ಹೆದ್ದಾರಿಗಳಲ್ಲಿ ಎರ್ರಾಬಿರ್ರಿ ವಾಹನ ಚಲಾಯಿಸಿದರೆ ಹುಷಾರ್‌ – ಶರವೇಗದ ಸಂಚಾರಕ್ಕೆ ಬ್ರೇಕ್‌ ಹಾಕಲು ಡ್ರೋನ್‌ ಕಣ್ಗಾವಲು!

ಹೆದ್ದಾರಿಗಳಲ್ಲಿ ಎರ್ರಾಬಿರ್ರಿ ವಾಹನ ಚಲಾಯಿಸಿದರೆ ಹುಷಾರ್‌ – ಶರವೇಗದ ಸಂಚಾರಕ್ಕೆ ಬ್ರೇಕ್‌ ಹಾಕಲು ಡ್ರೋನ್‌ ಕಣ್ಗಾವಲು!

ಬೆಂಗಳೂರು: ಹೆದ್ದಾರಿಗಳಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ಶರವೇಗದ ಓಟಕ್ಕೆ ಬ್ರೇಕ್‌ ಹಾಕಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.

ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಡ್ರೋನ್‌ ಕ್ಯಾಮೆರಾಗಳನ್ನು ಬಳಸಿಕೊಂಡು ವಾಹನಗಳ ಶರವೇಗದ ಸಂಚಾರಕ್ಕೆ ಬ್ರೇಕ್‌ ಹಾಕಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ. ಇನ್ಮುಂದೆ ಹೆದ್ದಾರಿಗಳಲ್ಲಿ ವಿಲಾಸದಿಂದ ಎರ್ರಾಬಿರ್ರಿ ವಾಹನ ಚಲಾಯಿಸಿದರೆ ದಂಡ ತೆರಬೇಕಾಗುತ್ತದೆ.

ಇದನ್ನೂ ಓದಿ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ – ಜುಲೈ 1ರಿಂದಲೇ ಟೋಲ್ ಸಂಗ್ರಹ

ಈಗಾಗಲೇ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ಡ್ರೋನ್‌ ಕ್ಯಾಮೆರಾಗಳು ಬಳಕೆಯಾಗಿದ್ದು, ಇನ್ನು ರಾಜ್ಯದಲ್ಲಿರುವ ರಾಷ್ಟ್ರೀಯ (ಎನ್‌ಎಚ್‌) ಹಾಗೂ ರಾಜ್ಯ (ಸ್ಟೇಟ್‌ ಹೈವೇ) ಹೆದ್ದಾರಿಗಳಲ್ಲಿ ವಾಹನಗಳ ಶರವೇಗಕ್ಕೆ ಬ್ರೇಕ್‌ ಹಾಕಲು ಡ್ರೋನ್‌ಗಳು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಪೊಲೀಸರು ಈಗಾಗಲೇ ರಾಜ್ಯದ ಪ್ರಮುಖ ಹೆದ್ದಾರಿಗಳನ್ನು ಗುರುತಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್, ತುಮಕೂರು-ಚಿತ್ರದುರ್ಗ, ಉಡುಪಿ-ಮಂಗಳೂರು ಹಾಗೂ ಧಾರವಾಡ-ಬೆಳಗಾವಿ ಹೆದ್ದಾರಿಗಳ ಬಳಿ ಡ್ರೋನ್‌ ಬಳಕೆಗೆ ಗುರುತಿಸಲಾಗಿದೆ.

ಹೆದ್ದಾರಿಗಳ ಟೋಲ್‌ಗೇಟ್‌ ಅಥವಾ ಹೆದ್ದಾರಿ ನಡುವೆ ಡ್ರೋನ್‌ ಕ್ಯಾಮೆರಾಗಳನ್ನು ಹಾರಿಸಲಾಗುತ್ತದೆ. ಪೊಲೀಸ್‌ ವಾಹನಗಳನ್ನು ನಿಲ್ಲಿಸಿ ಅವುಗಳನ್ನು ನಿರ್ವಹಿಸಲಾಗುತ್ತದೆ. ಆ ಹೆದ್ದಾರಿಯಲ್ಲಿ ಅತಿವೇಗವಾಗಿ ಚಲಿಸುವ ವಾಹನ ಪತ್ತೆ ಹಚ್ಚಿ ಆ ಮಾಹಿತಿಯನ್ನು ಟೋಲ್‌ಗೇಟ್‌ ಬಳಿ ಇರುವ ಸಂಚಾರ ಪೊಲೀಸರಿಗೆ ರವಾನಿಸಲಾಗುತ್ತದೆ. ಆ ವಾಹನವನ್ನು ಟೋಲ್‌ ಬಳಿ ತಡೆದು ಅತಿವೇಗ ಹಾಗೂ ಅಜಾಗರೂಕ ಚಾಲನೆ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ತಪ್ಪಿಗೆ ದಂಡ ವಿಧಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆದ್ದಾರಿಗಳಲ್ಲಿ ಡ್ರೋನ್‌ ಕ್ಯಾಮೆರಾ ಮೂಲಕ ನಿಗದಿತ ಮಿತಿ ಮೀರಿ ಅತಿವೇಗವಾಗಿ ಚಲಿಸುವ ವಾಹನವನ್ನು ಗುರುತಿಸಲಾಗುತ್ತದೆ. ಬಳಿಕ ಆ ವಾಹನವನ್ನು ಟೋಲ್‌ ಬಳಿ ತಡೆದು ದಂಡ ಹಾಕುವುದು ಪೊಲೀಸರ ಯೋಜನೆಯಾಗಿದೆ. ಈ ಸಂಬಂಧ ಡ್ರೋನ್‌ ಬಳಕೆ ಬಗ್ಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಪೂರ್ವಸಿದ್ಧತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಹೆದ್ದಾರಿಗಳಲ್ಲಿ ಡ್ರೋನ್‌ಗಳ ಹಾರಾಟ ಶುರುವಾಗಲಿದೆ. ಈಗಾಗಲೇ ಹೆದ್ದಾರಿಗಳ ವ್ಯಾಪ್ತಿಯ ಜಿಲ್ಲೆಗಳ ಪೊಲೀಸರಿಗೆ ಹೊಸದಾಗಿ .2 ಕೋಟಿ ಮೌಲ್ಯದ ಡ್ರೋನ್‌ ಕ್ಯಾಮೆರಾಗಳನ್ನು ಪೂರೈಸುವ ಸಂಬಂಧ ಇಲಾಖೆಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗ ಪ್ರಸ್ತಾವನೆ ಸಲ್ಲಿಸಿದೆ.

ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ಅತಿವೇವಾಗಿ ಚಲಿಸುವುದರಿಂದ ಅಪಘಾತ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 590 ಅಪಘಾತಗಳು ಸಂಭವಿಸಿ ಸುಮಾರು 158ಕ್ಕೂ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತಗಳಿಗೆ ವಾಹನಗಳ ಅತಿವೇಗದ ಚಾಲನೆಯೂ ಪ್ರಮುಖ ಕಾರಣವಾಗಿದೆ. ವಾಹನಗಳ ಓಡಾಟ ವಿರಳ ಎಂಬ ಕಾರಣಕ್ಕೆ ಜನರು ಹಿಗ್ಗಾಮುಗ್ಗಾ ವಾಹನ ಚಾಲನೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆ ಸಲುವಾಗಿ ಹೆದ್ದಾರಿಗಳ ವಾಹನಗಳ ಅತಿವೇಗದ ಚಾಲನೆಯನ್ನು ನಿರ್ಬಂಧಿಸಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ನಿರ್ಧರಿಸಿದ್ದಾರೆ. ಇದಕ್ಕಾಗಿ ಡ್ರೋನ್‌ ಕ್ಯಾಮೆರಾ ಬಳಸಿಕೊಂಡು ಹೆದ್ದಾರಿಯಲ್ಲಿ ಅತಿವೇಗ ಸಾಗುವ ವಾಹನಗಳಿಗೆ ಬ್ರೇಕ್‌ ಹಾಕಲಿದ್ದಾರೆ.

suddiyaana