ಭಾರತ ಮತ್ತು ಮನುಕುಲದ ಹೆಮ್ಮೆಯ ಕ್ಷಣ -ಚಂದ್ರಯಾನ-3 ಯಶಸ್ಸಿಗೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದು ಹೀಗೆ..
ಬೆಂಗಳೂರು: ಚಂದ್ರಯಾನ- 3ರ ಯೋಜನೆಯ ಲ್ಯಾಂಡಿಂಗ್ ಕುರಿತಂತೆ ವಿವಾದಾತ್ಮಕ ಟ್ವೀಟ್ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್, ಇದೀಗ ಇಸ್ರೋ ಸಾಧನೆಗೆ ಬೆರಗಾಗಿದ್ದಾರೆ. ಅಷ್ಟೇ ಅಲ್ಲದೇ ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು, ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು,ಇದು ದಾರಿಯಾಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಂದ್ರಯಾನ -3ರ ಮತ್ತೊಂದು ಮಹತ್ವದ ಘಟ್ಟವೂ ಯಶಸ್ವಿ – ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ‘ ಪ್ರಗ್ಯಾನ್ ‘ ರೋವರ್
ಚಂದ್ರಯಾನ-3 ಕುರಿತು ಅವರು ಇತ್ತೀಚಿಗೆ ಮಾಡಿದ್ದ ಅಪಹಾಸ್ಯ ರೀತಿಯ ಚಾಯ್ ವಾಲಾ ಟ್ವೀಟ್ ಗೆ ದೇಶಾದ್ಯಂತ ತೀವ್ರ ಟೀಕೆ ವ್ಯಕ್ತವಾಗಿತ್ತು. ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಫೋಸ್ಟ್ ಮಾಡಿದ ಪ್ರಕಾಶ್ ರಾಜ್, ತಾಜಾ ಸುದ್ದಿ, ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದಿದ್ದರು. ನಂತರ ಸ್ಪಷ್ಟನೆ ನೀಡಿದ್ದ ಅವರು‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್ವಾಲಾರನ್ನು ಸಂಭ್ರಮಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕ್ ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್ವಾಲಾ ಯಾರು?’ ಎಂದು ಪ್ರಶ್ನಿಸಿರುವ ಪ್ರಕಾಶ್ ರಾಜ್, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಟೀಕಿಸಿದವರಿಗೆ ಹೇಳಿದ್ದರು.