ಬೇಸಿಗೆ ರಜೆ ಎಂದು ವಿದ್ಯಾರ್ಥಿನಿ ಮನೆಯಲ್ಲಿ ಬಾಡಿಗೆಗೆ ಇದ್ದ ಶಿಕ್ಷಕ – 15 ವರ್ಷದ ಬಾಲಕಿಯನ್ನ ಪುಸಲಾಯಿಸಿ ತಾಳಿ ಕಟ್ಟಿದ ಭೂಪ

ಬೇಸಿಗೆ ರಜೆ ಎಂದು ವಿದ್ಯಾರ್ಥಿನಿ ಮನೆಯಲ್ಲಿ ಬಾಡಿಗೆಗೆ ಇದ್ದ ಶಿಕ್ಷಕ – 15 ವರ್ಷದ ಬಾಲಕಿಯನ್ನ ಪುಸಲಾಯಿಸಿ ತಾಳಿ ಕಟ್ಟಿದ ಭೂಪ

ಹಿಂದೆ ಗುರು ಇರಬೇಕು. ಮುಂದೆ ಗುರಿ ಇರಬೇಕು ಅನ್ನೋ ಮಾತಿದೆ. ಅಂದರೆ ನಿಮ್ಮ ಬೆನ್ನ ಹಿಂದೆ ಗುರು ಇದ್ದಾಗ ನಿಮ್ಮ ಮುಂದಿರುವ ಗುರಿಯನ್ನ ಮುಟ್ಟಲು ದಾರಿ ತೋರುತ್ತಾರೆ ಅನ್ನೋದು ಈ ಮಾತಿನ ಅರ್ಥ. ಹೀಗೆ ಬಾಲ್ಯದಲ್ಲಿ ಒಂದು ಮಗುವಿನ ಭವಿಷ್ಯವನ್ನ ರೂಪಿಸುವಲ್ಲಿ ತಾಯಿ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯ ಆಗಿರುತ್ತೆ. ತಾಯಿ ಬದುಕು ಕೊಟ್ಟರೆ ಶಿಕ್ಷಕ ಬದುಕನ್ನ ಕಲಿಸುತ್ತಾನೆ. ಜೀವ ಮತ್ತು ಜೀವನಕ್ಕೆ ಅರ್ಥ ಕಲ್ಪಿಸಿಕೊಡುವ ಶಿಕ್ಷಕರ ಪಾತ್ರ ನಿಜಕ್ಕೂ ಅಗಾಧವಾದದ್ದು. ಆದರೆ ಇಂತಹ ಶಿಕ್ಷಕನ ಸ್ಥಾನದಲ್ಲಿದ್ದು ತನ್ನ ವಿದ್ಯಾರ್ಥಿನಿಯ ಭವಿಷ್ಯ ಬರೆಯಬೇಕಿದ್ದ ಗುರುವೇ ದಾರಿ ತಪ್ಪಿದ್ದಾನೆ.

ಇದನ್ನೂ ಓದಿ : ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ…- ನಾನೆಂದೂ ನಿನ್ನವ ಎಂದು ಚಿನ್ನಾರಿಮುತ್ತನ ಮನಮಿಡಿಯುವ ಪೋಸ್ಟ್

ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಯಾರಿಗೂ ಗೊತ್ತಾಗದಂತೆ ಮದುವೆ ಮಾಡಿಕೊಂಡಿರುವ ರಹಸ್ಯ ಇದೀಗ ಬಯಲಾಗಿದೆ. ಕೃತ್ಯ ಎಸಗಿದ ಶಿಕ್ಷಕನ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಈ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಶಿಕ್ಷಕನ ಹೆಸರು ಹೆಸರು ದಿಲೀಪ ಕುಮಾರ್​ ಅಜೂರೆ. ತಾನು ಪಾಠ ಮಾಡುತ್ತಿದ್ದ ಶಾಲೆಯಲ್ಲಿ ಓದುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯವನಾದ ಈ ಶಿಕ್ಷಕ ವಿದ್ಯಾರ್ಥಿನಿಯ ಮನೆಯಲ್ಲೇ ಬಾಡಿಗೆಗೆ ಉಳಿದುಕೊಂಡಿದ್ದ.

ಆಘಾತಕಾರಿ ಸಂಗತಿ ಏನೆಂದರೆ, ಈ ಶಿಕ್ಷಕನಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಇದೀಗ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮದುವೆಯಾಗಿದ್ದಾನೆ. ಬೇಸಿಗೆ ರಜೆ ಸಂದರ್ಭದಲ್ಲಿ ಅಂದರೆ ಕಳೆದ ಮಾರ್ಚ್​ ತಿಂಗಳಲ್ಲಿ ಯಾರಿಗೂ ಗೊತ್ತಾಗದಂತೆ ವಿದ್ಯಾರ್ಥಿನಿಗೆ ತಾಳಿ ಕಟ್ಟಿ, ಊರಲ್ಲೇ ಠಿಕಾಣಿ ಹೂಡಿದ್ದ. ಜೂನ್ ತಿಂಗಳ ಪ್ರಾರಂಭದಲ್ಲಿ ಶಿಕ್ಷಕನ ಮದುವೆ ಪುರಾಣ ಹೊರಬಿದ್ದಿದೆ. ಆರೋಪಿ ಶಿಕ್ಷಕ, ವಿದ್ಯಾರ್ಥಿನಿಯ ಮನೆಯಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದೇ ವೇಳೆ ಅವನ ಕೋಣೆಯಲ್ಲೇ ತಾಳಿ ಕಟ್ಟಿ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷನನ್ನು ಅಮಾನತು ಮಾಡುವ ಬದಲು ಸೇವೆಯಿಂದಲೇ ವಜಾ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

suddiyaana