ಪ್ರಾಣಿಗಳ ಮೇಲೆ ಪ್ರೀತಿ.. ಪಶು ಆಸ್ಪತ್ರೆ ಕಟ್ಟಿಸಿದ್ದ ಕಲಾದೇವಿ – ಬಹುಭಾಷಾ ನಟಿ ಲೀಲಾವತಿಯವರ ಅಗಲಿಕೆಗೆ ಗಣ್ಯರಿಂದ ಸಂತಾಪ

ಪ್ರಾಣಿಗಳ ಮೇಲೆ ಪ್ರೀತಿ.. ಪಶು ಆಸ್ಪತ್ರೆ ಕಟ್ಟಿಸಿದ್ದ ಕಲಾದೇವಿ – ಬಹುಭಾಷಾ ನಟಿ ಲೀಲಾವತಿಯವರ ಅಗಲಿಕೆಗೆ ಗಣ್ಯರಿಂದ ಸಂತಾಪ

ಕನ್ನಡ ಚಿತ್ರ ರಂಗದ ಕಲಾ ಸರಸ್ವತಿ ಅಂತಾನೆ ಕರೆಸಿಕೊಂಡಿದ್ದ ಲೀಲಾವತಿ ಇನ್ನು ನೆನಪು ಮಾತ್ರ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಂ ಸಿನಿಮಾಗಳಲ್ಲಿ ನಟಿಸಿ ಆ ಕಾಲಕ್ಕೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಅವರು ಅನಾರೋಗ್ಯದಿಂದ ತಮ್ಮ 87ನೇ ವರ್ಷಕ್ಕೆ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿಯವರನ್ನ ನೆಲಮಂಗಲದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಸ್ಪಲ್ಪ ಚೇತರಿಕೆ ಕೂಡ ಕಂಡಿತ್ತು. ಆದ್ರೆ ದಿಢೀರ್ ಅಂತಾ ಲೋ ಬಿಪಿಯಾಗಿದ್ದು, ಮನೆಯಲ್ಲಿದ್ದ ಲೀಲಾವತಿ ಅವರನ್ನ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಲೀಲಾವತಿ ಅವರು ಅನಾರೋಗ್ಯದಿಂದ ಮನೆಯಲ್ಲೇ ಹಾಸಿ ಹಿಡಿದಿದ್ದಾಗ, ಹಲವು ಗಣ್ಯರು ಲೀಲಾವತಿ ನಿವಾಸಕ್ಕೆ ಭೇಟಿ ನೀಡಿದ್ರು. ನೆಲಮಂಗಲದ ಸೋಲದೇವನಹಳ್ಳಿಯ್ಲಿರುವ ಮನೆಗೆ ತೆರಳಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಲೀಲಾವತಿ ಆರೋಗ್ಯದ ಬಗ್ಗೆ ವಿಚಾರಿಸಿದ್ರು. ಈ ವೇಳೆ ಲೀಲಾವತಿ ಆವರ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸಲಿದೆ ಅಂತಾನೂ ಸಿಎಂ ಹೇಳಿದ್ರು. ಕೇವಲ ರಾಜಕಾರಣಿಗಳು ಮಾತ್ರವಲ್ಲ, ನಟ ಶಿವರಾಜ್​ ಕುಮಾರ್, ದರ್ಶನ್, ಗಿರಿಜಾ ಲೋಕೇಶ್ ಸೇರಿದಂತೆ ಸಿನಿಮಾ ರಂಗದ ಅನೇಕರು ಲೀಲಾವತಿ ನಿವಾಸಕ್ಕೆ ಭೇಟಿ ನೀಡಿದ್ರು.

ಇದನ್ನೂ ಓದಿ : ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಲೀಲಾವತಿ ವಿಧಿವಶ

ಇನ್ನು ಲೀಲಾವತಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರೆಲ್ಲಾ ಲೀಲಾವತಿ ಅವರ ನಟನೆಯನ್ನ ನೋಡಿಕೊಂಡೇ ಬೆಳೆದಿದ್ರು. ಆಗಿನ ಕಾಲದಲ್ಲಿ ಥಿಯೇಟರ್​ಗೆ ಹೋಗಿ ಲೀಲಾವತಿ ಅವರ ಸಿನಿಮಾಗಳನ್ನ ನೋಡ್ತಾ ಇದ್ರಂತೆ. ಈ ಹಿಂದೆ ಹಲವು ಬಾರಿ ತಮ್ಮ ಸಂದರ್ಶನಗಳಲ್ಲಿ ಸಿದ್ದರಾಮಯ್ಯ ಈ ವಿಚಾರವನ್ನ ಹೇಳಿದ್ರು. ಹಾಗೆಯೇ ಡಿಕೆ ಶಿವಕುಮಾರ್​ ಕೂಡ ಲೀಲಾವತಿ ಅವರನ್ನ ನೆನಪಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಲೀಲಾವತಿಯವರು ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿದ್ದ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದೆ. ಸಂಕಷ್ಟದಲ್ಲಿದ್ದರೂ ಸಮಾಜ ಸೇವೆ ಮಾಡಬೇಕೆನ್ನುವ ಅವರ ಕಳಕಳಿ ನನ್ನ ಹೃದಯ ಮುಟ್ಟಿತು ಅಂತಾ ಡಿಕೆಶಿ ಟ್ವೀಟ್ ಮಾಡಿದ್ದಾರೆ. ಲೀಲಾವತಿಯವರು ತುಂಬಾ ಪ್ರಾಣಿ ಪ್ರಿಯರಾಗಿದ್ರು. ಹಸು, ನಾಯಿ ಸೇರಿದಂತೆ ಪ್ರಾಣಿ, ಪಕ್ಷಿಗಳನ್ನ ರಕ್ಷಣೆ ಮಾಡಬೇಕು ಅನ್ನೋದು ಲೀಲಾವತಿ ಅವರ ನಿಲುವಾಗಿತ್ತು. ಪ್ರಾಣಿ ಹಿಂಸೆಯನ್ನ ಯಾವತ್ತಿಗೂ ವಿರೋಧಿಸುತ್ತಲೇ ಇದ್ರು. ಪಶು ಆಸ್ಪತ್ರೆಯೊಂದನ್ನ ಕಟ್ಟಬೇಕು ಅನ್ನೋದು ಲೀಲಾವತಿ ಅವರ ಕನಸಾಗಿತ್ತು. ಹಾಗೆಯೇ ತಾವೇ ಸಂಪಾದಿಸಿದ ಹಣದಲ್ಲಿ ಪಶು ಆಸ್ಪತ್ರೆಯನ್ನ ಕಟ್ಟಿಸಿದ್ರು. ನಾನು ಬದುಕಿರುವಾಗಲೇ ಉದ್ಘಾಟನೆಯಾಗಬೇಕು ಅಂತಾ ಅಂದುಕೊಂಡಿದ್ರು. ಅದೇ ರೀತಿ ಲೀಲಾವತಿ ಅವರು ಬದುಕಿರುವಾಗಲೇ ಅವರ ಕನಸಿನ ಪಶು ಆಸ್ಪತ್ರೆ ಉದ್ಘಾಟನೆಗೊಂಡಿತ್ತು. ಇನ್ನು ರೈತರ ಪರವಾಗಿಯಂತೂ ಲೀಲಾವತಿ ಅವರು ಗಟ್ಟಿ ನಿಲುವು ಹೊಂದಿದ್ರು. ಜೀವನದುದ್ದಕ್ಕೂ ಸರಳವಾಗಿ ಬದುಕಿದ್ರು. ಆಡಂಬರದ ಬದುಕಿನಿಂದ ದೂರವಿದ್ರು. ಇನ್ನು ಲೀಲಾವತಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.​ ಡಿ ದೇವೇಗೌಡ, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಹೆಚ್​​ಡಿ ಕುಮಾರಸ್ವಾಮಿ ಹೀಗೆ ಹಲವು ಮಂದಿ ಸಂತಾಪ ಸೂಚಿಸಿದ್ದಾರೆ. ಇನ್ನು ಅಂತ್ಯಸಂಸ್ಕಾರಕ್ಕೂ ಮುನ್ನ ಲೀಲಾವತಿ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿಗಿನ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಲವು ದಶಕಗಳ ಕಾಲ ತಮ್ಮ ಅಮೋಘ ನಟನೆಯಿಂದ ಜನರನ್ನ ಸೆಳೆದು ರಂಜಿಸಿದ್ದ ಲೀಲಾವತಿ ಅವರು ನಿಜಕ್ಕೂ ಕನ್ನಡದ ಕಣ್ಮಣಿಯೇ. ಶತಮಾನಕ್ಕೊಮ್ಮೆ ಮಾತ್ರ ಇಂಥಾ ನಟರು ಸಿಗ್ತಾರೆ. ಅವರ ಕಲಾ ಸೇವೆಗೆ ಧನ್ಯವಾದ ಹೇಳಲೇಬೇಕು.

Shantha Kumari