ಊರಿಗೆ ಅಂಟಿರುವ ಮಾರಿ ತಡೆವ ಬೇಲಿ…! – ಮನೆ ಮನೆಗೆ ಬರುವ ಆಟಿ ಕಳೆಂಜ..!
ಉಡುಪಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮನೆ ಮನೆಗೂ ಚಿಕ್ಕಮೇಳದವರು ಬರುತ್ತಾರೆ. ಮನೆಯೊಳಗೆ ಯಕ್ಷಗಾನದ ಕಂಪು ಬೀರಿ ಹೋಗುತ್ತಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಮನೆ ಮನೆಗೆ ಆಟಿ ಕಳೆಂಜ ಬರುವುದು ಹಿಂದಿನಿಂದಲೂ ಬಂದ ಆಚರಣೆ. ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿ ತುಳುನಾಡಿನಲ್ಲಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಹೆಚ್ಚು. ಜೊತೆಗೆ ಎಡೆ ಬಿಡದೆ ಸುರಿಯುವ ಮಳೆಯಿಂದಾಗಿ ಅನೇಕ ವಿಪತ್ತುಗಳು ಎದುರಾಗುತ್ತಿದ್ದವು. ಜೊತೆಗೆ ಈ ಮಾಸದಲ್ಲಿ ಜನರು ಆನಾರೋಗ್ಯಕ್ಕೂ ಹೆಚ್ಚು ತುತ್ತಾಗುತ್ತಿದ್ದರು. ಹಾಗಾಗಿ ಇಂತಹ ಕಷ್ಟದ ಸಮಯದಲ್ಲಿ ಜನರಿಗೆ ಸಾಂತ್ವನ ಹೇಳಲೆಂದೇ ಮನೆ ಮನೆಗೆ ಆಟಿ ಕಳೆಂಜ ವೇಷಧಾರಿ ಬರುತ್ತಾರೆ ಎಂಬ ನಂಬಿಕೆ ತುಳುನಾಡ ಜನರದ್ದು.
ಇದನ್ನೂ ಓದಿ: ಮಳೆಗಾಲದಲ್ಲಿ ‘ವಜ್ರ’ಗಳ ಬೇಟೆ – ಕೆಲವು ರೈತರಿಗೆ ಸುಗ್ಗಿ.. ಇನ್ನು ಕೆಲವರಿಗೆ ಹುಡುಕುವುದೇ ಕಾಯಕ..!
ಆಟಿ ಕಳೆಂಜ ಎಂಬುವುದು ತುಳುನಾಡಿನ ನಂಬಿಕೆ ಮತ್ತು ವಿಶೇಷ ಜನಪದ ಕಲೆ. ಕಳೆಂಜನು ಆಟಿಯ ಕಾಲದಲ್ಲಿ ಊರಿನ ಮಾರಿಯನ್ನು ಹೋಗಲಾಡಿಸಲು ಬರುವ ಶಕ್ತಿಯೆಂದು ಒಂದು ನಂಬಿಕೆ ಇದೆ. ನಳಿಕೆ ಸಮುದಾಯದವರು ಈ ಆಟಿ ಕಳೆಂಜ ವೇಷವನ್ನು ಧರಿಸುತ್ತಾರೆ. ತೆಂಗಿನ ಗರಿಯಿಂದ ತಯಾರಿಸಿದ ವೇಷಭೂಷಣ ಹಾಗೂ ಒಂದು ವಾಮನ ಛತ್ರಿಯನ್ನು ಹಿಡಿದು ಮೊದಲಿಗೆ ತಮ್ಮ ಮನೆಯ ಭೂತಕಟ್ಟೆಗೆ ನಮಸ್ಕರಿಸಿ, ಊರಿನ ಕಷ್ಟ ಕಾರ್ಪಣ್ಯವನ್ನು ದೂರ ಮಾಡಲು ಊರಿನ ಸಂಚಾರಕ್ಕೆ ಹೊರಡುತ್ತಾರೆ. ಹೀಗೆ ಹೊರಟವರು ಮೊದಲು ಕೃಷಿ ಭೂಮಿಯ ಮೂಲಕ ಕಾಲ್ನಡಿಗೆಯನ್ನು ಪ್ರಾರಂಭಿಸುತ್ತಾರೆ. ಆಟಿ ಕಳೆಂಜ ಕೃಷಿ ಭೂಮಿಗೆ ಪ್ರದಕ್ಷಿಣೆ ಬಂದರೆ ಕೃಷಿ ಭೂಮಿಗೆ ಅಂಟಿರುವ ರೋಗರುಜಿನಗಳು ನಿವಾರಣೆಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಹೀಗೆ ಆಟಿ ಕಳೆಂಜ ಮನೆಮನೆಗೆ ಬರುವಾಗ ಇದ್ದಿಲು, ಅರಶಿನ ಮತ್ತು ಹುಣಸೆ ನೀರಿನ ಮಿಶ್ರಣವನ್ನು ಮನೆಯ ಬಳಿ ಚಿಮುಕಿಸುತ್ತಾರೆ. ಧನಾತ್ಮಕ ಶಕ್ತಿಯನ್ನು ಹರಡುವ ಮೂಲಕ ಕುಟುಂಬ ಮತ್ತು ಜಾನುವಾರುಗಳಿಗೆ ಸಂಭವಿಸಬಹುದುದಾದ ಯಾವುದೇ ದುರಾದೃಷ್ಟವನ್ನು ನಿವಾರಿಸಲು ಇದನ್ನು ಮಾಡಲಾಗುತ್ತದೆ. ಆಟಿ ಕಳೆಂಜನ ಜೊತೆಗೆ ಟೆಂಬರೆ ಎಂಬ ಒಂದು ಬಗೆಯ ಡೋಳನ್ನು ಹಿಡಿದು ಪಾರ್ದನ ಹಾಡುವವರು ಕೂಡಾ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ತಮ್ಮ ಪಾರ್ದನದ ಮೂಲಕ ಊರಿನಲ್ಲಿನ ಜನರು, ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ಬರುವ ರೋಗ ರುಜಿನಗಳನ್ನು ನೀನು ದೂರ ಮಾಡು ಕಳೆಂಜ ಎಂದು ಆಟಿ ಕಳೆಂಜನಲ್ಲಿ ಪ್ರಾರ್ಥಿಸುತ್ತಾರೆ. ಮನೆಮನೆಗೆ ಆಟಿ ಕಳೆಂಜ ಭೇಟಿ ಕೊಡುವಾಗ ಪ್ರತಿಯೊಂದು ಮನೆಯವರು ಕೂಡಾ ಅಕ್ಕಿ, ತೆಂಗಿಕಾಯಿ, ಮೆಣಸು, ಉಪ್ಪು ಜೊತೆಗೆ ಸ್ವಲ್ಪ ಇದ್ದಿಲನ್ನು ಕಾಣಿಕೆಯಾಗಿ ಕೊಡುವ ಸಂಪ್ರದಾಯವಿದೆ. ಹೀಗೆ ಊರೆಲ್ಲಾ ಸುತ್ತಾಡುತ್ತಾ, ಆಟಿಯ ಕಷ್ಟದ ದಿನದಲ್ಲಿ ಊರಿನ ಜನರಿಗೆಲ್ಲಾ ಸಾಂತ್ವನ ಹೇಳುವ ಕೆಲಸವನ್ನು ಕಳೆಂಜ ಮಾಡುತ್ತಾರೆ. ಆಟಿಯ ಕೊನೆಯ ದಿನವಾದ ಪೌರ್ಣಮಿಯ ದಿನದಂದು ಆಟಿ ಕಳೆಂಜ ವೇಷಕ್ಕೆ ತೆರೆ ಬೀಳುತ್ತದೆ. ಊರಿನವರು ನೀಡಿದ ಕಾಣಿಕೆಯ ಸ್ವಲ್ಪ ಭಾಗವನ್ನು ನೆಕ್ಕಿ ಎಂಬ ಹೆಸರಿನ ಮರದ ಎಲೆಯಲ್ಲಿಟ್ಟು, ಅದನ್ನು ಭೂತ ಕಲ್ಲಿಗೆ ನೈವೇದ್ಯವಾಗಿ ನೀಡುತ್ತಾರೆ. ಊರಿಗೆ ಬಂದಿರುವ ಮಾರಿ ದೂರವಾಗಲೆಂದು ದೈವದ ಬಳಿ ಮನಸಾರೆ ಪ್ರಾರ್ಥಿಸುತ್ತಾರೆ.