ಯುವತಿ ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸಲು ಮೊಬೈಲ್ ಇಟ್ಟ – ಆಕೆ ಬದಲು ಅಣ್ಣ ಹೋಗಿದ್ದರಿಂದ ಸಿಕ್ಕಿಬಿದ್ದ ಹಿಂದೂ ಸಂಘಟನೆಯ ಸದಸ್ಯ
ಉಡುಪಿಯಲ್ಲಿ ಮೊಬೈಲ್ ಚಿತ್ರೀಕರಣ ಪ್ರಕರಣ ಕರಾವಳಿಯಲ್ಲಿ ವಿವಾದದ ಕಿಚ್ಚು ಹಚ್ಚಿತ್ತು. ಹೀಗಿರುವಾಗ ಮಂಗಳೂರಿನಲ್ಲಿ ಯುವಕನೊಬ್ಬ ಮೊಬೈಲ್‌ನಲ್ಲಿ ಯುವತಿಯ ಸ್ನಾನದ ವಿಡಿಯೋ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈತ ಹಿಂದೂ ಪರ ಸಂಘಟನೆಗೆ ಸೇರಿದ ಯುವಕನಾಗಿದ್ದು, ಈ ರೀತಿಯ ಕೃತ್ಯ ಮಾಡುವುದು ಸರಿಯೇ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ತನಿಖಾಧಿಕಾರಿ ಬದಲಾಯಿಸಿದ ಉಡುಪಿ ಎಸ್ಪಿ!
ಮಂಗಳೂರು ನಗರದ ಹೊರವಲಯದ ಪಕ್ಷಿಕೆರೆಯ ನಿವಾಸಿ 22 ವರ್ಷದ ಸುಮಂತ್ ಪೂಜಾರಿ ಎಂಬಾತ ಪಕ್ಕದ ಮನೆಯ ಯುವತಿ ಸ್ನಾನ ಮಾಡುವ ಸಮಯ ನೋಡಿ ಬಾತ್‌ರೂಮ್‌ನಲ್ಲಿ ಮೊಬೈಲ್ ಇಟ್ಟಿದ್ದಾನೆ. ಆದರೆ, ಈತ ಅಂದುಕೊಂಡಿದ್ದೇ ಒಂದು. ಅಲ್ಲಾಗಿದ್ದೇ ಇನ್ನೊಂದು. ಯುವತಿಯ ಬದಲಾಗಿ ಆಕೆಯ ಅಣ್ಣ ಪ್ರಜ್ವಲ್ ಸ್ನಾನಕ್ಕೆ ತೆರಳಿದ್ದಾನೆ. ಈ ವೇಳೆ ಪ್ರಜ್ವಲ್‌ಗೆ ಮೊಬೈಲ್ ಅಡಗಿಸಿಟ್ಟುರುವುದು ಗೊತ್ತಾಗಿದೆ. ಮೊಬೈಲ್‌ನಲ್ಲಿ ಕ್ಯಾಮೆರಾ ಆನ್ ಆಗಿರುವುದನ್ನು ನೋಡಿದ ಯುವತಿಯ ಅಣ್ಣನಿಗೆ ಸಂಶಯ ಬಂದು ಪರಿಶೀಲಿಸಿದ್ದಾನೆ. ಈ ವೇಳೆ ಮೊಬೈಲ್ ಸುಮಂತ್ ಪೂಜಾರಿಯದ್ದು ಎಂದು ತಿಳಿದು ಬಂದಿದೆ ಕೂಡಲೇ ಪ್ರಜ್ವಲ್ ಸ್ಥಳೀಯರ ಸಹಾಯದಿಂದ ಸುಮಂತ್‌ನನ್ನು ಹಿಡಿದು ವಿಚಾರಿಸಿದ್ದಾನೆ. ಬಳಿಕ ಆತನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಸುಮಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಸಂಘ ಪರಿವಾರದ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸುಮಂತ್ ಪೂಜಾರಿ ಪಕ್ಕದ ಮನೆಯ ಯುವತಿ ಸ್ನಾನ ಮಾಡುವ ಸಮಯವನ್ನು ಈ ಹಿಂದೆಯೇ ತಿಳಿದುಕೊಂಡಿದ್ದ. ನಂತರ ಆಕೆ ಸ್ನಾನಕ್ಕೆ ಹೋಗುವ ಸಮಯದಲ್ಲೇ ಅವರ ಬಚ್ಚಲು ಮನೆಯ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಆನ್ ಮಾಡಿ ಅಲ್ಲಿಂದ ಜಾಗ ಖಾಲಿ ಮಾಡಿದ್ದ. ಆಕೆಯ ಸ್ನಾನ ಮುಗಿದ ಮೇಲೆ ಮೊಬೈಲ್ ತೆಗೆಯುವುದು ಆತನ ಪ್ಲಾನ್ ಆಗಿತ್ತು. ಆದರೆ ಯುವತಿಯ ಬದಲಾಗಿ ಯುವತಿಯ ಅಣ್ಣ ಬಚ್ಚಲು ಮನೆಗೆ ಸ್ನಾನಕ್ಕೆ ಬಂದಿದ್ದು ಸುಮಂತ್ ಪೂಜಾರಿ ಸಿಕ್ಕಿಬಿದ್ದಿದ್ದಾನೆ.