‘ಎಲ್ಲರನ್ನೂ ಪ್ರೀತಿಸುತ್ತೇನೆ, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ – ಮಗಳು ಮೀರಾಳ ಡೆತ್‌ನೋಟ್ ನೋಡಿ ನಟ ವಿಜಯ್ ಆ್ಯಂಟನಿ ಕಣ್ಣೀರು
ತಮಿಳು ನಟ ವಿಜಯ್ ಆಂಟೋನಿ ಮನೆಯಲ್ಲಿ ಈಗ ಶೋಕ ಮಡುಗಟ್ಟಿದೆ. ಅವರ ಹಿರಿಯ ಮಗಳು ಮೀರಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಮಿಳು ಚಿತ್ರರಂಗದಲ್ಲೂ ತಲ್ಲಣ ಮೂಡಿಸಿದೆ. ಇದರ ನಡುವೆ ಮೀರಾ ಬರೆದ ಸೂಸೈಡ್ ನೋಟ್ ನಿಜಕ್ಕೂ ಮನಕಲುವಂತಿದೆ. ಅಲ್ಲದೆ, ಆತ್ಮಹತ್ಯೆ ಬಗ್ಗೆ ಮಾತನಾಡಿರುವ ನಟ ವಿಜಯ್ ಆಂಟೋನಿಯವರ ಹಳೇ ವಿಡಿಯೋವೊಂದು ವೈರಲ್ ಆಗಿದ್ದು, ಅವರ ಮಾತು ಕೇಳಿ ಅಭಿಮಾನಿಗಳು ಕೂಡಾ ಮರುಗುತ್ತಿದ್ದಾರೆ.
ಇದನ್ನೂ ಓದಿ: ತಮಿಳು ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ – ಖಿನ್ನತೆಯಿಂದ ಬಳಲುತ್ತಿದ್ದ ಮಗಳು ನೇಣಿಗೆ ಶರಣು..!
ವಿಜಯ್ ಮಗಳಿಗೆ 16 ವರ್ಷ. ಚೆನ್ನೈನ ಖಾಸಗಿ ಶಾಲೆಯೊಂದರಲ್ಲಿ 12ನೇ ತರಗತಿ ಓದುತ್ತಿದ್ದಳು. ಚೆನ್ನೈನ ಡಿಡಿಕೆ ರಸ್ತೆಯಲ್ಲಿರುವ ತನ್ನ ಮನೆಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮೀರಾ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಮೀರಾಗೆ ಅಧ್ಯಯನದಲ್ಲಿ ಮಾನಸಿಕ ಒತ್ತಡ ಇರುವುದರಿಂದ ನೇಣಿಗೆ ಶರಣಾಗಿದ್ದಳು ಎಂದು ಹೇಳಲಾಗುತ್ತಿದೆ. ಇದರ ನಡುವೆ ಮೀರಾ ಬರೆದ ಸೂಸೈಡ್ ನೋಟ್ ನಿಜಕ್ಕೂ ಮನಕಲುವಂತಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಮೀರಾ ಕನಸು ಕಂಡಿದ್ದಳು. ಆದರೆ, 16ನೇ ವಯಸ್ಸಿನಲ್ಲಿಯೇ ತನ್ನೆಲ್ಲಾ ಕನಸುಗಳನ್ನು ಬಚ್ಚಿಟ್ಟುಕೊಂಡು ಸಾವಿನ ಮನೆ ಸೇರಿದ್ದಾಳೆ. ಮೀರಾ ಮಾನಸಿಕವಾಗಿ ಒತ್ತಡದಲ್ಲಿ ಇದ್ದು, ಕೆಲವು ತಿಂಗಳಿಂದ ಚಿಕಿತ್ಸೆ ಕೂಡ ಪಡೆಯುತ್ತಿದ್ದಳು ಎನ್ನಲಾಗ್ತಿದೆ. ಇದೀಗ ವಿಜಯ್ ಆ್ಯಂಟನಿ ಅವರ ಮನೆಯಲ್ಲಿ ಮೀರಾ ಬರೆದ ಸೂಸೈಡ್ ನೋಟ್ ಪತ್ತೆ ಆಗಿದೆ. ಈ ಪತ್ರ ನೋಡಿ ಹೆತ್ತವರ ದುಃಖ ಹೇಳತೀರದಾಗಿದೆ. ‘ಎಲ್ಲರನ್ನೂ ಪ್ರೀತಿಸುತ್ತೇನೆ, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂಬ ಸಾಲಿನಿಂದ ಡೆತ್ ನೋಟ್ ಶುರುವಾಗಿದೆ. ಆದರೆ, ಮೀರಾ ಬರೆದಿರುವ ಡೆತ್ ನೋಟ್ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದೆಲ್ಲದರ ನಡುವೆ ನಟ ವಿಜಯ್ ಆಂಟೋನಿ ಆತ್ಮಹತ್ಯೆ ಬಗ್ಗೆ ಮಾತನಾಡಿರುವ ವಿಚಾರವೊಂದು ಈಗ ವೈರಲ್ ಆಗ್ತಿದೆ. ಜೀವನವು ಎಷ್ಟೇ ನೋವಿನಿಂದ ಕೂಡಿದ್ದರೂ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಯಾಕೆಂದರೆ ಇದು ನಿಮ್ಮನ್ನು ಪ್ರೀತಿಸುವವರ ಪಾಲಿಗೆ ಹೃದಯ ವಿದ್ರಾವಕ ಕ್ಷಣವಾಗಿದೆ. ನನ್ನ ತಂದೆ ನನಗೆ 7 ವರ್ಷದವನಾಗಿದ್ದಾಗ ಮತ್ತು ನನ್ನ ಸಹೋದರಿಗೆ 5 ವರ್ಷ ಇರುವಾಗ ಆತ್ಮಹತ್ಯೆ ಮಾಡಿಕೊಂಡರು. ನಂತರ ನನ್ನ ತಾಯಿ ಎಷ್ಟು ಕಷ್ಟಪಟ್ಟರು ಮತ್ತು ಅವರು ಅನುಭವಿಸಿದ ಕಷ್ಟಗಳನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ವಿಜಯ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಕಲಿಕೆಯ ಬಗೆಗಿನ ಒತ್ತಡದಿಂದ ಮಕ್ಕಳಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗುತ್ತಿರುವ ಬಗ್ಗೆಯೂ ವಿಜಯ್ ಮಾತನಾಡಿದ್ದರು. “ಶಾಲೆ ಮುಗಿದ ತಕ್ಷಣ ಅವರನ್ನು ಟ್ಯೂಷನ್‌ಗೆ ಕಳುಹಿಸಲಾಗುತ್ತದೆ. ನೀವು ಅವರಿಗೆ ಯೋಚಿಸಲು ಸಹ ಸಮಯವನ್ನು ನೀಡುತ್ತಿಲ್ಲ, ದಯವಿಟ್ಟು ಹಾಗೆ ಮಾಡಬೇಡಿ. ಅವರಿಗೆ ಸ್ವಲ್ಪ ಅವಕಾಶ ನೀಡಿ. ಯಾಕೆಂದರೆ ಇದು ಸ್ವತಂತ್ರವಾಗಿರುವ ಸಮಯ. ಯಶಸ್ಸಿನ ಬೆನ್ನು ಬಿದ್ದು ಅವರು ನೆಮ್ಮದಿ ಕಳೆದುಕೊಳ್ಳುವಂತೆ ಮಾಡಬೇಡಿ’ ಎಂದು ವಿಜಯ್ ಹೇಳಿದ್ದರು. ಮೀರಾ ಶಾಲಾ-ಕಾಲೇಜಿನಲ್ಲಿ ತುಂಬಾ ಬುದ್ಧಿವಂತೆಯಾಗಿದ್ದರು ಎನ್ನಲಾಗಿದೆ. ಇದರ ನಡುವೆಯೇ ಆಕೆಗೆ ಯಾವುದರ ಮೇಲೆ ಒತ್ತಡ ಇತ್ತು ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ ಹಿಂದೊಮ್ಮೆ ಸಿಟಿ ಟೈಮ್ಸ್‌ಗೆ ನಟ ವಿಜಯ್ ಆಂಟೋನಿ ಸಂದರ್ಶನ ನೀಡಿದ್ದರು. ಅದರ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ನಟ ತಮಗೆ ದುಬೈ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಂಡಿದ್ದರು. ದುಬೈನಲ್ಲಿ ಅವಕಾಶಗಳು ಹೇರಳವಾಗಿ ಸಿಗುತ್ತದೆ, ಅದು ಅವಕಾಶಗಳ ನಗರ ಎಂದು ಹೇಳಿದ್ದ ನಟ ವಿಜಯ್, ತಮ್ಮ ಇಡೀ ಕುಟುಂಬವನ್ನು ದುಬೈಗೆ ಶಿಫ್ಟ್ ಮಾಡಲು ಯೋಜಿಸುತ್ತಿರುವುದಾಗಿ ತಿಳಿಸಿದ್ದರು. ದುಬೈ ಉತ್ಸಾಹದ, ಅವಕಾಶಗಳ ನಗರ ಎಂದು ಹೊಗಳಿದ್ದ ಅವರು, ತಮ್ಮ ಮಕ್ಕಳ ಶಿಕ್ಷಣವನ್ನೂ ಅಲ್ಲಿಯೇ ಮುಂದುವರೆಸುವ ಆಸಕ್ತಿ ತೋರಿದ್ದರು. ತಮ್ಮ ಮಕ್ಕಳಿಗೆ ದುಬೈನಲ್ಲಿ ಉತ್ತಮ ಭವಿಷ್ಯವಿದ್ದು, ಅಲ್ಲಿಯೇ ಶಿಕ್ಷಣವನ್ನು ಮುಂದುವರಿಸುವುದಾಗಿ ಹೇಳಿದ್ದರು.