ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ಗೆ ಟ್ವಿಸ್ಟ್! – ಮಲೆನಾಡಿಗೂ ಸ್ಪೋಟಕ್ಕೂ ನಂಟೇನು?
ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಉಗ್ರರ ಜಾಡನ್ನ ಹಿಡಿದು ಎನ್ಐಎ ಹುಡುಕಾಟ ನಡೆಸುತ್ತಿದೆ. ಇದೀಗ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸ್ಫೋಟಕ ಟ್ಬಿಸ್ಟ್ ಸಿಕ್ಕಿದೆ. ಈ ಪ್ರಕರಣದ ಸಂಬಂಧ ಈಗಾಗಲೇ ಇಬ್ಬರ ಬಂಧನ ಮಾಡಲಾಗಿದೆ.
ಇದನ್ನೂ ಓದಿ: ಹೊಸ ದೋಸ್ತಿ.. ಹಳೇ ಕುಸ್ತಿ! – ಬಿಜೆಪಿಗಾಗಿ ಮಾತ್ರವೇ ಹೊಂದಾಣಿಕೆ?
ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ ಮಾಝ್ ಮುನೀರ್ನನ್ನೇ ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಮೊದಲ ಆರೋಪಿಯನ್ನಾಗಿ ಮಾಡಿದೆ. ಜೈಲು ಸೇರುವ ಮೊದಲೇ ಕೆಲವೊಂದು ಕಡೆ ಸ್ಫೋಟಕ್ಕೆ ಪ್ಲ್ಯಾನ್ ಮಾಡಿದ ಹಿನ್ನೆಲೆಯಲ್ಲಿ ಆತನನ್ನೇ ಎ1 ಆರೋಪಿಯನ್ನಾಗಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದ ಮಾಝ್ ಮುನೀರ್ನನ್ನು ಎನ್ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ರೇಡ್ ಮಾಡಿದ ಬಳಿಕ ಮಾಝ್ ಬ್ಯಾರಕ್ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದ್ದು, ಈಗ ಬಂಧನ ಆಗಿರೋ ಮುಜಾಮಿಲ್ ಷರೀಫ್ ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಏನಿದು ಶಿವಮೊಗ್ಗ ಸ್ಫೋಟ ಕೇಸ್?
ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್, ಮಾಜ್ ಮುನೀರ್, ಶಾರೀಕ್ ಅಹ್ಮದ್ ಶಿಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು. ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ ಮುನೀರ್ ಮಂಗಳೂರಿನ ಮುಡಿಪು ಸಮಿಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದ. ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ.
ಸೈಯದ್ ಯಾಸಿನ್ ನಿವಾಸದಿಂದ 3-4 ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರದ್ದಲ್ಲಿ ಇವರೆಲ್ಲ ಟ್ರಯಲ್ ಬಾಂಬ್ ಸ್ಫೋಟ ಮಾಡುತ್ತಿದ್ದರು. ಈ ಮೂವರು ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು. ಮೂವರೂ ಬಾಂಬ್ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು ಎಂದು ವರದಿಯಾಗಿದೆ.