ರೈತನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಹುಲಿ – ಮೈಸೂರಿನಲ್ಲಿ ವ್ಯಾಘ್ರನಿಗೆ ಆಹಾರವಾದ ಅನ್ನದಾತ

ರೈತನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಹುಲಿ – ಮೈಸೂರಿನಲ್ಲಿ ವ್ಯಾಘ್ರನಿಗೆ ಆಹಾರವಾದ ಅನ್ನದಾತ

ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ಹುಲಿಗೆ ಬಾಲಕನೊಬ್ಬ ಬಲಿಯಾಗಿದ್ದ. ಕೊನೆಗೂ ಅರಣ್ಯ ಇಲಾಖೆ ಆ ಹುಲಿಯನ್ನು ಸೆರೆಹಿಡಿದು ಗ್ರಾಮಸ್ಥರ ಭಯ ದೂರ ಮಾಡಿತ್ತು. ಇದೀಗ ಮತ್ತೆ ವ್ಯಾಘ್ರನ ಅಟ್ಟಹಾಸ ಮುಂದುವರೆದಿದೆ. ಮೈಸೂರು ಜಿಲ್ಲೆಯಲ್ಲಿ ಹುಲಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ಹುಲಿ ದಾಳಿ ನಡೆದಿದೆ.

ಇದನ್ನೂ ಓದಿ: ಹುಲಿ ಬೇಟೆಗೆ 17 ದಿನಗಳ ಸತತ ಕಾರ್ಯಾಚರಣೆ – ಕೊನೆಗೂ ಹೆತ್ತವರ ಕಣ್ಮುಂದೆ ಬಾಲಕನ ಬಲಿ ಪಡೆದ ಹುಲಿ ಸೆರೆ

ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ನಿವಾಸಿ 58 ವರ್ಷದ ಗಣೇಶ ಎಂಬವರು ಹುಲಿದಾಳಿಗೆ ಬಲಿಯಾಗಿದ್ದಾರೆ. ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ ರೈತ ಗಣೇಶ ದನ ಮೇಯಿಸುತ್ತಿದ್ದರು. ಈ ಸಂದರ್ಭದಲ್ಲಿ ಗಣೇಶ್ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಮೃತ ರೈತ ಗಣೇಶನಿಗೆ ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ. ಸೋಮವಾರ ರಾತ್ರಿ ಹಸುಗಳು ಮನೆಗೆ ವಾಪಸ್ ಆದರೂ ಗಣೇಶ್ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಅರಣ್ಯದಲ್ಲಿ ಹುಡುಕಾಟ ನಡೆಸಿದ್ದು ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್ ಅವರ ಶವ ಪತ್ತೆಯಾಗಿದೆ.

ಕಳೆದ ಸೆಪ್ಟೆಂಬರ್ 21ರಂದು ಇದೇ ಅರಣ್ಯ ವ್ಯಾಪ್ತಿಯಲ್ಲಿ ಮುದ್ದನಹಳ್ಳಿಯ ರಮೇಶ್ ಎಂಬುವವರ ಮೇಲೆ ಹುಲಿ ದಾಳಿ ನಡೆಸಿತ್ತು. ಘಟನೆಯಲ್ಲಿ ತೀವ್ರಗಾಯಗೊಂಡ ರಮೇಶ್ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಹುಲಿ ದಾಳಿಯಿಂದ ಈ ಭಾಗದ ಜನ ನಲುಗಿ ಹೋಗಿದ್ದು, ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದರೂ ಹುಲಿ ಸೆರೆಗೆ ಕ್ರಮ ವಹಿಸಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಗಣೇಶ್ ಹುಲಿ ದಾಳಿಯಿಂದ ಮೃತಪಟ್ಟಿರುವ ವಿಷಯ ತಿಳಿದ ಗ್ರಾಮಸ್ಥರು ದಾಳಿಯಾಗಿದ್ದ ಸ್ಥಳಕ್ಕೆ ಆಗಮಿಸಿ ಅಸಮಾಧಾನ ಹೊರಹಾಕಿದರು. ಶವವನ್ನು ಊರಿಗೆ ಕೊಂಡೊಯ್ಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಪಟ್ಟರು. ಆಗ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಬರುವವರೆಗೆ ಶವವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ನಡುವೆ ಮಾತಿನ ಚಕಮಕಿಯೂ ನಡೆಯಿತು.

Sulekha