ಟ್ರಿಪ್‌ಗೆ ಹೋಗಲು ಬಿಟ್ಟಿಲ್ಲ ಎಂದು ಪ್ರಾಣ ಬಿಟ್ಟ ಮಹಿಳೆ! – ಫಾರಿನ್‌ನಿಂದ ಬಂದ ಮಗಳು ಆರೋಪ ಮಾಡಿದ್ದು ಅಪ್ಪ, ತಮ್ಮನ ಮೇಲೆ!

ಗಂಡ ಹೆಂಡ್ತಿ ಜಗಳ ಕಾಮನ್. ಎಷ್ಟು ಜಗಳ ಮಾಡಿದ್ರೂ ಸ್ವಲ್ಪ ಹೊತ್ತಾದ ಮೇಲೆ ಒಂದಾಗ್ತಾರೆ. ಆದ್ರೆ ಇಲ್ಲೊಂದು ಕಡೆ ಗಂಡ ಟ್ರಿಪ್ ಹೋಗಲು ಬಿಟ್ಟಿಲ್ಲ ಎಂದು ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾರೆ. ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಮಗಳು ತಂದೆ, ತಮ್ಮನ ಮೇಲೆ ಸ್ಪೋಟಕ ಹೇಳಿಕೆ ನೀಡಿದ್ದಾಳೆ.
ಇದನ್ನೂ ಓದಿ: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್‌ಲೆಸ್ ರೈಲು! – ಏನಾಯ್ತು?
ಈ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಂಧ್ಯಾ (46) ಮೃತ ಮಹಿಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂಧ್ಯಾ 25 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ರಂಗನಾಥ್ ಎಂಬುವವರನ್ನು ಮದುವೆಯಾಗಿದ್ದರು. ಸದ್ಯ ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗಳು ಸೃಷ್ಟಿ ವಿದೇಶದಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಮಗ ಕೌಶಿಕ್ (17) ತಂದೆ-ತಾಯಿ ಜೊತೆ ಮೈಸೂರಿನಲ್ಲಿ ವಾಸವಾಗಿದ್ದ. ಬುಧವಾರ ರಾತ್ರಿ ಪ್ರವಾಸಕ್ಕೆ ಹೋಗುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿದೆ. ಜಗಳದ ನಂತರ ಪತಿ ರಂಗನಾಥ್ ಮತ್ತು ಮಗ ಮನೆಯಿಂದ ಹೊರಹೋಗಿದ್ದಾರೆ. ಅವರು ವಾಪಸ್ ಬರುವಷ್ಟರಲ್ಲಿ ಸಂಧ್ಯಾ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ತಾಯಿ ಸಂಧ್ಯಾ ಅವರ ಸಾವಿನ ಸುದ್ದಿ ತಿಳಿದು ವಿದೇಶದಿಂದ ಬಂದಿರುವ ಮಗಳು ಸೃಷ್ಟಿ, ತಂದೆ ರಂಗನಾಥ್ ಮತ್ತು ತಮ್ಮನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ತಾಯಿಯ ನಿಧನಕ್ಕೆ ನನ್ನ ತಂದೆ ಹಾಗೂ ಸಹೋದರನೇ ಕಾರಣ. ತಂದೆ ಪ್ರತಿನಿತ್ಯ ತಾಯಿಯನ್ನು ಅನುಮಾನದಿಂದ ನೋಡುತ್ತಿದ್ದರು. ಹಣ, ಹಣ ಎಂದು ಕಿರುಕುಳ ನೀಡುತ್ತಿದ್ದರು. ನನ್ನ ಸಹೋದರ ಕೂಡ ತಂದೆಯ ಮಾತು ಕೇಳಿಕೊಂಡು ಕೆಟ್ಟ ಬುದ್ಧಿ ಕಲಿತಿದ್ದಾನೆ. ತಾಯಿಗೆ ಹಿಂಸೆ ನೀಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ. ನನ್ನ ತಾಯಿಯ ಅಂತ್ಯಸಂಸ್ಕಾರವನ್ನು ತಂದೆಯಾಗಲಿ, ತಮ್ಮನಾಗಲಿ ಮಾಡಬಾರದು. ನನ್ನ ಮಾವನೇ (ತಾಯಿಯ ಸಹೋದರ) ಅಂತ್ಯಕ್ರಿಯೆ ನೆರವೇರಿಸಬೇಕು ಎಂದಿದ್ದಾರೆ.
ಇನ್ನು ಮಗಳ ಆರೋಪವನ್ನು ತಳ್ಳಿಹಾಕಿರುವ ಪತಿ ರಂಗನಾಥ್, ನಾನು ಪತ್ನಿಯನ್ನು ಕೊ* ಮಾಡಿಲ್ಲ. ಪ್ರವಾಸದ ವಿಚಾರಕ್ಕೆ ಗಲಾಟೆಯಾಗಿದ್ದು ನಿಜ. ಆದರೆ ನಾನು ಆಕೆಯನ್ನು ಕೊ*ದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಡೆನ್ಮಾರ್ಕ್ ಸೇರಿದಂತೆ ಹಲವು ಕಡೆ ಪ್ರವಾಸಕ್ಕೆ ನಾನೇ ಕಳುಹಿಸಿಕೊಟ್ಟಿದ್ದೆ. ಬುಧವಾರವೂ ಪ್ರವಾಸದ ವಿಚಾರಕ್ಕೆ ಜಗಳವಾಯಿತು. ನಾನು ಹೊರಗೆ ಹೋಗಿ ಬರುವಷ್ಟರಲ್ಲಿ ಆಕೆ ಹಾಗೆ ಮಾಡಿಕೊಂಡಿದ್ದಾಳೆ.
ಒಂದೂವರೆ ವರ್ಷದ ಹಿಂದೆ ವಾಟ್ಸಾಪ್ ಕಾಲ್ ವಿಚಾರಕ್ಕೆ ಗಲಾಟೆ ಆಗಿತ್ತು. ಆದರೆ ನಾನು ನನ್ನ ಶೇ.90 ರಷ್ಟು ಆಸ್ತಿಯನ್ನು ಹೆಂಡತಿಯ ಹೆಸರಿಗೇ ಮಾಡಿದ್ದೇನೆ. ಮಗಳು ಯಾರದ್ದೋ ಮಾತು ಕೇಳಿ, ಅಲ್ಲಿಂದಲೇ ಹೀಗೆ ಮಾತನಾಡುತ್ತಿದ್ದಾಳೆ. ಅವಳಿಗೆ ಇಲ್ಲಿನ ವಾಸ್ತವ ಗೊತ್ತಿಲ್ಲ. ಹಿಂದೂ ಸಂಪ್ರದಾಯದಂತೆ ಮಗನೇ ಅಂತ್ಯಕ್ರಿಯೆ ಮಾಡಬೇಕು. ಎಫ್‌ಎಸ್‌ಎಲ್ (FSL) ವರದಿ ಬರಲಿ, ಸತ್ಯ ತಿಳಿಯುತ್ತದೆ ಎಂದು ರಂಗನಾಥ್ ಹೇಳಿದ್ದಾರೆ.

ನೋಡಿರಿ

