ಮೃತಪಟ್ಟಿದ್ದಾಳೆ ಎಂದುಕೊಂಡು ಶವಕ್ಕಾಗಿ 3 ದಿನದಿಂದ ಹುಡುಕಾಟ – ನನ್ನನ್ನು ಹುಡುಕಬೇಡಿ ಅಂತಾ ಬಂತು ಫೋನ್‌ ಕಾಲ್!‌  

ಮೃತಪಟ್ಟಿದ್ದಾಳೆ ಎಂದುಕೊಂಡು ಶವಕ್ಕಾಗಿ 3 ದಿನದಿಂದ ಹುಡುಕಾಟ – ನನ್ನನ್ನು ಹುಡುಕಬೇಡಿ ಅಂತಾ ಬಂತು ಫೋನ್‌ ಕಾಲ್!‌  

ಮಡಿಕೇರಿ: ಜಲಪಾತವೊಂದರಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಶವಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಆ ಮಹಿಳೆ ಮೂರು ದಿನಗಳ ನಂತರ ಸಂಬಂಧಿಕರಿಗೆ ಕರೆ ಮಾಡಿ ನನ್ನನ್ನು ಹುಡುಕಬೇಡಿ ಎಂದು ಹೇಳಿರುವ ವಿಚಿತ್ರ ಘಟನೆ ನಡೆದಿದೆ.

ಏನಿದು ಘಟನೆ?

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದಿಂದ ಸೆಪ್ಟೆಂಬರ್ 5 ರಂದು ಸರಸ್ವತಿಯ (33) ಎಂಬ ಮಹಿಳೆ ನಾಪತ್ತೆಯಾಗಿದ್ದಳು. ಮಹಿಳೆ ನಾಪತ್ತೆಯಾದ ಕುರಿತು ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಸೆ. 8 ರಂದು ಮಡಿಕೇರಿ ಸಮೀಪದ ಅಬ್ಬಿ ಜಲಪಾತದ ಬಳಿ ಆಕೆ ಬರೆದ ಡೆತ್‌ ನೋಟ್‌ ಹಾಗೂ ಜೊತೆಗೊಂದಿಷ್ಟು ದಾಖಲೆಗಳಿದ್ದ ಬ್ಯಾಗ್, ಪಕ್ಕದಲ್ಲಿಯೇ ಚಪ್ಪಲಿ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ರೀತಿ ಪ್ರಕರಣಗಳು ಕಂಡು ಬಂದರೆ, ಸಾವು ಸಂಭವಿಸಿರಬಹುದು ಎಂದು ಶಂಕಿಸುವುದು ಸಹಜ. ಹೀಗಾಗಿ ಕಳೆದ 3 ದಿನಗಳಿಂದ ನಾಪತ್ತೆ ಯಾಗಿದ್ದ ಮಹಿಳೆಗಾಗಿ ಪೊಲೀಸರು, ಅಗ್ನಿಶಾಮಕದಳ, ಎನ್‌ಡಿಆರ್‌ಎಫ್ ತಂಡ ಜಲಪಾತದಲ್ಲಿ ತೀವ್ರ ಹುಡುಕಾಟ ನಡೆಸಿತ್ತು. ಮುಳುಗು ತಜ್ಞರು ನೀರಿಗಿಳಿದು ಶೋಧ ನಡೆಸುತ್ತಿದ್ದರು. ಆದರೆ ಆಕೆಯ ಶವ ಎಲ್ಲಿಯೂ ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ: ಶಾರ್ಪ್ ಶೂಟರ್ ವೆಂಕಟೇಶ್ ಬಲಿ ಪಡೆದ ಭೀಮನಿಗೆ ಚಿಕಿತ್ಸೆ ನೀಡುತ್ತಿಲ್ಲ ಅರಣ್ಯ ಇಲಾಖೆ – ‘ಭೀಮ’ನನ್ನು ಉಳಿಸಿ ಎಂದು ಶುರುವಾಯ್ತು ಅಭಿಯಾನ

ಡೆತ್‌ ನೋಟ್‌ ನಲ್ಲಿ ಏನಿತ್ತು?

ಜಲಪಾತದಲ್ಲಿ ಸಿಕ್ಕಿದ್ದ ಡೆತ್‌ ನೋಟ್‌ ನಲ್ಲಿ ನಾಪತ್ತೆಯಾದ ಮಹಿಳೆ, ನನ್ನನ್ನು ಹುಡುಕಬೇಡಿ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು  ಬರೆದಿದ್ದಳು. ಜೊತೆಗೊಂದಿಷ್ಟು ದಾಖಲೆಗಳಿದ್ದ ಬ್ಯಾಗ್, ಪಕ್ಕದಲ್ಲಿಯೇ ಚಪ್ಪಲಿ ಇಟ್ಟಿದ್ದಳು.

ಎಷ್ಟೇ ಹುಡುಕಿದರೂ ಪತ್ತೆಯಾಗದ ಮೃತದೇಹ!

ಈ ವಿಚಾರ ಗೊತ್ತಾಗುತ್ತಿದ್ದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪಿರಿಯಾಪಟ್ಟಣ ಪೊಲೀಸರನ್ನು ಸಂಪರ್ಕಿಸಿದ್ದಾರೆ.  ಈಕೆಯ ಕುರಿತು ಮಾಹಿತಿ ಪಡೆಯುವ ಸಂದರ್ಭ ಕೆಲವು ದಿನಗಳಿಂದ ನಾಪತ್ತೆಯಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸಹಾಯದಿಂದ ಕಳೆದ 3 ದಿನಗಳಿಂದ ಕಾರ್ಯಾಚರಣೆಗಿಳಿದಿತ್ತು. ಎಷ್ಟೇ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.

ನನ್ನನ್ನು ಹುಡುಕಬೇಡಿ ಎಂದು ಮಹಿಳೆಯ ಕರೆ!

ಮೃತಪಟ್ಟಿದ್ದಾಳೆ ಎಂದುಕೊಂಡು ಜಲಪಾತದಲ್ಲಿ ಶೋಧ ಕಾರ್ಯ ನಡೆಸುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಸರಸ್ವತಿ ತನ್ನ ಸಹೋದರನಿಗೆ ಕರೆ ಮಾಡಿ ನಾನು ಬೆಂಗಳೂರಿನಲ್ಲಿ ಇದ್ದೇನೆ. ನನ್ನನ್ನು ಯಾರು ಕೂಡಾ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಹೇಳಿ ಪೋನ್ ಕಟ್ ಮಾಡಿದ್ದಾಳೆ. ಇದೀಗ ಕುಟುಂಬಸ್ಥರು ಸರಸ್ವತಿಯನ್ನು ಹುಡುಕಿಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

Shwetha M