ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ದಾರಿ ಮಧ್ಯೆ ಗುಂಡಿಕ್ಕಿ ಕೊಂದಿದ್ದು 18ರ ಯುವಕನ ಗ್ಯಾಂಗ್

ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ದಾರಿ ಮಧ್ಯೆ ಗುಂಡಿಕ್ಕಿ ಕೊಂದಿದ್ದು 18ರ ಯುವಕನ ಗ್ಯಾಂಗ್

ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯ ಬಯಲಾಗಿದೆ. 18 ವರ್ಷದ ಯುವಕನ ಗ್ಯಾಂಗ್ ಈ ಭೀಕರ ಹತ್ಯೆ ಮಾಡಿದೆ. ಬಾಲಿವುಡ್ ಸಿನಿಮಾಗಳಿಂದ ಪ್ರಭಾವಿತನಾಗಿದ್ದ ಯುವಕನೊಬ್ಬ ತನ್ನದೇ ಆದ ಒಂದು ಗ್ಯಾಂಗ್ ಕಟ್ಟಿಕೊಂಡಿದ್ದ. ಅವರ ಜೊತೆ ಸೇರಿಯೇ ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರ್‌ನನ್ನು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ:  ಕಾಡಾನೆ ಭೀಮನ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ – ಆನೆಗೆ ಚಿಕಿತ್ಸೆ ನೀಡಲು ಹೋಗಿ ತನ್ನ ಜೀವ ಬಲಿಕೊಟ್ಟ ವೆಂಕಟೇಶ್..!

18ರ ಯುವಕ ಮೊಹಮ್ಮದ್ ಸಮೀರ್ ಅಲಿಯಾಸ್ ಮಾಯಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2 ಸಾವಿರ ಫಾಲೋವರ್ಸ್ ಹೊಂದಿದ್ದಾನೆ. ‘ನಾನು ಕುಖ್ಯಾತಿ, ಸ್ಮಶಾನವೇ ನನ್ನ ವಿಳಾಸ, ಇದು ನನಗೆ ಬದುಕುವ ವಯಸ್ಸು. ಆದ್ರೆ, ನಾನು ಸಾಯಲು ಬಯಸುತ್ತೇನೆ’ ಎಂದು ಆತ ಬರೆದುಕೊಂಡಿದ್ದಾನೆ. ಬಂದೂಕುಗಳನ್ನ ಹಿಡಿದುಕೊಂಡು ಫೋಟೋ ತೆಗೆಸಿಕೊಂಡು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ. ಜೊತೆಗೆ ಕೆಲವು ಸಿನಿಮಾಗಳ ಡೈಲಾಗ್ ಹೇಳುತ್ತಿರುವುದನ್ನು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದ. ಬಾಲಿವುಡ್ ಸಿನಿಮಾಗಳಿಂದ ಪ್ರಭಾವಿತನಾಗಿ 12 ಮಂದಿ ಅಪ್ರಾಪ್ತರನ್ನೂ ಸೇರಿಸಿಕೊಂಡು ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಅದಕ್ಕೆ ‘ಮಾಯಾ ಗ್ಯಾಂಗ್’ ಎಂದೂ ಹೆಸರಿಟ್ಟಿದ್ದ. ಈ ಪ್ರಕರಣದಲ್ಲಿ ಸಿಕ್ಕಿಕೊಳ್ಳುವುದಕ್ಕೂ ಮುನ್ನವೇ ಹಿಂದೆ ನಾಲ್ಕು ಕೊಲೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ. ಇದೀಗ ಮ್ಯಾನೇಜರ್ ಹತ್ಯೆಗೆ ಸಂಬಂಧಿಸಿದಂತೆ ಮಾಯಾ ಮತ್ತು ಅವನ 18 ವರ್ಷದ ಸಹವರ್ತಿ ಬಿಲಾಲ್ ಗನಿ ಎಂಬಾತನನ್ನ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರ್ 36 ವರ್ಷದ ಹರ್ಪ್ರೀತ್ ಗಿಲ್ ಎಂಬಾತನನ್ನ ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದಿದ್ದರು. ಈ ಘಟನೆ ದೆಹಲಿಯಲ್ಲಿ ನಡೆದಿತ್ತು. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಆರೋಪಿಗಳಾದ ಮಾಯಾ, ಗನಿ ಮತ್ತು ಅವರ ಸಹಚರರಾದ ಸೊಹೈಲ್ (23), ಮೊಹಮ್ಮದ್ ಜುನೈದ್ (23) ಮತ್ತು ಅದ್ನಾನ್ (19) ಎರಡು ಸ್ಕೂಟರ್‌ಗಳಲ್ಲಿ ಪಾರ್ಟಿ ಮುಗಿಸಿ ಹಿಂದಿರುಗುತ್ತಿದ್ದರು. ಅದೇ ರಸ್ತೆಯಲ್ಲಿ ಗಿಲ್ ಮತ್ತು ಅವನ ಚಿಕ್ಕಪ್ಪ ಗೋವಿಂದ್ ಬರುತ್ತಿದ್ದರು. ರಸ್ತೆಯಲ್ಲಿ ಇವರಿಬ್ಬರ ವಾಹನಗಳು ಮುಖಾಮುಖಿಯಾದ ನಂತರ ದಾರಿ ಬಿಡುವ ವಿಚಾರಕ್ಕೆ ಜಗಳ ಶುರುವಾಗಿದೆ. ಬಳಿಕ ವಿಕೋಪಕ್ಕೆ ತಿರುಗಿ ಮಾಯಾ ಗ್ಯಾಂಗ್ ಹರ್ಪ್ರೀತ್ ಗಿಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವನ ಚಿಕ್ಕಪ್ಪ ಗೋವಿಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಕೆಲವು ಆರೋಪಿಗಳನ್ನ ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

suddiyaana