕ್ ಮಾಡ್ಕೊಂಡು ಏರು ಧ್ವನಿಯಲ್ಲಿ ಮಾತನಾಡುತ್ತಾ ಇದೇ ನನ್ನ ಸ್ಟ್ರಾಟಜಿ ಅನ್ನುವ ವಿನಯ್ ಬಗ್ಗೆ ಶ್ರುತಿ ಒಂದು ಪ್ರಶ್ನೆ ಕೇಳ್ತಾರೆ. ಬಿಗ್ ಬಾಸ್​ ಮನೆಯಲ್ಲಿ ವಿನಯ್ ವರ್ತನೆ ವಾರದ ದಿನಗಳಲ್ಲಿ ಒಂದು ಥರ ಇದ್ದರೆ ಸುದೀಪ್ ಅವರ ಮುಂದೆ ಅನುಕಂಪದ ರೀತಿ ಇರುತ್ತದೆ ಎಂದಿದ್ದಾರೆ. ಈ ವೇಳೆ ನಮ್ರತಾ ಹೌದು ಮೇಡಂ ನಾನು ಕೂಡ ಈ ವೇರಿಯೇಷನ್ ನೋಡಿದ್ದೇನೆ. ಸುದೀಪ್ ಸರ್ ಮಾತಾಡಬೇಕಾದರೆ ತುಂಬಾ ಮೆಲೋಡೌನ್ ಆಗ್ತಾರೆ ಅಂದಿದ್ದಾರೆ. ಇನ್ನು ಸಂಗೀತಾ ಕೂಡ ಹಾಗೇ ಹೇಳ್ತಾರೆ. ಇವ್ರು ನನ್ ಜೊತೆ ಇಷ್ಟು ರೂಡ್ ಆಗಿ ಮಾತಾಡಿದ್ರೂ ಸುದೀಪ್ ಸರ್ ಮುಂದೆ ಆಡ್ಕೊಂಡೇ ಇರುವ ರೀತಿ ಇರ್ತಾರೆ ಎಂದಿದ್ದಾರೆ. ಆಗ ಶ್ರುತಿ ಅವರು ತಪ್ಪುಗಳನ್ನ ಕವರ್ ಮಾಡಿಕೊಳ್ಳೋದಕ್ಕೋಸ್ಕರ ಸೈಲೆಂಟ್ ಆಗಿ ಮಾತಾಡ್ತೀರಾ ವಿನಯ್ ಎಂದು ಪ್ರಶ್ನಿಸಿದ್ದಾರೆ. ಆಗ ಗರಂ ಆಗುವ ವಿನಯ್ ಇವ್ರತ್ರ ನಾಟಕ ಆಡಿ ನಂಗೇನು ಆಗ್ಬೇಕಾಗಿಲ್ಲ ಅಂತಾ ಸಿಟ್ಟಲ್ಲಿ ಉತ್ತರ ಕೊಡ್ತಾರೆ. ಆಗ ಶ್ರುತಿ  ನ್ಯಾಯಾಧೀಶರಿಗೆ ಏರು ಧ್ವನಿಯಲ್ಲಿ ಮಾತಾಡ್ತೀರಾ ಎನ್ನುತ್ತಾರೆ. ಇವತ್ತಿನ ಎಪಿಸೋಡ್​ನ ಒಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಅದು ನಮ್ರತಾ ಉತ್ತರ. ಸೀಸನ್ ಶುರುವಾಗಿ 10 ವಾರಗಳ ಬಳಿಕ ಇದೇ ಮೊದಲ ಬಾರಿಗೆ ವಿನಯ್ ವಿರುದ್ಧ ನಮ್ರತಾ ಮಾತನಾಡಿದ್ದಾರೆ. ಹೀಗಾಗಿ ಇವತ್ತಿನ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಇರೋದಕ್ಕಿಂದ ಸ್ಪರ್ಧಿಗಳ ವಾಗ್ವಾದ ಇರೋದಂತೂ ಪಕ್ಕಾ.

Shantha Kumari