ಮಕ್ಕಳಗಾಲಿಲ್ಲ ಎಂದು ಮಾಂತ್ರಿಕನ ಬಳಿ ಹೋದ ಮಹಿಳೆ ದಾರುಣ ಅಂತ್ಯ – ಮಗುವಿನ ಆಸೆಯಲ್ಲಿ ಪ್ರಾಣಬಿಟ್ಟ ಅಮಾಯಕಿ

ಮಕ್ಕಳಗಾಲಿಲ್ಲ ಎಂದು ಮಾಂತ್ರಿಕನ ಬಳಿ ಹೋದ ಮಹಿಳೆ ದಾರುಣ ಅಂತ್ಯ – ಮಗುವಿನ ಆಸೆಯಲ್ಲಿ ಪ್ರಾಣಬಿಟ್ಟ ಅಮಾಯಕಿ

ಉತ್ತರಪ್ರದೇಶದಲ್ಲಿ ಮಕ್ಕಳಾಗಲಿಲ್ಲ ಎಂದು ಮಾಂತ್ರಿಕನ ಬಳಿ ಹೋಗಿರುವ ಮಹಿಳೆಯೊಬ್ಬರು ದಾರುಣ ಅಂತ್ಯಕಂಡಿದ್ದಾರೆ. ಇಂಥಾ ಪ್ರಕರಣಗಳನ್ನ ನೋಡಿದರೆ, ನಾವಿನ್ನೂ ಯಾವ ಕಾಲದಲ್ಲಿ ಇದ್ದೇವೆ ಅಂತಾ ಅನಿಸುತ್ತದೆ. ಆಸ್ಪತ್ರೆಗೆ ಹೋಗಿ ಚೆಕಪ್ ಮಾಡುವುದು ಬಿಟ್ಟು ಮಾಂತ್ರಿಕನ ಬಳಿ ಹೋಗಿ ಮೂಢನಂಬಿಕೆಗೆ ಬಲಿಯಾಗುತ್ತಿರುವ ಸಾಲಿಗೆ ಈ ಮಹಿಳೆ ಕೂಡಾ ಸೇರಿದ್ದಾಳೆ.

ಇದನ್ನೂ ಓದಿ: ಮಸಣಕ್ಕೆ ಹೋದ ಮದುವೆ ದಿಬ್ಬಣ- ವರ ಸೇರಿ 8 ಮಂದಿ ಅಪಘಾತಕ್ಕೆ ಬಲಿ

ಉತ್ತರ ಪ್ರದೇಶದ ಅಜಮ್‌ಗಢ ಮೂಲದ ಮಹಿಳೆಯೊಬ್ಬರಿಗೆ ಮದುವೆಯಾಗಿ 10 ವರ್ಷಗಳಾಗಿತ್ತು. ತಾಯಿಯಾಗುವ ಹಂಬಲ ದಿನೇ ದಿನೇ ಹೆಚ್ಚಾಗಿತ್ತು. ಮಡಿಲು ತುಂಬಲು ಮಗು ಬೇಕು ಅನ್ನೋ ಆಸೆಯೇ ಚಿಂತೆಗೆ ಕಾರಣವಾಗಿತ್ತು. ಮದುವೆಯಾಗಿ ಹತ್ತು ವರ್ಷಗಳಾದರೂ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದ ಕಾರಣ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆಗ ಮಹಿಳೆಯ ಮನೆಯವರಿಗೆ ಮಾಂತ್ರಿಕನ ಬಳಿ ಹೋದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಅಂತಾ ಯಾರೋ ಹೇಳಿದ್ದಾರೆ. ಹೀಗಾಗಿ ಕುಟುಂಬ ಮಾಂತ್ರಿಕನ ಮೊರೆ ಹೋಗಿದ್ದರು.

ಮಾಂತ್ರಿಕನ ಬಳಿಗೆ ಮಹಿಳೆಯನ್ನು ಕರೆದುಕೊಂಡು ಹೋದಾಗ ಯಾವುದೋ ಪೂಜೆ ಮಾಡುತ್ತೇವೆ. 1 ಲಕ್ಷ ರೂಪಾಯಿ ಕೊಡಬೇಕು. ಆಮೇಲೆ ಮಕ್ಕಳಾಗುವಂಕೆ ಮಾಡುತ್ತೇನೆ ಅಂತಾ ಮಾಂತ್ರಿಕ ನಂಬಿಸಿದ್ದಾನೆ. ಅದನ್ನು ನಂಬಿ 2,200 ರೂಪಾಯಿ ಮುಂಗಡ ಹಣ ಕೊಟ್ಟು ಬಂದಿದ್ದರು. ಜುಲೈ 6 ರಂದು ಮಹಿಳೆ ಅನುರಾಧಾ ಮಾಂತ್ರಿಕನ ಬಳಿ ಬಂದಿದ್ದಾರೆ. ಆದರೆ, ಅಲ್ಲಿ ಮಾಂತ್ರಿಕನ ಹೆಂಡತಿ ಹಾಗೂ ಸಹಾಯಕರು ಆಕೆಯ ಕೂದಲನ್ನು ಎಳೆದು, ಉಸಿರುಗಟ್ಟಿಸಿದ್ದರು. ಚರಂಡಿ ಹಾಗೂ ಶೌಚಾಲಯದ ನೀರನ್ನು ಕುಡಿಸಿದ್ದರು. ಕೇಳಿದರೆ, ಇದೇ ಮಕ್ಕಳಾಗಲು ನಡೆಸುವ ಆಚರಣೆ ಅಂತಾ ನಂಬಿಸಿದ್ದರು. ಇದರಿಂದಾಗಿ ಮಹಿಳೆಯ ಆರೋಗ್ಯ ತೀವ್ರ ಹದಗೆಟ್ಟು ಹೋಯ್ತು. ಮಹಿಳೆಯ ಸ್ಥಿತಿ ತೀರಾ ಹದಗೆಟ್ಟಿರುವುದನ್ನು ಗಮನಿಸಿ, ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಮಹಿಳೆ ಸಾವನ್ನಪ್ಪಿರುವ ಸುದ್ದಿ ತಿಳಿದ ಬಳಿಕ ಮಾಂತ್ರಿಕನ ಕಟುಂಬ ಪರಾರಿಯಾಗಿದೆ. ಅನುರಾಧಾಳ ಶವವನ್ನು ಮರಳಿ ತಂದ ಕುಟುಂಬದವರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದರು. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು.

Sulekha