ಬಾಲಕನನ್ನು ಬಲಿ ಪಡೆದ ಹುಲಿ – ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರದ ಚೆಕ್

ಬಾಲಕನನ್ನು ಬಲಿ ಪಡೆದ ಹುಲಿ – ಅರಣ್ಯ ಇಲಾಖೆಯಿಂದ 15 ಲಕ್ಷ ರೂಪಾಯಿ ಪರಿಹಾರದ ಚೆಕ್

ಶಾಲೆಗೆ ಹೋಗಿ ಬಂದ ಬಾಲಕ ಆಗಷ್ಟೇ ಜಮೀನಿಗೆ ಖುಷಿ ಖುಷಿಯಾಗಿ ಹೋಗಿದ್ದಾನೆ. ಪೋಷಕರು ಜಮೀನಿನಲ್ಲಿದ್ದ ಕಾರಣ ಶಾಲೆಯಿಂದ ಬಂದವನೇ ಜಮೀನಿಗೆ ಓಡೋಡಿ ಬಂದಿದ್ದ. ಪೋಷಕರು ಕೂಡಾ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಪೋಷಕರ ಕೆಲಸ ಮುಗಿಯುವುದನ್ನೇ ಕಾಯುತ್ತಿದ್ದ ಕಂದ ಮರದ ಕೆಳಗೆ ಕುಳಿತಿದ್ದ. ಆಗ ಅದೆಲ್ಲಿತ್ತೋ ಕ್ರೂರ ವ್ಯಾಘ್ರ. 7 ವರ್ಷದ ಕಂದನನ್ನು ಹೊತ್ತೊಯ್ದು ಬಲಿ ಪಡೆದಿದೆ. ಮೈಸೂರಿನ ಗಡಿ ತಾಲೂಕು ಹೆಚ್.ಡಿ.ಕೋಟೆಯ ಕಲ್ಲಹಟ್ಟಿ ಗ್ರಾಮದಲ್ಲಿ ಇಂಥಾದ್ದೊಂದು ದಾರುಣ ಘಟನೆ ನಡೆದಿದೆ.

ಇದನ್ನೂ ಓದಿ: ಕಾಡಾನೆ ಭೀಮನ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ – ಆನೆಗೆ ಚಿಕಿತ್ಸೆ ನೀಡಲು ಹೋಗಿ ತನ್ನ ಜೀವ ಬಲಿಕೊಟ್ಟ ವೆಂಕಟೇಶ್..!

ಸೋಮವಾರ ಎಂದಿನಂತೆ ಶಾಲೆಗೆ ಹೋಗಿ ಬಂದು ಹೆತ್ತವರು ಹೊಲದಲ್ಲಿದ್ದಾರೆ ಎಂದು ಜಮೀನಿನತ್ತ ಓಡೋಡಿ ಬಂದಿದ್ದ. ಹೆತ್ತವರು ಕೂಡಾ ಮಗ ಶಾಲೆಯಿಂದ ಬರುವ ಸಮಯವಾಯ್ತು ಬೇಗ ಕೆಲಸ ಮುಗಿಸಬೇಕು ಎಂದುಕೊಳ್ಳುತ್ತಿರುವಾಗಲೇ ಮಗ ಚರಣ್ ಜಮೀನಿಗೆ ಓಡೋಡಿ ಬಂದಿದ್ದ. ಶಾಲೆ ಬಿಟ್ಟು ಬಂದ ಮಗನ ಕಂಡು ಸಂತಸಗೊಂಡ ಹೆತ್ತವರು ಅಲ್ಲೇ ಇದ್ದ ಮರದ ಕೆಳಗೆ ಕುಳಿತುಕೊಳ್ಳಲು ಹೇಳಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ತಂದೆ ಕೃಷ್ಣೞನಾಯಕ ಮತ್ತು ತಾಯಿ ಜಮೀನಿನಲ್ಲಿ ಮೆಣಸಿಕಾಯಿ ಬಿಡಿಸುತ್ತಿದ್ದರು. ಮಗ ಯಾಕೆ ಏನೂ ಮಾತಾಡುತ್ತಿಲ್ಲ ಎಂದು ಮರದ ಬಳಿ ನೋಡಿದಾಗ ಮಗ ಕಾಣಿಸಲಿಲ್ಲ. ತಕ್ಷಣವೇ ಕೃಷ್ಣ ನಾಯಕ ಮಗ ಚರಣ್ ನನ್ನು ಕೂಗಿ ಕರೆದಿದ್ದಾರೆ. ಆಗಲೂ ಮಗ ಮಾತಾಡಿಲ್ಲ. ಗಾಬರಿಗೊಂಡ ಪೋಷಕರು ಮಗನಿಗಾಗಿ ಹುಡುಕಾಡಿದರೆ,  ಚರಣ್ ಕುಳಿತಿದ್ದ ಸ್ವಲ್ಪ ದೂರದಲ್ಲಿ ಚರಣ್ ಮೃತದೇಹ ರಕ್ತ ಸಿಕ್ತವಾಗಿ ಪತ್ತೆಯಾಗಿತ್ತು. ಚರಣ್ ಒಂದು ಕಾಲಿನ ಭಾಗವನ್ನು ಹುಲಿ ಸಂಪೂರ್ಣ ತಿಂದು ಹಾಕಿತ್ತು. ಅಪ್ಪ ಅಮ್ಮನ ನೋಡಲು ಜಮೀನಿಗೆ ಓಡೋಡಿ ಬಂದ 7 ವರ್ಷದ ಕಂದ ಹುಲಿ ಬಾಯಿಗೆ ಆಹಾರವಾಗಿದ್ದ. ಇಂಥಾ ಭೀಕರ ದೃಶ್ಯ ಕಂಡ ಹೆತ್ತವರ ಸ್ಥಿತಿ ಹೇಗಾಗಬೇಡ. ಆಘಾತಕ್ಕೊಳಗಾಗಿ ಕುಸಿದುಬಿದ್ದ ಪೋಷಕರು, ಮಗನನ್ನು ಬಲಿ ಪಡೆದ ಹುಲಿಯನ್ನು ಈಗಲೇ ಪತ್ತೆ ಹಚ್ಚಿ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಗನನ್ನು ಕಳೆದುಕೊಂಡ ಹೆತ್ತವರಿಗೆ ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದೆ. ಹಾಗೂ ಹುಲಿ ಪತ್ತೆ ಹಚ್ಚಿ ಸೆರೆ ಹಿಡಿಯುವ ಭರವಸೆ ನೀಡಿದೆ. ಸಂಜೆ ಬಳಿಕ ಹೊರಗೆ ಓಡಾಡದಂತೆ ಗ್ರಾಮಸ್ಥರಿಗೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಕೂಡಾ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸುತ್ತಿದೆ. ದುಬಾರೆ ಕ್ಯಾಂಪ್ ನ ಸುಗ್ರೀವ, ಪ್ರಶಾಂತ ಆನೆಗಳನ್ನು ಕರೆಸಲಾಗಿದೆ.

suddiyaana