ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ!
ಬೆಳ್ತಂಗಡಿ: ಐತಿಹಾಸಿಕ ಪ್ರವಾಸಿ ತಾಣವಾಗಿರುವ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯಾರಣ್ಯಧಿಕಾರಿ ಸ್ವಾತಿ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಸಾವಿರ ಅಡಿ ಎತ್ತರದ ಗಡಾಯಿಕಲ್ಲು ಚಾರಣಕ್ಕೆ ಜು. 7 ರಿಂದ ತಾತ್ಕಾಲಿಕ ತಡೆ ಹೇರಲಾಗಿದೆ. ವಿಪರೀತ ಮಳೆಯ ಕಾರಣ ಬಂಡೆ ಮೇಲೆ ನೀರು ಹರಿಯುತ್ತಿರುವುದು ಮತ್ತು ಮೆಟ್ಟಿಲುಗಳಲ್ಲಿ ಪಾಚಿ ಬೆಳೆದು ಜಾರುವ ಅಪಾಯ ಇರುವ ಹಿನ್ನೆಲೆಯಲ್ಲಿ ಜು. 7ರಿಂದ ಮುಂದಿನ ಆದೇಶದ ತನಕ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಮುಂದುವರಿದ ಮಳೆಯ ಅಬ್ಬರ – 4 ಮಂದಿ ಸಾವು
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 15 ಕಿ.ಮೀ ದೂರದಲ್ಲಿ ಗಡಾಯಿಕಲ್ಲು ಕೋಟೆಯಿದೆ. ಇದು ಕುದುರೇಮುಖ ಪರ್ವತ ಶ್ರೇಣಿಯ ಒಂದು ಭಾಗ. ಇದನ್ನು ನರಸಿಂಹ ಗಢ, ಜಮಲಾಬಾದ್ ಕೋಟೆ ಎಂದೂ ಕರೆಯುತ್ತಾರೆ.
ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಬೆಳ್ತಂಗಡಿ ಪಟ್ಟಣದಿಂದ 8 ಕಿಮೀ ದೂರದಲ್ಲಿದೆ. ಗಡಾಯಿಕಲ್ಲಿಗೆ ಹೋಗಬೇಕಾದರೆ ಮಂಗಳೂರಿನಿಂದ ಸುಮಾರು 60 ಕಿ.ಮೀ, ಧರ್ಮಸ್ಥಳದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿಗೆ ಮೊದಲು ಬರಬೇಕು. ಅಲ್ಲಿಂದ ಮಂಜೊಟ್ಟಿಗೆ ಬಂದು ಗಡಾಯಿಕಲ್ಲು ಜಾಗ ತಲುಪಬಹುದು.