ಜೋಶ್‌ನಲ್ಲಿ ಡಿಜೆ ಸಾಂಗ್‌ಗೆ ಸ್ಟೆಪ್ ಹಾಕಿದ.. – ನೋಡ ನೋಡುತ್ತಿದ್ದಂತೆ ಯುವಕನ ಪ್ರಾಣ ಪಕ್ಷಿ ಹಾರಿ ಹೋಯ್ತು!
ಆ ಗ್ರಾಮದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. 21 ದಿನಗಳ ಕಾಲ ಇಟ್ಟಿದ್ದ ಗಣೇಶನ ವಿಸರ್ಜನೆಗೆ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು.. ಯುವಕರೆಲ್ಲರೂ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಈ ಸಂತಸದ ಕ್ಷಣ ಕೆಲವೇ ಹೊತ್ತಲ್ಲಿ ಮಾಯವಾಗಿದೆ. ನೋಡ ನೋಡುತ್ತಿದ್ದಂತೆ ತಮ್ಮೆದುರೆ ಹುಚ್ಚೆದ್ದು ಕುಣಿಯುತ್ತಿದ್ದ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಒಂದೇ ಕ್ಷಣದಲ್ಲಿ ಸೂತಕದ ಛಾಯೆ ಮೂಡಿದೆ.
ಏನಿದು ಘಟನೆ?
ಈ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ನಗರದಲ್ಲಿ 21 ದಿನದ ಗಣೇಶ ವಿಸರ್ಜನೆ ನಡೆದಿದೆ. ಗಂಗಾವತಿಯ ಪ್ರಶಾಂತ ನಗರದ ಯುವಕರಿಂದ ಡಿಜೆ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಅಂತೆಯೇ ಬೆಳ್ಳಂಬೆಳಗ್ಗೆ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸೌಂಡ್ ಹಾಕಿ ಡ್ಯಾನ್ಸ್ ಮಾಡಲಾಗುತ್ತಿತ್ತು. ಮೆರವಣಿಗೆ ಸಾಗುತ್ತಿದ್ದ ವೇಳೆ ಸುದೀಪ್ ಡ್ಯಾನ್ಸ್ ಮಾಡುತ್ತಿದ್ದು, ಕೆಲ ಹೊತ್ತಿನ ಬಳಿಕ ಕುಸಿದು ಬಿದ್ದಿದ್ದಾನೆ. ನೋಡ ನೋಡುತ್ತಿದ್ದಂತೆ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದುಕೊಂಡ ಹಮಾಸ್ – ಇಸ್ರೇಲ್ ಯುದ್ಧ – ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್
ಮೃತ ಯುವಕನನ್ನು ಸುದೀಪ್ ಸಜ್ಜನ್ (30) ಎಂದು ಗುರುತಿಸಲಾಗಿದೆ. ಈತನಿಗೆ ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಘಟನೆಯಿಂದ ಸ್ವಯಂ ಪ್ರೇರಿತವಾಗಿ ಯುವಕರು ಅರ್ಧಕ್ಕೆ ಡಿಜೆ ಬಂದ್ ಮಾಡಿದರು. ಯುವಕನ ಮೃತ ದೇಹ ಗಂಗಾವತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ವರದಿಯಾಗಿದೆ. ಗಂಗಾವತಿ ನಗರ ಠಾಣೆ ಪೊಲೀಸರು ಡಿಜೆ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.