ವಿಮಾನದಲ್ಲಿ ಸಿಗರೇಟ್ ಹಚ್ಚಿದ ಯುವತಿ – ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು
ಇವತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರ ಸಾಧನೆಯನ್ನು ಕೊಂಡಾಡಲಾಗುತ್ತಿದೆ. ಆದ್ರೆ, ಇಲ್ಲೊಬ್ಬಳು ಯುವತಿ ತನ್ನ ವರ್ತನೆಯಿಂದ ಇರುಸು ಮುರುಸು ಉಂಟಾಗುವಂತೆ ಮಾಡಿದ್ದಾಳೆ. ಕೋಲ್ಕತ್ತಾದಿಂದ (Kolkata) ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ (IndiGo) ವಿಮಾನದಲ್ಲಿ ಯುವತಿಯೊಬ್ಬಳು ಸಿಗರೇಟ್ (Cigarette) ಸೇದುವ ಮೂಲಕ ಪೊಲೀಸರ ವಶದಲ್ಲಿ ಇರುವಂತಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 5ರಂದು ರಾತ್ರಿ 9.50ಕ್ಕೆ ಕೋಲ್ಕತ್ತಾದಿಂದ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗಲು ಅರ್ಧ ಗಂಟೆ ಬಾಕಿ ಇತ್ತು. ಆಗ ಪಶ್ಚಿಮ ಬಂಗಾಳದ ಯುವತಿ ಪ್ರಿಯಾಂಕ ಚಕ್ರವರ್ತಿ (24) ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಹಚ್ಚಿದ್ದಾಳೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಶೌಚಾಲಯದ ಬಾಗಿಲು ತೆಗಿಸಿದ್ದಾರೆ. ಸಿಗರೇಟನ್ನು ಡಸ್ಟ್‌ಬಿನ್‌ಗೆ ಹಾಕಿ ನೀರು ಸುರಿದಿದ್ದಾರೆ.
ಇದನ್ನೂ ಓದಿ: ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಮಹಿಳಾ ಅಧಿಕಾರಿ – ಯಾರೀಕೆ ಶಾಲಿಜಾ ಧಾಮಿ?
ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಿಯಾಂಕರನ್ನು ಭದ್ರತಾ ವಿಭಾಗಕ್ಕೆ ಒಪ್ಪಿಸಲಾಗಿದೆ. ಪ್ರಯಾಣಿಕರ ಜೀವ ಮತ್ತು ಸುರಕ್ಷತೆಗೆ ಅಪಾಯ ಉಂಟು ಮಾಡಿದ ಆರೋಪದಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (International Airport) ಪೊಲೀಸರು ಪ್ರಿಯಾಂಕ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇತರರ ಜೀವ & ವೈಯಕ್ತಿಕ ಸುರಕ್ಷತೆಗೆ ಅಪಾಯ ಆರೋಪದಡಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.