ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಅಕ್ರಮ ಹಣ ಸಂಗ್ರಹ! – ನಟ ದರ್ಶನಗೂ ಮೋಸ?
ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣ ವಿಚಾರ ಭಾರಿ ಸದ್ದು ಮಾಡುತ್ತಿದೆ. ಅರ್ಜುನ ಆನೆ ಸಾವನ್ನಪ್ಪಿ 6 ತಿಂಗಳು ಕಳೆದರೂ ಕೂಡ ಸರ್ಕಾರ ಮಾತ್ರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿಲ್ಲ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಗ್ಗೆ ಇತ್ತೀಚೆಗೆ ಧ್ವನಿ ಎತ್ತಿದ್ದರು. ಬಳಿಕ ಅವರ ಅಭಿಮಾನಿಗಳೇ ಮುಂದೆ ನಿಂತು ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದರು. ಇದೀಗ ಈ ವಿಚಾರವನ್ನು ಇಟ್ಟುಕೊಂಡೇ ಕೆಲ ಕಿಡಿಗೇಡಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಅರ್ಜುನ ಆನೆ ಸ್ಮಾರಕ ಕಟ್ಟಿಸುವುದಾಗಿ ಹಣ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ‘ಸುಪ್ರೀಂ’ ಮೆಟ್ಟಿಲೇರಿದ ಅರವಿಂದ ಕೇಜ್ರಿವಾಲ್
ಹೌದು, ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣ ಮಾಡುವ ವಿಚಾರವನ್ನು ಬಂಡವಾಳ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್ ಎಂಬುವನು ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ಆರೋಪ ಕೇಳಿಬಂದಿದೆ.
ನವೀನ್ ಅರ್ಜುನ ಪಡೆ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ, ಅರ್ಜುನ ಸ್ಮಾರಕ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು ಅಂತ ಹಣಕ್ಕಾಗಿ ಸಹಾಯ ಕೇಳುತ್ತಿದ್ದಾನೆ. ಇದನ್ನು ನಂಬಿದ ಹಲವರು ಹಣ ಸಹಾಯ ಮಾಡಿದ್ದಾರೆ. ಇದರಿಂದ ನವೀನ್ ಹೆಚ್ಎನ್ ಖಾತೆಗೆ ಲಕ್ಷಾಂತರ ಹಣ ಜಮೆ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಆರೋಪ ಮಾಡಿದ್ದಾರೆ. ಈತ ಹಣ ಸಂಗ್ರಹಿಸಿದ ಬಗ್ಗೆ ದೂರು ದಾಖಲಾಗಿದೆ.
ಇನ್ನು ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವಂತೆ ನವೀನ್ ನಟ ದರ್ಶನ್ ಅವರ ಪಿಎಯನ್ನೂ ಸಂಪರ್ಕ ಮಾಡಿದ್ದಾನೆ. ಅವರಿಂದ ಕಲ್ಲನ್ನು ತೆರೆಸಿಕೊಂಡಿದ್ದಾನೆ. ಈ ಕಲ್ಲನ್ನು ಅರಣ್ಯ ಇಲಾಖೆಯವರಿಗೆ 30 ಸಾವಿರ ರೂ.ಗೆ ಮಾರಿದ್ದಾನೆ ಎಂದು ಆರೋಪ ಮಾಡಿದ್ದಾರೆ.