ಥಿಯೇಟರ್ ಗಳಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಹಾವಳಿ – ಹೊಸ ಹುಡುಗರ ಅಬ್ಬರಕ್ಕೆ ಪ್ರೇಕ್ಷಕರು ಫಿದಾ
ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಂತಾರಲ್ಲ ಹಾಗೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಾರೀ ಸದ್ದು ಮಾಡುತ್ತಿದೆ. ಕಮರ್ಷಿಯಲ್, ಫೈಟ್, ಅದ್ಧೂರಿ, ಕ್ರೈಂ ಸೀನ್, ಹೀರೋ ಇನ್, ಸಾಂಗ್ಸ್ ಅನ್ನುವ ಗೋಜಿಗೆ ಹೋಗದೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಮೂಡಿ ಬಂದಿದೆ. ಇಡೀ ಸಿನಿಮಾ ಒಂದೇ ಹಾಸ್ಟೆಲ್ ಒಳಗೆ ನಡೆಯೋದು ವಿಶೇಷ. ಅದೂ ಕೂಡ ಒಂದೇ ರಾತ್ರಿಯಲ್ಲಿ ನಡೆಯುತ್ತೆ.
ಇದನ್ನೂ ಓದಿ : ಬಾಲಿವುಡ್ ನಟಿ ರೇಖಾ ಲೇಡಿ ಸೆಕ್ರಟರಿ ಜೊತೆ ಸಂಬಂಧ ಹೊಂದಿದ್ದರು! – ಬಯೋಗ್ರಫಿಯಲ್ಲಿದೆ ಇನ್ನೂ ಕೆಲ ರೋಚಕ ರಹಸ್ಯ..!
ಸಿನಿಮಾದಲ್ಲಿ ತುಂಗಾ ಬಾಯ್ಸ್ ಅನ್ನೋ ಹಾಸ್ಟೆಲ್. ಆ ಹಾಸ್ಟೆಲ್ ನಲ್ಲಿ 500ಕ್ಕೂ ಹೆಚ್ಚು ಹುಡುಗರು. ಒಬ್ಬೊಬ್ಬರದ್ದೂ ಒಂದೊಂದು ಕ್ಯಾರೆಕ್ಟರ್. ತರಲೆ, ತಾಪತ್ರಯ, ಹುಡುಗಾಟ, ಹೆಣಗಾಟ, ಕಿತ್ತಾಟ ಎಲ್ಲವೂ ಇದೆ. ಅಸಲಿಗೆ ಈ ಸಿನಿಮಾದೊಳಗೆ ಒಂದು ಸಿನಿಮಾ ಇದೆ. ಅಂದ್ರೆ ಹಾಸ್ಟೆಲ್‌ನಲ್ಲಿ ಇರುವವರನ್ನೇ ಇಟ್ಟುಕೊಂಡು ಒಂದು ಶಾರ್ಟ್ ಮೂವಿ ಮಾಡಲು ಅಜಿತ್ ಎಂಬ ವಿದ್ಯಾರ್ಥಿ ಮುಂದಾಗುತ್ತಾನೆ. ಬಳಿಕ ಏನೆಲ್ಲ ಆಗುತ್ತೆ ಅನ್ನೋದು ಈ ಚಿತ್ರದ ಈ ಒನ್‌ಲೈನ್ ಸ್ಟೋರಿ. ಈ ಒನ್‌ಲೈನ್ ಕಥೆಯೇ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತದೆ. ಇನ್ನು ಕೊನೆ ಕ್ಷಣದಲ್ಲಿ ಚಿತ್ರತಂಡಕ್ಕೆ ಮಾನನಷ್ಟ ಕೇಸ್ ಹಾಕಿ ಶಾಕ್ ಕೊಟ್ಟಿದ್ದ ನಟಿ ರಮ್ಯಾ ಕೂಡ ಚಿತ್ರದಲ್ಲಿ ಮ್ಯಾಥ್ಸ್ ಲೆಕ್ಚರರ್ ದಿವ್ಯಾ ಸ್ಪಂದನಾ ಆಗಿ ಮೊದಲ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಕಥೆ ಹಾಸ್ಟೆಲ್ ಒಳಕ್ಕೆ ಕರೆದುಕೊಂಡು ಹೋಗುತ್ತದೆ.
ಹಾಸ್ಟೆಲ್ ಹುಡುಗರು ಮತ್ತು ವಾರ್ಡನ್ ನಡುವಿನ ತಿಕ್ಕಾಟ. ಹುಡುಗರು ಏನೋ ಮಾಡಲು ಹೋಗಿ ಮತ್ತೇನೋ ಎಡವಟ್ಟಾಗಿ ಕೊನೆಗೆ ಎಲ್ಲವೂ ಸುಖಾಂತ್ಯ ಕಾಣುತ್ತದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಹಾಸ್ಟೆಲ್ ಹುಡುಗರ ಹಾಡು, ಪಾಡು, ಸೀನಿಯರ್‌ಗಳ ಹಾವಳಿ, ಜ್ಯೂನಿಯರ್‌ಗಳ ಜಟಾಪಟಿ ಎಲ್ಲವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹಾಸ್ಟೆಲ್‌ನಲ್ಲಿ ಇರುವವರಿಗೆ, ಹಿಂದೆ ಇದ್ದವರಿಗೆ ಈ ಸಿನಿಮಾ ಬಹಳ ಹತ್ತಿರವಾಗಲಿದೆ. ಇನ್ನು ಹಾಸ್ಟೆಲ್ ವಾರ್ಡನ್ ಆಗಿ ಮಂಜುನಾಥ್ ನಾಯಕ್, ಹಾಸ್ಯ ನಟ ಚೇತನ್ ದುರ್ಗ ನೆನಪಿನಲ್ಲಿ ಉಳಿಯುತ್ತಾರೆ. ಜಿನ್ನಿ ಎನ್ನುವ ಹಾಸ್ಟೆಲ್ ಸೀನಿಯರ್ ಪಾತ್ರದಲ್ಲಿ ನಿರ್ದೇಶಕ ನಿತಿನ್ ಕೂಡ ಗಮನ ಸೆಳೆಯುತ್ತಾರೆ. ಹಾಗೇ ಅಜಿತ್ ಮಾಡುವ ಶಾರ್ಟ್ ಫಿಲ್ಮ್ ಎಡಿಟ್ ಮಾಡುವ ಫೋಟೋ ಸ್ಟುಡಿಯೋ ಎಡಿಟರ್ ಪಾತ್ರದಲ್ಲಿ ದಿಗಂತ್ ಮಸ್ತ್ ಮಜಾ ಕೊಡ್ತಾರೆ. ಅಜಿತ್ ಪಾತ್ರದಲ್ಲಿ ನಟಿಸಿರೋ ಪ್ರಜ್ವಲ್, ಚೇತನ್ ದುರ್ಗ, ಶ್ರೀವತ್ಸ, ತೇಜಸ್ ಹೀಗೆ ಹೊಸ ಕಲಾವಿದರ ದಂಡೇ ಇದೆ.
ಎಲ್ರೂ ಕೂಡ ತಮ್ಮ ತಮ್ಮ ಪಾತ್ರಗಳಿಗೆ ನಟನೆ ಮೂಲಕವೇ ನ್ಯಾಯ ಒದಗಿಸಿದ್ದಾರೆ. ಎಲ್ಲರ ಕಾಮಿಡಿ ಟೈಮಿಂಗ್, ಡೈಲಾಗ್ ಡೆಲಿವರಿಯೂ ಸಖತ್ ಮಸ್ತ್ ಆಗಿದೆ. ಇನ್ನು ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಬ್ಯಾಗ್ರೌಂಡ್ ಮ್ಯೂಸಿಕ್. ಹಾಗೇ ಅರವಿಂದ್ ಕಶ್ಯಪ್ ಅಷ್ಟೇ ನೈಜವಾಗಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಆದ್ರೆ ಚಿತ್ರದಲ್ಲಿ ಗಂಭೀರವಾದ ಕಥೆ ಇಲ್ಲ, ಲಾಜಿಕ್ ಅಂತೂ ಇಲ್ಲವೇ ಇಲ್ಲ. ಒಟ್ಟಾರೆ ಹೇಳ್ಬೇಕು ಅನ್ನೋದಾದ್ರೆ ಹೀರೋ, ಕಥೆ, ಫೈಟ್, ಸಾಂಗ್ಸ್ ಅಂತಾ ಏನೇನೋ ಇಮ್ಯಾಜಿನೇಷನ್ನಲ್ಲಿ ಸಿನಿಮಾಗೆ ಹೋಗಬೇಡಿ. ನಗಬೇಕು, ಎಂಜಾಯ್ ಮಾಡ್ಬೇಕು ಅನ್ನೋ ಉದ್ದೇಶದಿಂದ ಸಿನಿಮಾ ನೋಡಿ. ಆಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿಜಕ್ಕೂ ಇಷ್ಟವಾಗುತ್ತೆ.