ಮಂಡ್ಯ ಕ್ಷೇತ್ರಕ್ಕಾಗಿ ಹೆಚ್ ಡಿ ಕುಮಾರಸ್ವಾಮಿ ಸುಮಲತಾಗೆ ಶರಣಾದ್ರಾ?- ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರ ಬಿಗಿಪಟ್ಟು
ರಾಜ್ಯ ರಾಜಕೀಯದ ಹೈವೋಲ್ಟೇಜ್ ಅಖಾಡವಾಗಿರುವ ಮಂಡ್ಯದ ಬಗ್ಗೆ ಕ್ಲಿಯರ್ ಪಿಕ್ಚರ್ ಸಿಗ್ತಿಲ್ಲ. ಕ್ಷೇತ್ರದಲ್ಲಿ ಯಾರ ಪರ ಅಲೆ ಇದೆ ಅನ್ನೋ ಸಣ್ಣ ಸುಳಿವನ್ನೂ ಕೂಡ ಮತದಾರರು ಬಿಟ್ಟುಕೊಡ್ತಿಲ್ಲ. ಕಾಂಗ್ರೆಸ್ನಿಂದ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಿದ್ರೂ ಅವ್ರೇ ಗೆಲ್ತಾರೆ ಅನ್ನೋದನ್ನ ಹೇಳೋಕೆ ಆಗಲ್ಲ. ಇತ್ತ ಹಾಲಿ ಸಂಸದೆ ಸುಮಲತಾ ಅಂಬರೀಶ್ ನಡೆಯಂತೂ ನಿಗೂಢವಾಗೇ ಇದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೈತ್ರಿಯಲ್ಲಿ ಮಂಡ್ಯ ಜೆಡಿಎಸ್ ಪಾಲಾಗಿದೆ ಎನ್ನುತ್ತಿದ್ರೂ ಅಭ್ಯರ್ಥಿ ಯಾರು ಅನ್ನೋದನ್ನ ಹೇಳಿಲ್ಲ. ನಿನ್ನೆ, ಮೊನ್ನೆಯಿಂದ ಸಿ.ಎಸ್ ಪುಟ್ಟರಾಜುಗೆ ಟಿಕೆಟ್ ಕನ್ಫರ್ಮ್ ಆಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಕ್ಷೇತ್ರದ ಅಸಲಿ ಚಿತ್ರಣವೇ ಬೇರೆ ಇದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರು, ಮುಖಂಡರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ದ್ವೇಷ ಕರಗಿದಂತೆ ಕಾಣ್ತಿದೆ. ಹಾಗಾದ್ರೆ ಜೆಡಿಎಸ್ ಟಿಕೆಟ್ ಘೋಷಣೆಗೆ ಮೀನಮೇಷ ಎಣಿಸ್ತಿರೋದೇಕೆ? ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸ್ತಾರಾ ನಿಖಿಲ್? ಸುಮಲತಾ ಸಪೋರ್ಟ್ ಮಾಡ್ತಾರಾ..? ಸಂಸದೆಯನ್ನ ಹೊಗಳಿದ್ದೇಕೆ ಕುಮಾರಣ್ಣ..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೈತ್ರಿ ಧರ್ಮ ಪಾಲನೆಗೆ ಸಿದ್ಧ ಎಂದ ಸುಮಲತಾ! – ಜೆಡಿಎಸ್ಗೆ ಲಾಭವೋ? ನಷ್ಟವೋ?
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಕೌಂಟ್ಡೌನ್ ಶುರುವಾಗಿದ್ರೂ ಮಂಡ್ಯ ಮೈತ್ರಿ ಅಭ್ಯರ್ಥಿಯ ಆಯ್ಕೆ ಗೊಂದಲದ ಗೂಡಾಗಿದೆ. ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಈಗ ಕಾಂಗ್ರೆಸ್ ಪಾರುಪತ್ಯ ಸಾಧಿಸುತ್ತಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 6 ಕ್ಷೇತ್ರದಲ್ಲಿ ಗೆಲುವುಸಾಧಿಸಿ ಪ್ರಾಬಲ್ಯ ಮೆರೆದಿದ್ದು, ಲೋಕಸಭೆ ಚುನಾವಣೆಯಲ್ಲೂ ಗೆಲುವು ಪಡೆಯುವ ಉತ್ಸಾಹದಲ್ಲಿದೆ. ಆದರೆ ಜೆಡಿಎಸ್ ಮಂಡ್ಯವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿಯವರನ್ನು ಸ್ಪರ್ಧಿಸುವಂತೆ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಪಟ್ಟು ಹಿಡಿದಿದ್ದಾರೆ. ಶುಕ್ರವಾರ ಮಂಡ್ಯದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲೂ ಇದೇ ಆಗ್ರಹ ಕೇಳಿ ಬಂದಿದೆ.
ಮಂಡ್ಯದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಜನಪ್ರತಿನಿಧಿ, ಮುಖಂಡರ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅಥವಾ ಹೆಚ್.ಡಿ ಕುಮಾರಸ್ವಾಮಿಯೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬಂದಿದೆ. ಅದ್ರಲ್ಲೂ ನಿಖಿಲ್ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿ ನಿಖಿಲ್ ಪರ ಘೋಷಣೆ ಕೂಗಿದ್ದಾರೆ. ಕಳೆದ ಬಾರಿ ಮಂಡ್ಯದಲ್ಲಿ ನಿಖಿಲ್ರನ್ನ ಕುತಂತ್ರದಿಂದ ಸೋಲಿಸಿದ್ರು. ಈ ಸಲ ನಾವು ಗೆಲ್ಲಿಸುತ್ತೇವೆಂದು ಜೈಕಾರ ಹಾಕಿದ್ದಾರೆ. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ ಕುಮಾರಸ್ವಾಮಿ ಅವರೇ ಮಂಡ್ಯದಿಂದ ಸ್ಪರ್ಧೆ ಮಾಡಬೇಕೆಂದು ನಾವೆಲ್ಲರೂ ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ. ಕೇವಲ ಎಂಪಿ ಆದರೆ ಸಾಲದು, ಕೇಂದ್ರದಲ್ಲಿ ಕುಮಾರಸ್ವಾಮಿ ಅವರಿಗೆ ಉನ್ನತ ಹುದ್ದೆ ಕೊಡಬೇಕು. ಅವರನ್ನ ಕೇಂದ್ರ ಕೃಷಿ ಸಚಿವರನ್ನಾಗಿ ಮಾಡಬೇಕು. ಕೇವಲ ಸಂಸದರಾಗಿ ಕಳಿಸುವುದಕ್ಕೆ ನಮಗೆ ಇಷ್ಟವಿಲ್ಲ. ದೇಶದ ಕೃಷಿ ಸಚಿವರನ್ನಾಗಿ ಮಾಡುವ ಭರವಸೆ ಬಿಜೆಪಿ ನೀಡಬೇಕು. ಅವರ ಸೇವೆ ದೇಶದ ಎಲ್ಲಾ ಕೃಷಿಕರಿಗೂ ಸಿಗಬೇಕು. ಬಿಜೆಪಿ ವರಿಷ್ಠರು ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸೋಲಿನ ಆ ದಿನಗಳನ್ನ ನೆನೆದು ಭಾವುಕರಾಗಿದ್ರು. ಕುಮಾರಣ್ಣನ ಸ್ಪರ್ಧಗೆ ಒತ್ತಾಯಿಸಿದ ನಾಯಕರು ಒಂದು ವೇಳೆ ಕುಮಾರಸ್ವಾಮಿ ಸ್ಪರ್ಧಿಸದಿದ್ದರೆ, ಅವರ ಮಗ ನಿಖಿಲ್ ಕುಮಾರಸ್ವಾಮಿಯವರನ್ನಾದರೂ ಮಂಡ್ಯದಿಂದ ನಿಲ್ಲಿಸಬೇಕೆಂದು ಪಟ್ಟು ಹಿಡಿದಿದ್ರು. ಮಾಜಿ ಸಚಿವರಾದ ಡಿಸಿ ತಮ್ಮಣ್ಣ ಹಾಗೂ ಪುಟ್ಟರಾಜು ಕೂಡ ಕಾರ್ಯಕರ್ತರ ಒತ್ತಾಯಕ್ಕೆ ಧ್ವನಿಗೂಡಿಸಿದರು. ನೀವು ಅಥವಾ ನಿಮ್ಮ ಮಗ ನಿಖಿಲ್ರನ್ನ ನಿಲ್ಲಿಸಿ, ನಾವು ಗೆಲ್ಲಿಸಿಕೊಂಡು ಬರ್ತೇವೆ. ನಾಮ ಪತ್ರ ಸಲ್ಲಿಸಿ ಹೋಗಿ, ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಆಗ್ರಹಿಸಿದ್ರು. ಈ ವೇಳೆ ಮಾತನಾಡಿದ ಹೆಚ್ಡಿಕೆ ಜೆಡಿಎಸ್ ಉಳಿದಿರೋದೇ ಮಂಡ್ಯದಿಂದ ಎನ್ನುವ ಮೂಲಕ ಹೊಸ ದಾಳ ಉರುಳಿಸಿದ್ರು. ಇಲ್ಲಿ ಇನ್ನೊಂದು ಅಚ್ಚರಿಯ ವಿಷ್ಯ ಅಂದ್ರೆ ತಮ್ಮ ಬದ್ಧವೈರಿ ಸುಮಲತಾ ಅಂಬರೀಶ್ರನ್ನು ಸುಮಲತಕ್ಕ ಎನ್ನುವ ಮೂಲಕ ಹಾಡಿ ಹೊಗಳಿದ್ರು.
ಮಂಡ್ಯ ಕ್ಷೇತ್ರಕ್ಕಾಗಿ ಹೆಚ್ ಡಿ ಕುಮಾರಸ್ವಾಮಿ ಸುಮಲತಾಗೆ ಶರಣಾದ್ರಾ ಎನ್ನುವ ಚರ್ಚೆ ಶುರುವಾಗಿದೆ. ಯಾಕಂದ್ರೆ ಮಂಡ್ಯದಲ್ಲಿ ಮಾತನಾಡಿದ ಹೆಚ್ಡಿಕೆ, ರಾಜ್ಯದಲ್ಲಿ ಜೆಡಿಎಸ್ ಉಳಿದಿದೆ ಎಂದರೆ ಮಂಡ್ಯ ಜಿಲ್ಲೆಯಿಂದ ಮಾತ್ರ. ನಾವು ಮಂಡ್ಯ ಜಿಲ್ಲೆಯನ್ನ ಈ ಬಾರಿ ನಾವು ಕಳೆದುಕೊಂಡ್ರೆ ಇದ್ದು ಸತ್ತಂತೆ. ಯಾವುದೇ ಕಾರಣಕ್ಕೂ ಈ ಬಾರಿ ಮಂಡ್ಯ ಜಿಲ್ಲೆ ಕಳೆದುಕೊಳ್ಳಬಾರದು. ನಿಮ್ಮ ಭಾವನೆಗೆ ಖಂಡಿತ ಸ್ಪಂದಿಸುತ್ತೇನೆ, ನಿಮಗೆ ನಿರಾಸೆ ಮಾಡಲು ನಾನು ತಯಾರಿಲ್ಲ ಎಂದರು. ಹಾಗೇ ಸುಮಲತಾ ಅಂಬರೀಶ್ ಅಕ್ಕ ಇದ್ದಂತೆ ಎನ್ನುವ ಮೂಲಕ ಹೊಸ ದಾಳ ಉರುಳಿಸಿದ್ರು. ಇನ್ನು ಮೊನ್ನೆಯಷ್ಟೇ ಸುಮಲತಾ ಅಂಬರೀಶ್ ಕೂಡ ಬಿಜೆಪಿ ಹೈಕಮಾಂಡ್ ಹೇಳಿದ್ರೆ ಮೈತ್ರಿ ಧರ್ಮ ಪಾಲಿಸಲು ಸಿದ್ಧ ಎನ್ನುವ ಮೂಲಕ ಜೆಡಿಎಸ್ ಗೆ ಸಪೋರ್ಟ್ ನೀಡುವ ಬಗ್ಗೆ ಮಾತನಾಡಿದ್ದರು.
ಇನ್ನು ಅಂಬರೀಶ್ ವಿಚಾರವಾಗಿಯೂ ಕುಮಾರಣ್ಣ ಸಾಕಷ್ಟು ಮಾತನಾಡಿದ್ದಾರೆ. ಅಂಬರೀಶ್ ನಾವೆಲ್ಲ ಒಟ್ಟಾಗಿ, ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು. ನಾನು ಸಿಎಂ ಆಗಿದ್ದಾಗಲೇ ರಾಜ್ ಕುಮಾರ್, ಅಂಬರೀಶ್ ನಿಧನರಾದರು. ರಾಜ್ ಸಮಾಧಿ ಮಾಡಿದ್ದು ನಾನು. ಅಂಬರೀಶ್ ಸಮಾಧಿಗೂ ಜಾಗ ಗುರುತಿಸಿ, ಗೌರವ ಕೊಟ್ಟಿದ್ದೇನೆ. ವಿಷ್ಣುವರ್ಧನ್ ಸ್ಮಾರಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಆತನಿಗೆ ನಮನ ಸಲ್ಲಿಸಬೇಕಾಗಿದ್ದು ನಮ್ಮ ಕರ್ತವ್ಯ. ಅಂಬರೀಶ್ ಬಡ ಕುಟುಂಬದಿಂದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿ. ಅಂಬರೀಶ್ಗೆ ಗೌರವ ನೀಡುವ ಮೂಲಕ ಮಂಡ್ಯದ ಜನರಿಗೂ ಗೌರವ ನೀಡಿದ್ದೇವೆ. ಸುಮಲತಾ ಅಂಬರೀಶ್ ಅವರು ನಮ್ಮ ಅಕ್ಕ ಇದ್ದಂತೆ. ರಾಜಕೀಯದಲ್ಲಿ ಆಗ ಏನೋ ಆಗಿತ್ತು. ಈಗ ನಾವು ಸಂಘರ್ಷ ಮುಂದುವರಿಸಲ್ಲ ಎನ್ನುವ ಮೂಲಕ ಕದನ ವಿರಾಮ ಘೋಷಿಸಿದ್ದಾರೆ. ಒಟ್ಟಾರೆ ಮಂಡ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಂಡ್ಯ ಜನತೆ ಜೆಡಿಎಸ್ ಪರವಾಗಿ ಭಾರೀ ಒಲವು ವ್ಯಕ್ತಪಡಿಸಿದ್ದು, ನಿಖಿಲ್ ಸ್ಪರ್ಧೆಗೆ ಆಗ್ರಹಿಸಿದ್ದಾರೆ. ಆದ್ರೆ ಅಂತಿಮವಾಗಿ ಯಾರು ಕಣಕ್ಕಿಳಿಯುತ್ತಾರೋ ಕಾದು ನೋಡ್ಬೇಕು.