ಶ್ರೀಲಂಕಾಗೆ ಮುತ್ತುರಾಜನ ಉಡುಗೊರೆ – ಮರಳಿ ಪಡೆಯಲು ಥಾಯ್ಲೆಂಡ್ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ 75.75 ಕೋಟಿ ರೂಪಾಯಿ..!

ಶ್ರೀಲಂಕಾಗೆ ಮುತ್ತುರಾಜನ ಉಡುಗೊರೆ – ಮರಳಿ ಪಡೆಯಲು ಥಾಯ್ಲೆಂಡ್ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ 75.75 ಕೋಟಿ ರೂಪಾಯಿ..!

ಕೊಟ್ಟ ಉಡುಗೊರೆಯನ್ನು ಸಾಮಾನ್ಯವಾಗಿ ಹಿಂಪಡೆಯುವುದಿಲ್ಲ. ಕೊಟ್ಟದ್ದು ಕೊಟ್ಟಾಗಿದೆ ಅವರ ಬಳಿಯೇ ಇರಲಿ ಅಂತಾ ಸುಮ್ಮನಾಗಿಬಿಡುತ್ತೇವೆ. ಇನ್ನು ನಮಗೆ ಯಾರಾದರೂ ಗಿಫ್ಟ್‌ ಕೊಟ್ಟಾಗ ನಮಗೆ ಆ ಉಡುಗೊರೆ ಇಷ್ಟವಾಗಿಲ್ಲ ಅಥವಾ ಅದನ್ನು ನಮಗೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಅಂತಾ ಬೇರೆಯವರಿಗೆ ಕೊಟ್ಟುಬಿಡುತ್ತಾರೆ. ಆದ್ರೆ ಇಲ್ಲೊಂದು ವಿಭಿನ್ನ ಘಟನೆ ನಡೆದಿದೆ. ಕೊಟ್ಟ ಉಡುಗೊರೆಯನ್ನು ಮರಳಿ ಪಡೆಯಲು  ಥಾಯ್ಲೆಂಡ್ ಸರ್ಕಾರ, ಬರೋಬ್ಬರಿ 75.75 ಕೋಟಿ ಖರ್ಚು ಮಾಡಿದೆ!

ಅಚ್ಚರಿಯಾದರೂ ಸತ್ಯ. ಕೊಟ್ಟ ಉಡುಗೊರೆಯನ್ನು ಸಾಮಾನ್ಯವಾಗಿ ಯಾರು ಮರಳಿ ಪಡೆಯುವುದಿಲ್ಲ. ಆದರೆ ಥಾಯ್ಲೆಂಡ್ ಸರ್ಕಾರ ಕೊಟ್ಟ ಉಡುಗೊರೆಯನ್ನು ಮರಳಿ ಪಡೆಯಲು ಮುಂದಾಗಿದೆ. 2001ರಲ್ಲಿ ಥಾಯ್ಲೆಂಡ್‌ನ ರಾಜಮನೆತನ ಆನೆಯೊಂದನ್ನು ಶ್ರೀಲಂಕಾಗೆ ಉಡುಗೊರೆ ನೀಡಿತ್ತು. 4 ಸಾವಿರ ಕೆ.ಜಿ.ಯ ಆನೆಯನ್ನು ಮರಳಿ ಬರೋಬ್ಬರಿ 75.75 ಕೋಟಿ ಖರ್ಚು ಮಾಡಿದೆ. ಆ ಆನೆಯನ್ನು ಮರಳಿ ಥಾಯ್ಲೆಂಡ್ ಕರೆತರಲು ಯಾಕೆ ನಿರ್ಧರಿಸಿತು ಅನ್ನೋ ಅಸಲಿ ಕಥೆ ಇಲ್ಲಿದೆ..

ಇದನ್ನೂ ಓದಿ: ‘ನಭಾ’ ಜೊತೆ ‘ತೇಜಸ್’ ಮಿಲನ – ಸಂಗಾತಿಯನ್ನು ಸೇರುವ ಆತುರದಲ್ಲಿಯೇ ಪ್ರಾಣ ಬಿಟ್ಟ ತೇಜಸ್..!

ಇದು ಸ್ಯಾಕ್ ಸುರೀನ್ ಅಲಿಯಾಸ್ ಮುತ್ತು ರಾಜನ ಕಥೆ ಇದು. 9 ವರ್ಷದವನಿದ್ದಾಗ ಉಡುಗೊರೆಯಾಗಿ ಶ್ರೀಲಂಕಾ ಸೇರಿದ್ದ ಈ ಮುತ್ತುರಾಜ 22 ವರ್ಷಗಳ ಬಳಿಕ ಮರಳಿ ತವರು ಸೇರಿದ್ದಾನೆ. ಆತನ ಕಥೆ ರೋಚಕವಾಗಿದೆ. ಶ್ರೀಲಂಕಾದಲ್ಲಿ ಆನೆಯನ್ನು ಅತ್ಯಂತ ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತದೆ. ಆದರೆ ಮುತ್ತುರಾಜನನ್ನು ಮಾತ್ರ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದೆ. ಕೊಟ್ಟ ಉಡುಗೊರೆಗೆ ಸರಿಯಾದ ಗೌರವ ನೀಡದ್ದಕ್ಕೆ ಬೇಸರಗೊಂಡ ಥಾಯ್ಲೆಂಡ್ ಸರ್ಕಾರ, ಶ್ರೀಲಂಕಾ ಮೇಲಿನ ರಾಜತಾಂತ್ರಿಕ ಮುನಿಸಿನೊಂದಿಗೆ ಮುತ್ತುರಾಜನನ್ನು ಮರಳಿ ಕರೆಯಿಸಿಕೊಂಡಿದೆ. ಇದು ಮುತ್ತುರಾಜ ಎಂಬ 29 ವರ್ಷದ ಆನೆಯ ಮಹಾಪಯಣದ ಕಥೆ.

2001ರಲ್ಲಿ ಥಾಯ್ಲೆಂಡ್‌ನ ರಾಜಮನೆತನ ಸ್ಯಾಕ್ ಸುರೀನ್‌ನನ್ನು ಶ್ರೀಲಂಕಾದ ಕಂಡೆ ವಿಹಾರ್ಯಾ ಎಂಬ ಬೌದ್ಧ ದೇಗುಲಕ್ಕೆ ಉಡುಗೊರೆಯಾಗಿ ನೀಡಿತ್ತು. ಪಡೆದ ಉಡುಗೊರೆಗೆ ಮುತ್ತು ರಾಜ ಎಂದು ಮರು ನಾಮಕರಣ ಮಾಡಲಾಗಿತ್ತು. ಆದರೆ ಮುತ್ತುರಾಜನನ್ನು ಸರಿಯಾಗಿ ಆರೈಕೆ ಮಾಡದೆ, ಹಿಂಸಿಸಲಾಗುತ್ತಿದೆ ಎಂದು ಕ್ಯಾಲಿ ಫಾರ್ ಅನಿಮಲ್ ರೈಟ್ಸ್ ಅಂಡ್ ಎನ್ವಿರಾನ್ನೆಂಟ್ (ರೇರ್) ಆರೋಪಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಥಾಯ್ಲೆಂಡ್ ಸರ್ಕಾರ, 4 ಸಾವಿರ ಕೆ.ಜಿ. ತೂಕದ ಮುತ್ತುರಾಜನನ್ನು ಮರಳಿ ಕರೆದೊಯ್ಯಲು ನಿರ್ಧರಿಸಿತು. ನಿಯೋಗವು ಶ್ರೀಲಂಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆನೆಯ ಕಾಲುಗಳಲ್ಲಿ ಬಾವು ಕಂಡುಬಂದಿತ್ತು. ಮರದ ದಿಮ್ಮಿಗಳನ್ನು ಸಾಗಿಸಲು ಆನೆಯನ್ನು ಒತ್ತಾಯಿಸಲಾಗುತ್ತಿತ್ತು. ಮುತ್ತುರಾಜನ ನಿರ್ವಹಿಸುತ್ತಿದ್ದವರು ನೀಡುತ್ತಿದ್ದ ಹಿಂಸೆ ಹಾಗೂ ನಿರ್ಲಕ್ಷ್ಯವೂ ಆನೆಯ ಸ್ಥಿತಿ ಕಂಡರೆ ಸ್ಪಷ್ಟವಾಗುತ್ತಿತ್ತು. ಮುತ್ತುರಾಜನನ್ನು ನಡೆಸಿಕೊಂಡ ರೀತಿ ನಿಜಕ್ಕೂ ಆಘಾತವನ್ನುಂಟು ಮಾಡಿದೆ ಆನೆಯನ್ನು ರಕ್ಷಿಸುತ್ತಿರುವುದರಿಂದ ಅದಕ್ಕೆ ಮರು ಜನ್ಮಸಿಕ್ಕಂತಾಗಿದೆ ಎಂದು ರೇರ್‌ನ ಸಂಸ್ಥಾಪಕ ಪಂಚಾಲಿ ಪನಪಿಟಿಯಾ ಹೇಳಿದ್ದಾರೆ.

ಮುತ್ತುರಾಜನನ್ನು ಥಾಯ್ಲೆಂಡ್‌ನ ಜೈವಿಕ ಉದ್ಯಾನಕ್ಕೆ ಮರಳಿ ನೀಡಲು ಶ್ರೀಲಂಕಾದ ದೇಗುಲ ಒಪ್ಪಿಗೆ ನೀಡಿತ್ತು. ಮುತ್ತುರಾಜನನ್ನು ಕರೆದೊಯ್ಯುವ ಮೊದಲು ವೈದ್ಯಾಧಿಕಾರಿ ಪರಿಶೀಲಿಸಿದಾಗ ದಂಗಾಗಿದ್ದರು. ಆನೆಯ ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ಆರೈಕೆ ಇಲ್ಲದೆ ಸೊರಗಿತ್ತು. ಥಾಯ್ಲೆಂಡ್‌ಗೆ ಕರೆದೊಯ್ದ ಮೇಲೆ ಚಿಕಿತ್ಸೆ ನೀಡಿದಲ್ಲಿ ಸರಿಯಾಗಿ ನಡೆಯಲು ಸಾಧ್ಯವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಶ್ರೀಲಂಕಾದಿಂದ ಥಾಯ್ಲೆಂಡ್‌ಗೆ ವಿಮಾನ ಮೂಲಕ ಮುತ್ತುರಾಜನನ್ನು ಕರೆದೊಯ್ಯಲು ಬರೋಬ್ಬರಿ 37 ಲಕ್ಷ ಅಮೆರಿಕನ್ ಡಾಲರ್ ವೆಚ್ಚ ತಗುಲಿತ್ತು. ಲೋಹದ ಪಂಜರದಲ್ಲಿ ಆನೆಯನ್ನು ಸುಮಾರು 5 ಗಂಟೆಗಳಲ್ಲಿ ಥಾಯ್ಲೆಂಡ್‌ಗೆ ಸಾಗಿಸಲಾಯಿತು.

ವಿಮಾನ ನಿಲ್ದಾಣದಲ್ಲೇ ಆನೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು. ಪ್ರಯಾಣದಲ್ಲಿ ಹೆಚ್ಚಿನ ಹಾನಿಯಾಗಿದೆಯೇ ಎಂಬದುನ್ನು ವೈದ್ಯರು ಪರೀಕ್ಷಿಸಿದರು. ನಂತರ ಲ್ಯಾಂಪ್ಯಾಂಗ್‌ನಲ್ಲಿರುವ ಥಾಯ್ ಆನೆ ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಯಿತು. ಸದ್ಯ ಆನೆ 30 ದಿನಗಳ ಕ್ವಾರಂಟೈನ್‌ನಲ್ಲಿದೆ. ಮುತ್ತು ರಾಜ ತವರಿಗೆ ಮರಳಿ ಸ್ಯಾಕ್ ಸುರೀನ್ ಆಗುವ ಮೂಲಕ ಕಥೆ ಸುಖಾಂತ್ಯ ಕಂಡಿದೆ.

suddiyaana