ಅಧಿಕಾರವಿಲ್ಲದ ರಾಜ್ಯ ಬಿಜೆಪಿ ಹೈಕಮಾಂಡ್ ಗೆ ಹಾಲು ಕರೆಯದ ಗೊಡ್ಡೆಮ್ಮೆಯಂತಾಗಿದೆ! – ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಡೆದು ಮೂರು ತಿಂಗಳುಗಳೇ ಕಳೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಐದು ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿ ಮಾಡುತ್ತಿದೆ. ಆದರೆ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾತ್ರ ಕಗ್ಗಂಟಾಗಿ ಪರಿಣಮಿಸಿದೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಹಲವು ನಾಯಕರು ಲಾಬಿ ನಡೆಸುತ್ತಲೇ ಇದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಮನಸ್ಸು ಮಾಡುತ್ತಿಲ್ಲ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ಕಾಲೆಳೆಯುತ್ತಲೇ ಇದೆ. ಬಿಜೆಪಿ ಈಗ ಅನಾಥ ಶಿಶು. ಆಂತರಿಕ ಕಲಹ ಮುಗಿಲು ಮುಟ್ಟಿದೆ. ಪಕ್ಷವನ್ನು ಮುನ್ನಡೆಸಲಾಗದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಈಗ ಅನಾಥ ಶಿಶು. ಆಂತರಿಕ ಕಲಹ ಮುಗಿಲು ಮುಟ್ಟಿದೆ. ಪಕ್ಷವನ್ನು ಮುನ್ನಡೆಸಲಾಗದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ. ಹೈಕಮಾಂಡ್ ಕರ್ನಾಟಕದ ಬಿಜೆಪಿಯತ್ತ ತಿರುಗಿಯೂ ನೋಡುತ್ತಿಲ್ಲ. ವಾರಕ್ಕೊಮ್ಮೆ ಬರುತ್ತಿದ್ದ ಉಸ್ತುವಾರಿ ಅರುಣ್ ಸಿಂಗ್ ನಾಪತ್ತೆ. ತಿಂಗಳಿಗೊಮ್ಮೆ ಬರುತ್ತಿದ್ದ ಜೆಪಿ ನಡ್ಡಾ ನಾಪತ್ತೆ. ಚುನಾವಣೆಗಾಗಿ ಬರುತ್ತಿದ್ದ ಅಮಿತ್ ಶಾ, ಮೋದಿಯೂ ಕಣ್ಮರೆ. ಅಧಿಕಾರವಿದ್ದಾಗ ಇವರೆಲ್ಲಾ ATM ನಲ್ಲಿನ ಹಣ ಡ್ರಾ ಮಾಡಿಕೊಳ್ಳಲು ಬರುತ್ತಿದ್ದರಾ? ಅಧಿಕಾರವಿಲ್ಲದ ರಾಜ್ಯ ಬಿಜೆಪಿ ಈಗ ಹೈಕಮಾಂಡ್ ನಾಯಕರಿಗೆ ಹಾಲು ಕರೆಯದ ಗೊಡ್ಡೆಮ್ಮೆಯಂತಾಗಿದೆಯೇ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.