ರಾಜ್ಯದಲ್ಲಿ ಆ್ಯಸಿಡ್‌ ಮಾರಾಟ ನಿಷೇಧ – ಗೃಹ ಸಚಿವ ಪರಮೇಶ್ವರ್‌

ರಾಜ್ಯದಲ್ಲಿ ಆ್ಯಸಿಡ್‌ ಮಾರಾಟ ನಿಷೇಧ – ಗೃಹ ಸಚಿವ ಪರಮೇಶ್ವರ್‌

ಕಡಬ ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆದ ಆ್ಯಸಿಡ್‌ ದಾಳಿ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಕರ್ನಾಟಕದಲ್ಲಿ ಆ್ಯಸಿಡ್‌ ಮಾರಾಟ ನಿಷೇಧಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ದಾಳಿ ಮಾಡಿದ್ದ. ಈ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ರಾಜ್ಯದಲ್ಲಿ ಆ್ಯಸಿಡ್‌ ಮಾರಾಟ ನಿಷೇಧಿಸಲಾಗುವುದು. ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ನಿವೇಶನ ನೀಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ – ಬಾಂಬರ್​​ನ ಇಮ್ಯಾಜಿನರಿ ಸ್ಕೆಚ್ ಬಿಡುಗಡೆ

ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅವರ ಮೇಲೆ ದೌರ್ಜನ್ಯ ನಡೆದರೆ ಸಹಿಸುವುದಿಲ್ಲ. ಮಹಿಳೆಯರು ಮತ್ತು ಮಕ್ಕಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ, ವಿಧಾನಸೌಧದ ಕಾರ್ಯಾಲಯ ಅಥವಾ ಗೃಹ ಕಚೇರಿಗೆ ಆಗಮಿಸಿ ನನ್ನನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದರು.

ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಮಹಿಳೆಯರು ತಮ್ಮ ಸಮಸ್ಯೆಗಳ ಕುರಿತು ದೂರು ನೀಡಲು ಠಾಣೆಗೆ ಬಂದರೆ ಕೂಡಲೆ ಸಮಸ್ಯೆಗಳನ್ನು ಆಲಿಸಬೇಕು. ನಮ್ಮ ಬೆನ್ನಿಗೆ ಪೊಲೀಸರು ಇದ್ದಾರೆ ಎಂಬ ಧೈರ್ಯ ಅವರಲ್ಲಿ ಮೂಡಬೇಕು. ಅವರ ದೂರುಗಳ ಬಗ್ಗೆ ತಾತ್ಸಾರ ಮಾಡಿದರೆ ಸಹಿಸುವುದಿಲ್ಲ. ಮಹಿಳೆಯರು ಧೈರ್ಯವಾಗಿದ್ದರೆ ಒಳ್ಳೆ ಆಡಳಿತ, ಜನಸ್ನೇಹಿ ಪೊಲೀಸ್ ಎನಿಸಿಕೊಳ್ಳಲು ಸಾಧ್ಯ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಈ ಹಿಂದೆ ಪೊಲೀಸ್ ಸಹಾಯವಾಣಿ ಮೂಲಕ ಬಂದ ದೂರುಗಳನ್ನು ಆಧರಿಸಿ, ಹೋಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಲು 20 ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರಸ್ತುತ 7 ನಿಮಿಷದೊಳಗೆ ಸ್ಥಳದಲ್ಲಿ ಹಾಜರಿರುತ್ತಾರೆ. ಬೆಂಗಳೂರು ನಗರದಲ್ಲಿ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ನಿರಂತರ ಕಣ್ಗಾವಲು ಇಟ್ಟಿರುತ್ತಾರೆ. ನಮ್ಮ ಸರ್ಕಾರವು ಮಹಿಳಾ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು.

Shwetha M