ರಸ್ತೆಬದಿಯಲ್ಲಿ ಹೋಗುತ್ತಿದ್ದ ಕಂದನ ಮೇಲೆ ಚಲಿಸಿದ ವಾಟರ್ ಟ್ಯಾಂಕರ್ – ಮುದ್ದು ಮಗನ ಕಳೆದುಕೊಂಡು ಹೆತ್ತವರ ಆಕ್ರಂದನ
ನಾಲ್ಕು ವರ್ಷದ ಪುಟ್ಟ ಕಂದ ವಾಟರ್ ಟ್ಯಾಂಕರ್ಗೆ ಸಿಲುಕಿ ಸಾವನ್ನಪ್ಪಿರುವ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾಲ್ಕು ವರ್ಷದ ಮುದ್ದು ಪುಟಾಣಿ ಭುವನ್, ಬೇಸಿಗೆಯ ಬಿಸಿ ತಣಿಸಿಕೊಳ್ಳಲು ಅಣ್ಣನ ಜೊತೆ ಐಸ್ಕ್ರೀಸ್ ತರಲು ಬೇಕರಿಗೆ ಹೋಗಿದ್ದಾನೆ. ಐಸ್ಕ್ರೀಮ್ ತಿನ್ನಬೇಕು ಅಂತಾ ಖುಷಿಯಲ್ಲಿಯೇ ಅಣ್ಣನ ಜೊತೆ ರಸ್ತೆಬದಿಯಲ್ಲಿಯೇ ಜಾಗೃತೆಯಿಂದಲೇ ಹೋಗುತ್ತಿದ್ದ. ಅಣ್ಣ ಕೂಡಾ ಪುಟ್ಟ ತಮ್ಮನ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದ. ಆಗ ದಿಢೀರ್ ಅಂತಾ ಬಂದ ವಾಟರ್ ಟ್ಯಾಂಕರ್ ಮುದ್ದು ಕಂದನ ಮೇಲೆಯೇ ಚಲಿಸಿದೆ.
ಇದನ್ನೂ ಓದಿ: ಪತ್ನಿಯ ಅಂತ್ಯಕ್ರಿಯೆ ಮುಗಿಸಿ ಮಗಳ ಶವ ಹುಡುಕಲು ಹೊರಟ ನತದೃಷ್ಟ – ರೈಲು ದುರಂತದಿಂದ ಕಣ್ಣೀರಿಗಿಲ್ಲ ಕೊನೆ..!
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಿಕೆ ಪಾಳ್ಯದಲ್ಲಿ ಈ ದುರಂತ ಸಂಭವಿಸಿದೆ. ಅಣ್ಣನ ಜತೆ ಐಸ್ಕ್ರೀಮ್ ಕೊಳ್ಳಲು ಬೇಕರಿಗೆ ಬಂದಿದ್ದ ಭುವನ್ ಮೇಲೆ ವಾಟರ್ ಟ್ಯಾಂಕರ್ ಚಲಿಸಿದೆ. ಚಾಲಕ ಕುಡಿದ ಅಮಲಿನಲ್ಲಿ ವಾಟರ್ ಟ್ಯಾಂಕರ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ವಾಟರ್ ಟ್ಯಾಂಕರ್ ಭುವನ್ ತಲೆ ಮೇಲೆ ಹರಿದಿದ್ದು ಗಂಭೀರ ಗಾಯಗೊಂಡಿದ್ದ. ತಕ್ಷಣವೇ ಓಡೋಡಿ ಬಂದ ಸ್ಥಳೀಯರು ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ. ಘಟನೆ ನಂತರ ವಾಟರ್ ಟ್ಯಾಂಕರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಭುವನ್ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.