ಮೈಸೂರು -ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ದಂಪತಿ, ಚಾಲಕ ಸಾವು

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇನಿಂದ ಪ್ರಯಾಣಿಕರಿಗೆ ಎಷ್ಟು ಅನುಕೂಲವೋ ಅಷ್ಟೇ ಪ್ರಾಣಹಾನಿಯೂ ಆಗ್ತಾ ಇರುವುದು ನಿಜಕ್ಕೂ ಆತಂಕಕಾರಿ ವಿಚಾರವೇ. ಆದರೆ, ಮಂಗಳವಾರ ನಡೆದ ಅಪಘಾತ ಅದೆಷ್ಟು ಭೀಕರವಾಗಿತ್ತು ಎಂದರೆ, ಯಾರದೋ ತಪ್ಪಿಗೆ ಇನ್ಯಾರೋ ಮೂವರು ದುರಂತ ಅಂತ್ಯಕಂಡಿದ್ದಾರೆ. ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ ಮಂಗಳವಾರ ಅಪಘಾತ ಸಂಭವಿಸಿದ್ದು, ಕಾರೊಂದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ನೀರಜ್ ಕುಮಾರ್ (50), ಅವರ ಪತ್ನಿ ಸೆಲ್ವಿ (47) ಹಾಗೂ ಕಾರಿನ ಚಾಲಕ, ಮಂಡ್ಯದ ನಿರಂಜನ್ ಎಂದು ಗುರುತಿಸಲಾಗಿದೆ. ಇವರ ಕಾರು ಬೆಂಗಳೂರಿನಿಂದ ಮೈಸೂರಿಗೆ ಹೊರಟಿತ್ತು.
ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ರಸ್ತೆ ಅಪಘಾತ – ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ 53ರಷ್ಟು ಹೆಚ್ಚಳ!
ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿಯಲ್ಲಿರುವ ಗೆಜ್ಜಲಗೆರೆಯ ಸಮೀಪದಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿಗೆ, ಹೆದ್ದಾರಿಯ ಆಚೆಯ ಲೇನ್ ನಲ್ಲಿ ಎದುರಿನಿಂದ ಬಂದ ಟಾಟಾ ಹೆಕ್ಸಾ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಬಂದು ನೀರಜ್ ಅವರು ತೆರಳುತ್ತಿದ್ದ ಕಾರಿಗೆ ಬಂದು ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಹೆದ್ದಾರಿಯಲ್ಲಿ ಮಳೆ ನೀರು ನಿಂತಿದ್ದರಿಂದ ಟಾಟಾ ಹೆಕ್ಸಾ ಕಾರು ನಿಯಂತ್ರಣ ತಪ್ಪಿ, ಡಿವೈಡರ್ ದಾಟಿ ಬಂದು ನೀರಜ್ ದಂಪತಿ ಇದ್ದ ಕಾರಿಗೆ ಅಪ್ಪಳಿಸಿದೆ. ಉತ್ತರ ಪ್ರದೇಶದ ನೀರಜ್ ಕುಮಾರ್ ದಂಪತಿ, ಮಂಡ್ಯದ ಚಾಲಕ ನಿರಂಜನ್ ಅವರ ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಅವರ ಕಾರು, ಗೆಜ್ಜಲಗೆರೆಯ ಬಳಿ ಸಾಗುತ್ತಿದ್ದಾಗ, ಹೆದ್ದಾರಿಯ ಆಚೆಯ ಲೇನ್ ನಲ್ಲಿ ಎದುರುಗಡೆಯಿಂದ ಬಂದ ಟಾಟಾ ಹೆಕ್ಸಾ ವಾಹನವು ಸ್ಲಿಪ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಹಾರಿ ಬಂದು ಈ ನೀರಜ್ ಕುಮಾರ್ ದಂಪತಿ ಸಾಗುತ್ತಿದ್ದ ಕಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಆ ಡಿಕ್ಕಿಯ ರಭಸದಿಂದಾಗಿ ತೀವ್ರವಾಗಿ ಗಾಯಗೊಂಡ ನೀರಜ್ ಕುಮಾರ್, ಅವರ ಪತ್ನಿ ಹಾಗೂ ಡ್ರೈವರ್ ಸಾವನ್ನಪ್ಪಿದ್ದಾರೆ. ಡಿವೈಡರ್ ಗೆ ಡಿಕ್ಕಿ ಹೊಡೆದು ಬಂದು ಅಪ್ಪಳಿದ ಕಾರಿನಲ್ಲಿದ್ದ ಪತಿ – ಪತ್ನಿ ಸಹ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ನೀರಜ್ ಅವರು ಚಲಿಸುತ್ತಿದ್ದ ಕಾರು ಅಪ್ಪಚ್ಚಿಯಾಗಿದೆ. ಮದ್ದೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಒಂದರ ಹಿಂದೊಂದರಂತೆ ಅಪಘಾತಗಳು ಸಂಭವಿಸುತ್ತಿವೆ. ಜನವರಿ ತಿಂಗಳಿನಿಂದ ಮೇ ಅಂತ್ಯದವರೆಗೆ 570 ಅಪಘಾತಗಳು ಸಂಭವಿಸಿದೆ. ಅವುಗಳಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. 52 ಮಂದಿ ಗಾಯಗೊಂಡಿದ್ದಾರೆ. 184 ಮಂದಿಗೆ ಕೈ ಕಾಲುಗಳು ಮುರಿದಿದ್ದು, 279 ಮಂದಿಗೆ ಈ ಅಪಘಾತಗಳಲ್ಲಿ ಸಣ್ಣ ಪುಟ್ಟ ಗಾಯಗಳಾಗಿ ಚೇತರಿಸಿಕೊಂಡಿದ್ದಾರೆ. ಈ ಅಪಘಾತಗಳ ಆತಂಕದಲ್ಲಿರುವಾಗಲೇ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಮೂವರು ದಾರುಣವಾಗಿ ಅಂತ್ಯಕಂಡಿದ್ದಾರೆ.