ಮೈಸೂರಿನಲ್ಲಿ ಉರುಳಿಗೆ ಹುಲಿ ಬಲಿ – ಅರಣ್ಯ ಅಧಿಕಾರಿಗಳೇ ಈ ಸಾವಿಗೆ ಹೊಣೆ ಯಾರು?

ಮೈಸೂರಿನಲ್ಲಿ ಉರುಳಿಗೆ ಹುಲಿ ಬಲಿ  –  ಅರಣ್ಯ ಅಧಿಕಾರಿಗಳೇ ಈ ಸಾವಿಗೆ ಹೊಣೆ ಯಾರು?

 ಹೆಚ್‌. ಡಿ. ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವನ್ಯಜೀವಿ’ ವಲಯದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. ಅಗಸರಹುಂಡಿ ಶಾಖೆ, ಮೇಟಿಕುಪ್ಪೆ 2ನೇ ಗಸ್ತಿನ ಕಾಡಂಚಿನ ಜಮೀನಿನಲ್ಲಿ ಮೂರು ವರ್ಷದ ಗಂಡು ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿದೆ.ಎರಡು ದಿನಗಳ ಹಿಂದೆ ಹುಲಿ ಮೃತಪಟ್ಟಿದ್ದು, ಶುಕ್ರವಾರ ಬೆಳಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಹುಲಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕಿ ಸೀಮಾ, ಎಸಿಎಫ್ ಮಧು ಮತ್ತು ಅರಣ್ಯಾಧಿಕಾರಿ ರಶ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ಮೃತದೇಹವನ್ನು ಡಾ. ರಮೇಶ್ ಮತ್ತು ಡಾ. ಪ್ರಸನ್ನ ಮರಣೋತ್ತರ ಪರೀಕ್ಷೆ ನಡೆಸಿ, ಅಲ್ಲಿಯೇ ಅಂತ್ಯಕ್ರಿಯೆ ಮಾಡಿದರು. ಈ ಸಂಬಂಧ ಜಮೀನಿನ ಮಾಲೀಕರಾದ ಅಗಸರಹುಂಡಿ ಗ್ರಾಮದ ಶಂಕರ್ ಮತ್ತು ಜಿ. ಎಂ. ಹಳ್ಳಿಯ ಗಿರೀಶ್ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಎರಡು ವಾರ ಆಡಲ್ಲ ಮಹೇಂದ್ರ ಸಿಂಗ್ ಧೋನಿ – ಥಲಾ ಅಭಿಮಾನಿಗಳಿಗೆ ಆರಂಭದಲ್ಲಿ ನಿರಾಸೆ

  ನಾಗರಹೊಳೆ ಕಾಡಿನ ಮೇಟಿಕುಪ್ಪೆ ವಲಯದ ಅರಣ್ಯದ ಗಡಿಯಿಂದ 300 ಮೀಟರ್ ದೂರದ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ 3 ವರ್ಷದ ಹುಲಿ ಬಲಿಯಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ದುರ್ಘಟನೆಯ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ಮಾಡಿಸಿ, ಸಿಬ್ಬಂದಿ ಗಸ್ತು ಕಾರ್ಯದಲ್ಲಿ ಲೋಪ ಎಸಗಿದಲ್ಲಿ ಕ್ರಮ ಕೈಗೊಳ್ಳಲು ಮತ್ತು ಉರುಳು ಹಾಕಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಾಡಿನಂಚಿನ ಜಮೀನುಗಳಲ್ಲಿ ಉರುಳು ತೆರವಿಗೆ ಕ್ರಮ ವಹಿಸಲು ಸಚಿವರು ಸೂಚಿಸಿದ್ದಾರೆ.

ಉರುಳು ತೆರವಿಗೆ ಸರ್ಕಾರ ಪದೇ ಪದೆ ಸೂಚಿಸಿದ್ದರೂ ಅಧಿಕಾರಿ ಸಿಬ್ಬಂದಿಯ ನಿರ್ಲಕ್ಷ್ಯ ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ತಿಳಿಸಿರುವ ಅವರು ಸಿಬ್ಬಂದಿಯ ಗಸ್ತು ಲೋಪದ ಬಗ್ಗೆಯೂ ತನಿಖೆಗೆ ಆದೇಶ ನೀಡಿದ್ದಾರೆ.

Kishor KV