ಪೊಲೀಸರಿಂದಲೇ ಆರೋಪಿಯ ಅಪಹರಣ – ದುಡ್ಡಿಗೆ ಬೇಡಿಕೆಯಿಟ್ಟ ಖಾಕಿಗಳು ಕಂಬಿಹಿಂದೆ..!

ಪೊಲೀಸರಿಂದಲೇ ಆರೋಪಿಯ ಅಪಹರಣ – ದುಡ್ಡಿಗೆ ಬೇಡಿಕೆಯಿಟ್ಟ ಖಾಕಿಗಳು ಕಂಬಿಹಿಂದೆ..!

ಅಪಹರಣ ಮಾಡಿದರೆ ಪೊಲೀಸರೇ ಅಪಹರಣಕಾರರನ್ನು ಬಂಧಿಸಬೇಕು. ಆದರೆ, ಪೊಲೀಸರೇ ಕಿಡ್ನಾಪ್ ಮಾಡಿದರೆ, ಹೇಗಿರಬೇಡ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವೊಂದು… ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯೊಬ್ಬನನ್ನು ಅಪಹರಣ ಮಾಡಿ 40 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡಿದ ಪೊಲೀಸರು ಕೊನೆಗೂ ಕಂಬಿ ಹಿಂದೆ ಸೇರಿದ್ದಾರೆ.

ಇದನ್ನೂ ಓದಿ: ಶರತ್ ಶೆಟ್ಟಿ ಕೊಲೆ ಆರೋಪಿಗಳನ್ನು ಹಿಡಿಯಲು ದೈವದ ಮೊರೆ – ನೊಂದ ಕುಟುಂಬಕ್ಕೆ ಪಂಜುರ್ಲಿ ಅಭಯ!

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ ಹಳ್ಳಿ ಠಾಣೆ ಎಸ್ಐ ರಂಗೇಶ್ ಸೇರಿದಂತೆ 4 ಮಂದಿ ವಿರುದ್ಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಡ್ ಕಾನ್‌ಸ್ಟೇಬಲ್ ಹರೀಶ್‌ ನನ್ನು ಬಂಧಿಸಲಾಗಿದೆ. ಮಾರತ್ ಹಳ್ಳಿ ಠಾಣೆ ಎಸ್ಐ ರಂಗೇಶ್ ಮತ್ತು ಸಿಬ್ಬಂದಿಯು ಹುಲಿ ಚರ್ಮ ಹಾಗೂ ಉಗುರು ಮಾರಾಟ ಮಾಡುತ್ತಿದ್ದ ರಾಮಾಂಜಿನಿ ಎಂಬ ಆರೋಪಿಯನ್ನು ಮಾರ್ಚ್ 18 ರಂದು ಸಂಜೆ ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ರಾಮಾಂಜಿನಿ ಸಂಬಂಧಿ ಶಿವರಾಮಯ್ಯ ಎಂಬುವರಿಗೆ ಕರೆ ಮಾಡಿ, 40 ಲಕ್ಷ ರೂ. ಕೊಡುವಂತೆ ಸಿಬ್ಬಂದಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಶಿವರಾಮಯ್ಯ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಾಗಲೂರು ಪೊಲೀಸರು ಪ್ರಕರಣದ ಬೆನ್ನತ್ತಿದ್ದಾಗ ಎಸ್ಐ ರಂಗೇಶ್ ಮತ್ತು ಹೆಡ್ ಕಾನ್‌ಸ್ಟೇಬಲ್ ಹರೀಶ್ ಕಿಡ್ನಾಪ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಹರೀಶ್ ಮತ್ತು ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಿ ರಾಮಾಂಜಿನಿಯನ್ನು ರಕ್ಷಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಐ ರಂಗೇಶ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ.

ಮಾರ್ಚ್ 18ರಂದು ರಾಮಾಂಜಿನಿಯನ್ನು ವಶಕ್ಕೆ ತೆಗೆದುಕೊಂಡಿದ್ದ ರಂಗೇಶ್ ಮತ್ತು ಸಿಬ್ಬಂದಿಯು ಠಾಣೆಯ ಬದಲು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಆರೋಪಿಯನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡು ಬಿಡುಗಡೆಗೆ ಮತ್ತು ಪ್ರಕರಣದಿಂದ ಖುಲಾಸೆಗೊಳಿಸಲು 40 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದರು. ಹಣ ಕೊಡದಿದ್ದರೆ ಸಾಯುವವರೆಗೆ ಜೈಲಿನಲ್ಲಿ ಇರುವಂತೆ ಮಾಡುವುದಾಗಿ ಹೆದರಿಸಿದ್ದರು. ರಾಮಾಂಜಿನಿ ತನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ ಶಿವರಾಮಯ್ಯಗೆ ಕರೆ ಮಾಡಿ ಬೆದರಿಸಿದ್ದರು. ಎಸ್ಐ ರಂಗೇಶ್ ತನ್ನ ತಲೆಗೆ ಪಿಸ್ತೂಲ್ ಇಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ ಮನಸೋ ಇಚ್ಛೆ ಥಳಿಸಿ ದೌರ್ಜನ್ಯ ನಡೆಸಿದರು ಎಂದು ರಾಮಾಂಜಿನಿ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ‘ಯಾವುದೇ ಅವ್ಯವಹಾರ ಅಥವಾ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ’ ಎಂದಿದ್ದಾರೆ.

suddiyaana