ಕುಂತಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕತ್ತು ಸೀಳಿದ ಪಾಗಲ್ ಪ್ರೇಮಿ – ಪ್ರೀತಿ ನಿರಾಕರಿಸಿದ್ದಕೆ ಇದೆಂಥಾ ಶಿಕ್ಷೆ?
ಹಾಸನ ಜಿಲ್ಲೆಯ ಜನತೆ ಗುರುವಾರ ಸಂಜೆ ಬೆಚ್ಚಿಬಿದ್ದಿದ್ದರು. ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಭೀಕರವಾಗಿ ಹತ್ಯೆಯಾಗಿದ್ದಳು. ಅದು ಕೂಡಾ ಕುಂತಿ ಬೆಟ್ಟದಲ್ಲಿ ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಿದ್ದಳು. ಹಾಡಹಗಲೇ ನಡೆದ ಈ ಭೀಕರ ಕೊಲೆ ವಿಚಾರ ಕೇಳಿ ಜನ ದಂಗಾಗಿಹೋಗಿದ್ದಾರೆ.
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕವಳಗೆರೆ ಗ್ರಾಮದ ಲೋಕೇಶ್ ಹಾಗು ಪುಷ್ಪಾ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಲೋಕೇಶ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಪುಷ್ಪಾ ಗಾರ್ಮೆಂಟ್ಸ್ ನಲ್ಲಿ ಕೂಲಿ ಮಾಡ್ತಾರೆ. ಇಬ್ಬರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂದು ದುಡಿಯುತ್ತಿರುವ ಹೆತ್ತವರ ಕನಸಿನಂತೆ ಇಬ್ಬರೂ ಮಕ್ಕಳು ಚೆನ್ನಾಗಿ ಓದುತ್ತಿದ್ದರು. ಹಾಸನದಲ್ಲಿ ಮನೆ ಮಾಡಿಕೊಂಡಿರುವ ಈ ದಂಪತಿ ಮಕ್ಕಳ ಓದಿನಲ್ಲಿಯೇ ತಮ್ಮ ಬಡತನದ ಕಷ್ಟಗಳನ್ನು ಮರೆಯುತ್ತಿದ್ದರು. ದೊಡ್ಡ ಮಗಳು ಸುಚಿತ್ರಾ ಪ್ರತಿಭಾವಂತೆ. ಹೀಗಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡು ಓದುತ್ತಿದ್ದಳು. ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಎರಡನೆ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದಳು. ಸುಚಿತ್ರಾ ನವೆಂಬರ್ 16 ಗುರುವಾರದಂದು ಕೂಡ ಮನೆಯಿಂದ ಕಾಲೇಜಿಗೆ ಹೋಗಿದ್ದಳು. ಇದೇ ಕಾಲೇಜಿನಲ್ಲಿ ಓದಿದ್ದ ಹಾಸನದವನೇ ಆದ ತೇಜಸ್ ಎಂಬಾತನ ಪರಿಚಿಯವಾಗಿ ಆತ್ಮೀಯತೆಯೂ ಇತ್ತು. ತೇಜಸ್ ಸುಚಿತ್ರಾಳನ್ನ ಇಷ್ಟಪಟ್ಟಿದ್ದನಂತೆ. ಸುಚಿತ್ರಾಳಿಗೆ ಓದಬೇಕು. ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹುಡುಕಿಕೊಳ್ಳಬೇಕು. ಹೆತ್ತವರಿಗೆ ಆಸರೆಯಾಗಬೇಕು ಎಂಬ ಗುರಿಯಿತ್ತು. ಓದುತ್ತಿರುವಾಗ ಪ್ರೀತಿ, ಗೀತಿ ಏನೂ ಬೇಡ ಎಂದು ತೇಜಸ್ಗೆ ಹೇಳಿದ್ದಾಳೆ. ನಿನ್ನನ್ನು ಪ್ರೀತಿ ಮಾಡುವುದಿಲ್ಲ ಅಂತಾನೂ ಹೇಳಿದ್ದಾಳೆ. ಸುಚಿತ್ರಾ ಈ ರೀತಿ ಹೇಳಿದ್ದು ತೇಜಸ್ ಒಳಗೆ ಒಬ್ಬ ಕೊಲೆಗಾರ ಹುಟ್ಟಿಕೊಳ್ಳಲು ಕಾರಣವಾಗಿದೆ. ನಿನ್ನ ಜೊತೆ ಮಾತಾಡಬೇಕು ಎಂದು ತೇಜಸ್ ಸುಚಿತ್ರಾಳನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಬೈಕ್ ನಲ್ಲಿ ಕುಂತಿ ಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಬೆಟ್ಟದ ಮೇಲೆ ಕರೆದುಕೊಂಡು ಹೋಗಿದ್ದ ಪಾಪಿ ಅಲ್ಲಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಿದ್ದನಂತೆ. ಆದ್ರೆ ಆಕೆ ಅದಕ್ಕೆ ಒಪ್ಪದಿದ್ದಾಗ ನನಗೆ ಸಿಗದ ನೀನು ಯಾರಿಗೂ ಸಿಗೋದು ಬೇಡಾ ಎಂದು ಆಕೆಯ ಕುತ್ತಿಗೆ ಸೀಳಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಇನ್ಸಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಮಗಳ ಮೇಲೆ ತಮ್ಮ ಜೀವವನ್ನೇ ಇಟ್ಟುಕೊಂಡಿದ್ದ ಹೆತ್ತವರ ಆಕ್ರಂದನವಂತೂ ಮುಗಿಲು ಮುಟ್ಟಿತ್ತು.