ನಟರಿಗಿಂತಲೂ ಹೆಚ್ಚು ಸಂಭಾವನೆ.. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ – ಲೀಲಾವತಿ ಬದುಕಿನ ಏಳುಬೀಳಿನ ಸತ್ಯ

ನಟರಿಗಿಂತಲೂ ಹೆಚ್ಚು ಸಂಭಾವನೆ.. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ – ಲೀಲಾವತಿ ಬದುಕಿನ ಏಳುಬೀಳಿನ ಸತ್ಯ

ಕನ್ನಡ ಚಿತ್ರರಂಗ ಕಂಡ ಮಹಾನ್ ನಟಿ ಲೀಲಾವತಿ. ಬಾಲ್ಯದಲ್ಲಿ ಹೆತ್ತವರ ಜೊತೆ ಇರುವ ಅದೃಷ್ಟವಿರಲಿಲ್ಲ. ಯೌವ್ವನದಲ್ಲಿ ಗಂಡನ ಜೊತೆಯಿರುವ ಭಾಗ್ಯವಿರಲಿಲ್ಲ. ವಯಸ್ಸಾದ ಮೇಲೆ ಕೂತು ತಿನ್ನುವಷ್ಟು ಸುಖವಿರಲಿಲ್ಲ. ಲೀಲಾವತಿಯವರ ಬದುಕೇ ಒಂದು ರೀತಿಯ ಸಿನಿಮಾ. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡಚಿತ್ರರಂಗದ ದಂತಕಥೆಯಾಗಿರುವ ಲೀಲಾವತಿಯವರು ಕೆಲವರ್ಷಗಳಿಂದ ಚಿತ್ರರಂಗದಿಂದ ದೂರಾಗಿ, ಮಗನೊಡನೆ ಒಂಟಿ ಜೀವನ ನಡೆಸುತ್ತಿದ್ದರು. ಕಲ್ಲು ಕಾಡಾಗಿದ್ದ ಸೋಲದೇವನಹಳ್ಳಿಯ ಜಾಗವನ್ನು ನಂದನವನನ್ನಾಗಿ ಮಾಡಿದ ಅಮ್ಮ ಮಗ, ಸಮಾಜಕ್ಕೆ ತಮ್ಮಿಂದಾದಷ್ಟು ಕೊಡುಗೆ ಕೊಟ್ಟ ಹೃದಯವಂತರು. ತಾವು ಕಷ್ಟಪಟ್ಟು ಜೀವನ ನಡೆಸಿದರೂ ಸಮಾಜದಲ್ಲಿರುವ ಬಡವರಿಗೆ ತಮ್ಮಿಂದಾದಷ್ಟು ಸೇವೆ ಸಲ್ಲಿಸಿದ ಭಾಗ್ಯವಂತರು.

ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡಿದ ಅನ್ನಪೂರ್ಣೇಶ್ವರಿ ಲೀಲಮ್ಮ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ಎಲ್ಲವನ್ನೂ ನಿಭಾಯಿಸಿರುವ ಇವರು ಸಾಕ್ಷಾತ್ ಭೂದೇವಿಯೇ ಎಂದು ಕನ್ನಡಚಿತ್ರರಂಗ ಕೊಂಡಾಡುತ್ತಿದೆ. ಲೀಲಮ್ಮ ನಿಮ್ಮೊಳಗೆ ನಾವಮ್ಮ ಎಂದು ಸ್ಯಾಂಡಲ್‌ವುಡ್ ಕಲಾವಿದರು ಲೀಲಮ್ಮನ ಜೊತೆ ಎಂದೆಂದಿಗೂ ನಾವಿದ್ದೇವೆ ಎಂದಿದ್ದರು. ಯಾಕೆಂದರೆ, ಲೀಲಮ್ಮ ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದರು. ಲೀಲಮ್ಮ ಚಂದನವನ ಎಂದಿಗೂ ಮರೆಯದ ಮನಮೋಹಕ ತಾರೆಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಆ ಕಾಲದಲ್ಲಿಯೇ ತನ್ನ ನಟನೆಯ ಮೂಲಕ ನಾಯಕನ ನಟನಿಗಿಂತಲೂ ಹೆಚ್ಚ ಸಂಭಾವನೆ ಪಡೆದುಕೊಂಡ ಹೆಮ್ಮೆಯ ನಟಿಯಾಗಿದ್ದರು. ಕನ್ನಡ ಚಿತ್ರರಂಗದ ಮಹಾನ್ ಕಲಾವಿದೆಯಾಗಿ, ಕಲಾವಿದರ ಪಾಲಿನ ಪ್ರೀತಿಯ ಲೀಲಮ್ಮ, ಬಡವರ ಪಾಲಿನ ಕರುಣಾಮಯಿ.

ಇದನ್ನೂ ಓದಿ : ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ ವಿಧಿವಶ

ಒಂದು ಕಾಲದಲ್ಲಿ ದಕ್ಷಿಣಭಾರತವನ್ನು ಆಳಿದ ಜನಪ್ರಿಯ ನಟಿ ಲೀಲಾವತಿ. ಕನ್ನಡದಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳು. ಬೇರೆ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಲೀಲಾವತಿಯವರದ್ದು. ನಾಯಕಿ ನಟಿಯಾಗಿ ಅಲ್ಲದೆ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಪೋಷಕ ನಟಿಯಾಗಿ ಮೆರೆದವರು ಲೀಲಾವತಿ. 1937ರಲ್ಲಿ ನಟಿ ಲೀಲಾವತಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. ಕೇವಲ 6 ವರ್ಷದಲ್ಲಿರುವಾಗಲೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದರು ಪುಟ್ಟ ಬಾಲೆ ಲೀಲಾ. ವೈಯಕ್ತಿಕ ಜೀವನದಲ್ಲಿ ಪುಟ್ಟ ಬಾಲಕಿ ಲೀಲಾ ಆಘಾತದ ಮೇಲೆ ಆಘಾತ ಅನುಭವಿಸಿದ್ದರು. ಆದರೆ, ಬಂದ ಸಂಕಷ್ಟಗಳನ್ನು ತನ್ನಲ್ಲಿ ಅಡಗಿರುವ ಪ್ರತಿಭೆ ಮೂಲಕ ಎದುರಿಸಿದರು. ನಾಟಕ, ರಂಗಭೂಮಿಯ ಬಗ್ಗೆ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ಲೀಲಾವತಿ ಅವರು, ಮೈಸೂರಿನಲ್ಲಿ ವೃತ್ತಿಜೀವನ ಆರಂಭಿಸಿದರು. ವೃತ್ತಿ ರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡರು. ಆದರೆ, ಜೀವನ ನಿರ್ವಹಣೆಗೆ ಮನೆ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿತ್ತು.

ನಟಿ ಲೀಲಾವತಿ ಅವರು 1949ರಲ್ಲಿ ಶಂಕರ್  ಸಿಂಗ್ ಅವರ ಅಭಿನಯದ ನಾಗಕನ್ನಿಕೆ ಸಿನಿಮಾದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು, ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು. ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ. ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾಗಿ ಮೆರೆದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾ ಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.

ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಡಾ.ರಾಜಕುಮಾರ್ ಪ್ರಶಸ್ತಿಯನ್ನು 1999-2000 ಸಾಲಿನಲ್ಲಿ ಲೀಲಾವತಿಗೆ ನೀಡಲಾಗಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಲೀಲಾವತಿಯವರ ಬದುಕೇ ಮಗ ವಿನೋದ್‌ರಾಜ್ ಆಗಿದ್ದರು. ಸದಾ ಅಮ್ಮನ ನೆರಳಿನಂತೆ ಮಗ ವಿನೋದ್ ರಾಜ್ ಅಮ್ಮನ ಜೊತೆಯಲ್ಲೇ ಇದ್ದರು. ಅಮ್ಮನ ನೋವು, ನಲಿವು, ಅಮ್ಮನ ಆರೈಕೆಯಲ್ಲಿ ವಿನೋದ್‌ರಾಜ್ ತಮ್ಮ ಜೀವನ ನಡೆಸಿದ್ದು ಅಮ್ಮ ಮಗನ ವಾತ್ಸಲ್ಯಕ್ಕೆ ಸಾಕ್ಷಿ. ವಿನೋದ್‌ರಾಜ್ ಮತ್ತು ಲೀಲಾವತಿ ಇಬ್ಬರೂ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಲೀಲಮ್ಮ ನಿಜಕ್ಕೂ ಬಡವರ ಪಾಲಿನ ಭಾಗ್ಯಲಕ್ಷ್ಮೀಯೇ ಆಗಿದ್ದರು. ಸೋಲದೇವನಹಳ್ಳಿಯಲ್ಲಿ ತಮ್ಮ ಸ್ವಂತ ಖರ್ಚಿನಿಂದ ಆಸ್ಪತ್ರೆ ನಿರ್ಮಿಸಿದ್ದಾರೆ. ಚೆನ್ನೈನಲ್ಲಿದ್ದ ತಮ್ಮ ಜಮೀನನ್ನು ಮಾರಿ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಅವರನ್ನು ಆಸ್ಪತ್ರೆ ಕಟ್ಟಿಸಿದ್ದಾರೆ. ಆ ಮೂಲಕ ಸೋಲದೇವನಹಳ್ಳಿಯ ಜನತೆಗೆ ಒಳಿತಾಗಲಿ ಎಂಬುದು ಲೀಲಾವತಿ ಅವರ ಆಶಯವಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕಾಗಿ 1 ಕೋಟಿ 20 ಲಕ್ಷ ರೂಪಾಯಿ ಖರ್ಚಾಗಿದೆ. 20 ವರ್ಷಗಳ ಹಿಂದೆ ಬೆಟ್ಟವೊಂದನ್ನ ತೆಗೆದುಕೊಂಡಿದ್ವಿ. ಈ ಜಾಗ ಯಾಕೆ ಎಂದು ಕೇಳಿದಾಗ, ಇಲ್ಲೇ ಏನಾದರೂ ಮಾಡಬೇಕು ಅಂತ ಅಮ್ಮ ಹೇಳಿದ್ರು. ಆಸ್ಪತ್ರೆ ಕಟ್ಟುವ ಮೂಲಕ ಅಮ್ಮ ಕಂಡ ಕನಸು ನನಸಾಗಿದೆ ಎಂದು ವಿನೋದ್ ರಾಜ್ ಹೇಳಿಕೊಂಡಿದ್ದರು. ಅಂದು ಆಸ್ಪತ್ರೆ ಉದ್ಘಾಟಿಸಿದ್ದ ಬಸವರಾಜ್ ಬೊಮ್ಮಾಯಿಯವರು, ಸೋಲದೇವನಹಳ್ಳಿ ಅಂದ್ರೆ ಏನು ಅಂತ ಯೋಚನೆ ಮಾಡುತ್ತಿದ್ದೆ. ದೇವರು ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಸೋತಿದ್ದಾನೆ. ಬಹುಶಃ ಅದಕ್ಕೆ ಸೋಲದೇವನಹಳ್ಳಿ ಅಂತ ಹೆಸರಿಡಲಾಗಿದೆ. ಇಂತಹ ಜಾಗದಲ್ಲಿ ಲೀಲಾವತಿ ಅವರು ನೆಲೆಸಿದ್ದಾರೆ. ಬದುಕಿನಲ್ಲಿ ಅಡೆತಡೆ ಹಾಗೂ ಅನೇಕ ಸವಾಲುಗಳನ್ನು ಲೀಲಾವತಿ ಎದುರಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ, ಪ್ರತಿಷ್ಟಿತ ಬಡಾವಣೆಯಲ್ಲಿ ಮನೆ ತೆಗೆದುಕೊಂಡು ಜೀವನ ಮಾಡಬಹುದಿತ್ತು. ಆದರೆ, ಅವರು ಇಲ್ಲಿಗೆ ಬಂದು ತೋಟ ಮಾಡಿದ್ದಾರೆ. ಬಡವರಿಗೆ ನೆರವಾಗಿದ್ದಾರೆ. ಲೀಲಾವತಿ ಅವರು ಚಿತ್ರ ಜಗತ್ತಿನ ಎವರ್ ಗ್ರೀನ್ ಕಲಾವಿದೆ’’ ಎಂದಿದ್ದರು. ವಯಸ್ಸಾದ ಮೇಲೆ ಜೀವನ ನಡೆಸಲು ಕಷ್ಟವಾಗುತ್ತಿದ್ದು, ಕಲಾವಿದರಿಗೆ ಪಿಂಚಣಿ ನೀಡಬೇಕು ಎಂಬುದು ಲೀಲಾವತಿಯವರ ದೊಡ್ಡ ಬೇಡಿಕೆಯಾಗಿತ್ತು. ಇದರ ಬಗ್ಗೆ ಚರ್ಚೆ ನಡೆಸಿ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಹೇಳಿದ್ದರು. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ಧರ್ಮನಾಯಕನ ತಾಂಡ್ಯದಲ್ಲಿ ಸ್ವಂತ ಹಣದಲ್ಲಿ ನಿರ್ಮಿಸಿರುವ ಡಾ.ಲೀಲಾವತಿ ಪಶು ಆಸ್ಪತ್ರೆಯನ್ನು ಉದ್ಘಾಟಿಸುವ ವೇಳೆ ಡಿಕೆಶಿಯವರು ಈ ಮಾತನ್ನು ಹೇಳಿದ್ದರು. ಇದನ್ನು ಕೇಳಿದ ಹಿರಿಜೀವ ಹಿರಿಹಿರಿ ಹಿಗ್ಗಿತ್ತು. ಸದಾಕಾಲ ಸಮಾಜಕ್ಕೆ ತನ್ನಿಂದ ಏನಾದರೂ ಸೇವೆ ನೀಡಬೇಕು. ತನ್ನಿಂದ ಏನಾದರೊಂದು ಸಹಾಯ ಮಾಡಬೇಕು ಎಂಬ ಆಸೆ ಲೀಲಮ್ಮನಿಗೆ. ಅಮ್ಮನ ಮಾತನ್ನು ಸದಾ ಪಾಲಿಸುವ ಮಗ ವಿನೋದ್ ರಾಜ್. ಅಮ್ಮ ಎಲ್ಲೋ.. ಅಲ್ಲಿಯೇ ವಿನೋದ್ರಾಜ್.. ಅಮ್ಮನ ಜೊತೆಜೊತೆಗೇ ಇದ್ದು, ತನ್ನಮ್ಮ ಎದುರಿಸಿದ ಜೀವನ ಕಠಿಣ ಪರಿಸ್ಥಿತಿಯನ್ನು ತಾನೂ ಎದುರಿಸಿ ನಿಂತ ವಿನೋದ್‌ರಾಜ್ ಈಗ ಒಂಟಿಯಾಗಿದ್ದಾರೆ. ಅಮ್ಮ ಮಗ ಇಬ್ಬರೂ ಜೀವವೆರೆಡು ದೇಹ ಒಂದೇ ಎಂದು ಬದುಕಿದವರು. ಈಗ ಅಮ್ಮನಿಲ್ಲದೇ ವಿನೋದ್‌ರಾಜ್ ಮನೆ ಖಾಲಿ..ಖಾಲಿ.. ಮನಸಿನ ತುಂಬಾ ಅಮ್ಮನಿಲ್ಲದೇ ಬರೀ ನೋವು.. ಕಣ್ಣೀರು.. ನೆನಪು.

Shantha Kumari