ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ಮಾದರಿ ಚಾರ್ಜರ್! – ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದೇಕೆ?
ನವದೆಹಲಿ: ಇನ್ನು ಮುಂದೆ ಮೊಬೈಲ್ ಫೋನ್, ಲ್ಯಾಪ್ ಟಾಪ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳಿಗೆ ವಿಭಿನ್ನ ಚಾರ್ಜರ್ಗಳನ್ನು ಬಳಸಬೇಕೆಂದಿಲ್ಲ. ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಅನ್ನು ಬಳಸುವಂತೆ ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದೆ.
ಸ್ಮಾರ್ಟ್ಫೋನ್ಗಳು ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಬಳಸಬೇಕು. ಒಂದೇ ರೀತಿಯ ಚಾರ್ಜರ್ ಅನ್ನು ಎಲ್ಲ ಸಾಧನಗಳಿಗೆ ಬಳಸುವುದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ. ವಿಭಿನ್ನ ಚಾರ್ಜರ್ಗಳ ಖರೀದಿಯೂ ತಪ್ಪುತ್ತದೆ. ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ‘ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್’ ಹೇಳಿದೆ.
ಇದನ್ನೂ ಓದಿ: ಆಸ್ಕರ್ ಅಂಗಳದಲ್ಲಿ ಕಾಂತಾರ, ವಿಕ್ರಾಂತ್ ರೋಣ – ಅರ್ಹತೆ ಸುತ್ತು ಪಾಸ್ ಮಾಡಿದ ಕನ್ನಡ ಚಿತ್ರಗಳು
ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಲ್ಯಾಪ್ಟಾಪ್ಗಳಿಗೆ ಟೈಪ್ ಸಿ ಚಾರ್ಜರ್ ಅನ್ನು ಮಾನದಂಡವನ್ನಾಗಿ ಪರಿಗಣಿಸಲು ಉದ್ಯಮಿಗಳು ಸಮ್ಮತಿಸಿರುವುದಾಗಿ 2022ರ ಡಿಸೆಂಬರ್ನಲ್ಲಿ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಯುರೋಪ್ ಒಕ್ಕೂಟ ಆದೇಶ ನೀಡಿರುವ ಬಗ್ಗೆಯೂ ಅವರು ಉಲ್ಲೇಖಿಸಿದ್ದರು. ಈ ಮಧ್ಯೆ, ವಾಚ್ಗಳಂಥ ಧರಿಸುವ ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ಮಾದರಿಯ ಚಾರ್ಜರ್ ಅಭಿವೃದ್ಧಿಪಡಿಸುವ ಬಗ್ಗೆ ಕಾನ್ಪುರ ಐಐಟಿ ಅಧ್ಯಯನ ನಡೆಸುತ್ತಿದೆ. ಅಧ್ಯಯನ ಪೂರ್ಣಗೊಂಡ ಬೆನ್ನಲ್ಲೇ ಕೈಗಾರಿಕೋದ್ಯಮಿಗಳ ಜತೆ ಚರ್ಚಿಸಲಿದೆ. ಇ-ತ್ಯಾಜ್ಯ ತಡೆಗಾಗಿ ಏಕ ಮಾದರಿಯ ಚಾರ್ಜರ್ ಬಳಕೆ ಬಗ್ಗೆ ಕೇಂದ್ರ ಪರಿಸರ ಸಚಿವಾಲಯವೂ ಅಧ್ಯಯನ ನಡೆಸಲಿದೆ ಎನ್ನಲಾಗಿದೆ.