ಕಾರು ಮಾರುತ್ತಾನೆ, ಮತ್ತದೇ ಕಾರನ್ನು ಕದಿಯುತ್ತಾನೆ – ಒಂದೇ ಕಾರನ್ನು ಎಂಟು ಸಲ ಮಾರಾಟ ಮಾಡಿದ ಕಿಲಾಡಿ ಕಳ್ಳ

ಕಾರು ಮಾರಾಟ ಮಾಡೋದು, ಅದೇ ಕಾರನ್ನು ಮಾರಾಟ ಮಾಡಿದ 24 ಗಂಟೆಯೊಳಗೆ ಕಳ್ಳತನ ಮಾಡೋದು. ಒಂದೇ ಕಾರು.. ಎಂಟು ಸಲ ಮಾರಾಟ ಮಾಡಿದ ಆತ ಆರಾಮಾಗಿ ಬದುಕು ಸಾಗಿಸುತ್ತಿದ್ದ. ತಪ್ಪು ಮಾಡಿದ ಮೇಲೆ ಒಂದಲ್ಲ ಒಂದು ಸಲ ಬಲೆಗೆ ಬೀಳಲೇ ಬೇಕಲ್ಲವೇ.. ಈಗ ಕಿಲಾಡಿ ಕಾರು ಕಳ್ಳ ಖಾಕಿ ಬಲೆಯಲ್ಲಿ ಒದ್ದಾಡುತ್ತಿದ್ದಾನೆ.
ಇದನ್ನೂ ಓದಿ:ಕೆಲಸ ಕೊಡಿಸುತ್ತೇನೆಂದು ಮಂಗಳೂರಿಗೆ ಕರೆತಂದ! – ಸ್ನೇಹಿತ ನಾಪತ್ತೆ.. ಉದ್ಯೋಗವಿಲ್ಲದೆ ಮರವೇರಿ ಕುಳಿತ ಯುವಕ!
ಕಾರು ಮಾರಾಟ ಮಾಡಿ, 24 ಗಂಟೆಯೊಳಗೆ ಕದ್ದು ಮತ್ತೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಿಲಾಡಿ ಕಳ್ಳ ಕಾನ್ಸಾಸ್ ನಗರದ ನಿವಾಸಿ ಮಾಮಡೌ ಡಿಯಲ್ಲೋ. ಈತ ಫೇಸ್ಬುಕ್ನಲ್ಲಿ ಕಾರು ಮಾರಾಟ ಮಾಡಿ ಅದೇ ದಿನ ಆ ಕಾರನ್ನು ಕದಿಯುತ್ತಿದ್ದ. ಈ ವ್ಯಕ್ತಿ ಇಲ್ಲಿಯವರೆಗೆ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ್ದಾನೆ. ಈತ ಒಪ್ಪಂದಗಳನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ನಕಲಿ ದಾಖಲೆಗಳನ್ನು ಬಳಸಿದ್ದ. ಕಾರನ್ನು ಕೊಡುವ ಮೊದಲು ಸಾವಿರಾರು ಡಾಲರ್ಗಳನ್ನು ತನ್ನ ಅಕೌಂಟ್ಗೆ ಹಾಕಿಸಿಕೊಳ್ಳುತ್ತಿದ್ದ, ಬಳಿಕ ಮಾರಾಟ ಮಾಡಿ, 24 ಗಂಟೆಯೊಳಗೆ ಅದನ್ನು ಕದಿಯುತ್ತಿದ್ದ. ಕೆಲವೊಂದು ಬಾರಿ ಕೇವಲ 7-8 ಗಂಟೆಗಳಲ್ಲಿ ಕಾರು ಕದಿಯುತ್ತಿದ್ದ. ಆರೋಪಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದ್ದನಂತೆ.
ಕಾರು ಖರೀದಿದಾರರು ಕಾನೂನುಬದ್ಧವಾಗಿ ಒಡೆತನದ ವಾಹನಗಳನ್ನು ಖರೀದಿಸುತ್ತಿದ್ದೇವೆ ಎಂದು ನಂಬಿಕೊಂಡಿದ್ದರು. ಖರೀದಿಸಿ ಒಂದು ದಿನದೊಳಗೆ ಮಾರಾಟ ಮಾಡುವುದರಿಂದ ಹೊಸ ಮಾಲೀಕರಿಗೆ ಇತ್ತ ಹಣವೂ ಇಲ್ಲ ಅತ್ತ ಕಾರೂ ಇಲ್ಲದಂತಾಗಿತ್ತು. ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ ಈತನ ಬುದ್ಧಿವಂತಿಕೆಗೆ ಪೊಲೀಸರು ಕೂಡಾ ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ವರದಿಯಾದ ಒಂದು ಪ್ರಕರಣದಲ್ಲಿ ಈ ವಂಚಕ ಕೇವಲ ಮಾರಾಟ ಮಾಡಿದ 7 ಗಂಟೆಯ ಒಳಗೆ ಕಾರನ್ನು ವಾಪಸ್ ಕದಿದ್ದ. ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿತ್ತು. ಹೀಗಾಗಿ ಡಿಯಲ್ಲೋ ವಿರುದ್ಧ ಈಗ 14 ಪ್ರಕರಣಗಳು ದಾಖಲಾಗಿವೆ. ಮೋಟಾರು ವಾಹನ ಕಾಯ್ದೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳು 2025ರ ಮೇ ಹಾಗೂ ಜೂನ್ ತಿಂಗಳ ಸಮಯದಲ್ಲಿ ನಡೆದಿದೆ. ಕಾನ್ಸಾಸ್ ಸಿಟಿ ಪೊಲೀಸರು ಈ ಕಾರು ಕಳ್ಳನನ್ನು ಬಂಧಿಸಿದ್ದು, ಪ್ರಕರಣ ಸಾಬೀತಾದರೆ, ಈತನಿಗೆ 98 ವರ್ಷಗಲ ಕಾಲ ಜೈಲು ಶಿಕ್ಷೆಯಾಗಲಿದೆಯಂತೆ.

ನೋಡಿರಿ

