ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಸ್ಲಮ್‌ನ ರಾಜಕುಮಾರಿ – 14 ವರ್ಷದ ಬಾಲೆಗೆ ಹಾಲಿವುಡ್‌ನಿಂದಲೂ ಆಫರ್..!
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಅದೃಷ್ಟದ ಬಾಗಿಲು ತೆರೆದವರು ನಮ್ಮ ಜೊತೆಗಿದ್ದಾರೆ. ಆದರೆ, ಇಲ್ಲೊಬ್ಬಳು ಬಾಲೆಯ ಸ್ಟೋರಿ ನಿಜಕ್ಕೂ ಅಚ್ಚರಿಯೇ. ಅವಳ ಬದುಕಲ್ಲಿ ನಡೆದಿದ್ದು ಒಂಥರಾ ಮಿರಾಕಲ್ ಅಂದರೂ ತಪ್ಪಲ್ಲ. ಜೊತೆಗೆ ಆಕೆಯ ಕಥೆ ಸ್ಫೂರ್ತಿದಾಯಕ ಕಥೆಗಳ ಲಿಸ್ಟ್‌ಗೂ ಸೇರ್ಪಡೆಯಾಗಿದೆ ಅಂದರೂ ತಪ್ಪಲ್ಲ. ಇದು ಸ್ಲಂ ಏರಿಯಾದಲ್ಲಿ ಹುಟ್ಟಿ ಬೆಳೆದು ಈಗ ಜನಪ್ರಿಯ ಸ್ಕಿನ್‌ಕೇರ್ ಬ್ರ್ಯಾಂಡ್ ಗೇ ಮಾಡೆಲ್ ಆದ 14 ವರುಷದ ಹುಡುಗಿಯ ರಿಯಲ್ ಸ್ಟೋರಿ. ಬ್ಯೂಟಿ ಬ್ರ್ಯಾಂಡ್ಗಳಿಗೆ ಅಥ್ಲೀಟ್ಗಳು, ಸಿನಿಮಾ ತಾರೆಯರು ಮಾಡೆಲ್ಗಳಾಗಿ ಆಯ್ಕೆಯಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಪ್ರತಿಷ್ಠಿತ ಬ್ಯೂಟಿ ಬ್ರ್ಯಾಂಡ್ ಸಂಸ್ಥೆಯೊಂದು ಸ್ಲಮ್ನಲ್ಲಿ ವಿದ್ಯುತ್, ನೀರು, ಬಾತ್ ರೂಮ್ ವ್ಯವಸ್ಥೆ ಇಲ್ಲದೆ ಬೆಳಯುತ್ತಿರುವ 14 ವರ್ಷದ ಬಾಲಕಿಗೆ ಮಾಡೆಲ್ ಆಗುವ ಅವಕಾಶ ನೀಡಿ ಅಚ್ಚರಿ ಮೂಡಿಸಿದೆ. ಅಲ್ಲಿಂದಲೇ ಎಲ್ಲರಿಗೂ ಈ ಸ್ಲಂ ರಾಜಕುಮಾರಿಯ ಬಗ್ಗೆ ಕುತೂಹಲ ಮೂಡಿಸಿತ್ತು.
ಇದನ್ನೂ ಓದಿ: ಮದುಮಗಳಿಗೆಂದೇ ವಿನ್ಯಾಸಗೊಳಿಸಿದ ವಿಶೇಷ ಗೌನ್ – ವಿಶ್ವದಾಖಲೆ ಬರೆದಿದ್ದು ಯಾಕೆ ಗೊತ್ತಾ?
ಏಪ್ರಿಲ್ ನಲ್ಲಿ ಸ್ಕಿನ್ ಕೇರ್ ಬ್ರಾಂಡ್, ಫಾರೆಸ್ಟ್ ಎಸೆನ್ಷಿಯಲ್ಸ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡುತ್ತದೆ. ಅಲ್ಲಿ ಮಲೀಶಾ ತಮ್ಮ ಸ್ಟೋರ್ ಪ್ರವೇಶಿಸುವುದನ್ನ ತೋರಿಸುತ್ತದೆ. ಆ ವಿಡಿಯೋ ನೋಡಿದ ಜನ ಮಲೀಶಾಳನ್ನು ತುಂಬಾ ಮೆಚ್ಚಿಕೊಂಡಿದ್ದರು. ಜೊತೆಗೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರಿಗೆ ಮಲೀಶಾಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಹೆಚ್ಚಾಗಿತ್ತು.
ಮಲೀಶಾ ಖರ್ವಾ ಮುಂಬೈಯ ಧಾರಾವಿ ಕೊಳಗೇರಿಯ 14 ವರುಷದ ಪುಟ್ಟ ಹುಡುಗಿ. ಹೆತ್ತವರು, ಅಜ್ಜಿಯರು, ಸಹೋದರ ಮತ್ತು ಚಿಕ್ಕಪ್ಪನೊಂದಿಗೆ ಸಮುದ್ರ ತೀರದಲ್ಲಿ ಸಣ್ಣ ತಾತ್ಕಾಲಿಕ ಟೆಂಟ್‌ನಲ್ಲಿ ವಾಸಿಸುತ್ತಿದ್ದಳು. ಬಣ್ಣದ ಲೋಕದ ಬಗ್ಗೆ ಕನಸು ಕಾಣದ ಈ ಹುಡುಗಿಯ ಜೀವನ ಮಿರಾಕಲ್ ಆಗಿದ್ದು ಅಮೇರಿಕನ್ ನಟ ರಾಬರ್ಟ್ ಹಾಫ್‌ಮನ್‌ನ ಕಣ್ಣಿಗೆ ಬಿದ್ದಾಗ. ಈಗ ದಿ ಪ್ರಿನ್ಸೆಸ್ ಫ್ರಮ್ ದಿ ಸ್ಲಮ್ ಎಂದು ಕರೆಸಿಕೊಳ್ಳುತ್ತಿರುವ ಮಲೀಶಾ ಖರ್ವಾ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.
ಹಾಫ್ ಮನ್ ಆಕೆಯನ್ನ ಭೇಟಿ ಮಾಡಿದಾಗ ಆಕೆಯ ಹೊಳೆಯುವ ನಗು ಆಕೆಯ ಪ್ರತಿದಿನದ ಕಷ್ಟ ಕಾರ್ಪಣ್ಯಗಳನ್ನ ಮರೆ ಮಾಚಿದಂತೆ ಕಂಡಿತ್ತು. ಮಲೀಶಾ ಳಿಗೆ ಡಾನ್ಸ್ ಮತ್ತೂ ಮಾಡೆಲ್ಲಿಂಗ್ ನಲ್ಲಿ ಆಸಕ್ತಿ ಇದೆಯೆಂದು ತಿಳಿದ ತಕ್ಷಣ ಆಕೆಗೆ ಸಹಾಯ ಮಾಡಲು ನಿರ್ಧರಿಸಿದರು. ಆಕೆಗಾಗಿ ‘ಗೋ ಫಂಡ್ ಮೀ’ ಪುಟವನ್ನ ಸ್ಥಾಪಿಸುತ್ತಾರೆ. ಈಗ ಈಕೆ ಪ್ರಸಿದ್ಧ ಬ್ರಾಂಡ್ ಗಳಿಗೆ ಮತ್ತೂ ಕಾಸ್ಮೋಪಾಲಿಟನ್‌ನಂತಹ ಮ್ಯಾಗಜೀನ್‌ಗಳಿಗೆ ಪೋಸ್ ನೀಡಿದ್ದಾರೆ.
ಏಪ್ರಿಲ್ ನಲ್ಲಿ ಬಿಡುಗಡೆಯಾದ ಫಾರೆಸ್ಟ್ ಎಸೆನ್ಷಿಯಲ್ಸ್ ಬ್ರಾಂಡ್ ನ ವಿಡಿಯೋ ನೋಡಿದ ಅದೆಷ್ಟೋ ಬಳಕೆದಾರರು ಆಕೆಯನ್ನ ಶ್ಲಾಘಿಸಿದ್ದಾರೆ. ಭವಿಷ್ಯದಲ್ಲಿ ಆಕೆಯ ಹೆಚ್ಚಿನ ಸಾಧನೆಗೇ ಶುಭಾಶಯಗಳನ್ನ ಕೋರಿದ್ದಾರೆ. ನಮ್ಮ ದೇಶದಲ್ಲಿ ಕಪ್ಪು ಬಣ್ಣದ ಹುಡುಗಿಯರನ್ನ ಯಾವತ್ತೂ ಸೌಂದರ್ಯ ಬ್ರಾಂಡ್‌ಗಳ ಪ್ರಚಾರ ಮಾಡಲು ಎಂದಿಗೂ ಪರಿಗಣಿಸುತ್ತಿರಲಿಲ್ಲ, ಈಗ ಸಮಯ ಬದಲಾಗಿದೆ ಅವಳು ತುಂಬಾ ಸುಂದರವಾಗಿದ್ದಾಳೆ ಎಂದು ಬಳಕೆದಾರರೊಬ್ಬರು ಹೇಳುತ್ತಾರೆ.
ತುಂಬಾ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಮಲೀಶಾ ಕುಟುಂಬ ಎರಡು ಹೊತ್ತಿನ ಊಟಕ್ಕೂ, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ. ಇನ್ನೂ ಮಳೆಗಾಲದಲ್ಲಿ ಸರಿಯಾದ ಸೂರು ಇಲ್ಲದೇ ನಿದ್ರೆ ಮಾಡಲು ಸಾಧ್ಯವಾಗದಂತಹ ದುಸ್ತರ ಪರಿಸ್ಥಿತಿಯಲ್ಲಿ ಮಲೀಶಾ ಕುಟುಂಬವಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಲೀಶಾಳಿಗೆ ಓದೋದು ಅಂದ್ರೆ ಬಹಳ ಇಷ್ಟ. ಇಂಗ್ಲಿಷ್ ಆಕೆಯ ಫೇವರಿಟ್ ವಿಷಯವಾಗಿದೆ. ಫಾರೆಸ್ಟ್ ಎಸೆನ್ಷಿಯಲ್ಸ್ ಜೊತೆಗಿನ ಆಕೆಯ ಅಭಿಯಾನ ಆಕೆಯ ಜೀವನದ ದೊಡ್ಡ ಕೆಲಸವಾದರೂ ಶಿಕ್ಷಣ ಆಕೆಯ ಮೊದಲ ಆದ್ಯತೆ ಎಂದು ಹೇಳುತ್ತಾಳೆ.
ಇದೀಗ ಮುಗ್ಧ ಬಾಲಕಿಗೆ ಮತ್ತೊಂದು ಸುವರ್ಣಾವಕಾಶ ಸಿಕ್ಕಿದೆ. ಹಾಲಿವುಡ್ನಿಂದ ಎರಡು ಸಿನಿಮಾಗಳಿಗೆ ಆಫರ್ ಬಂದಿದೆ ಎನ್ನಲಾಗಿದೆ.