ರಾಜ್ಯದಿಂದ ಅತೀ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಶಕ್ತಿಪ್ರದರ್ಶನ – ಕರಾವಳಿ  ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿದ ಕಾಂಗ್ರೆಸ್‌!

ರಾಜ್ಯದಿಂದ ಅತೀ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಶಕ್ತಿಪ್ರದರ್ಶನ – ಕರಾವಳಿ  ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿದ ಕಾಂಗ್ರೆಸ್‌!

ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಅದೇ ಹುಮ್ಮಸ್ಸಿನಲ್ಲಿದೆ. ರಾಜ್ಯದಿಂದ ಅತೀ ಹೆಚ್ಚು ಕ್ಷೇತ್ರಗಳನ್ನ ಗೆಲ್ಲೋಕೆ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿಯಿಂದಲೇ ಶಂಖನಾದ ಮೊಳಗಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿ ಮಂಗಳೂರು ನಗರದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿದೆ. ಎಐಸಿಸಿ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್​ನ ಘಟಾನುಘಟಿಗಳೇ ಒಗ್ಗಟ್ಟಿನ ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸುರ್ಜೆವಾಲಾ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದರು. ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಮಂಗಳೂರಿನಲ್ಲೇ ಬೃಹತ್ ಸಮಾವೇಶ ನಡೆಸಿದ್ದರ ಹಿಂದೆ ರಾಜಕೀಯ ತಂತ್ರಗಾರಿಕೆಯೂ ಅಡಗಿದೆ.

ಇದನ್ನೂ ಓದಿ: ಇನ್ನುಮುಂದೆ ಬಾಲರಾಮನಿಗೆ ಪ್ರತಿದಿನ 1 ಗಂಟೆ ವಿಶ್ರಾಂತಿ!

ಕಾಂಗ್ರೆಸ್ ಕರಾವಳಿ ಕಹಳೆ! 

ಲೋಕಸಭೆಗೆ ರಾಜ್ಯದಿಂದ ಈ ಭಾರಿ ಹೆಚ್ಚಿನ ಸಂಸದರನ್ನು ಕಳುಹಿಸಬೇಕು ಎಂಬುದು ಕಾಂಗ್ರೆಸ್​ ಪಕ್ಷದ ಗುರಿಯಾಗಿದೆ. ಈ ಮೂಲಕ ಕಾಂಗ್ರೆಸ್​​ ಪಕ್ಷವನ್ನು ಬಲಗೊಳಿಸಬೇಕು ಎಂಬುದು ಮಲ್ಲಿಕಾರ್ಜುನ್​ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಅವರ ಉದ್ದೇಶವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದಿದ್ದರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಿನ್ನಡೆ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ ರಾಜ್ಯಮಟ್ಟದ ಕಾಂಗ್ರೆಸ್​ ಕಾರ್ಯಕರ್ತರ ಸಮಾವೇಶವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಮೂಲಕ ಇಲ್ಲಿನ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವುದು ಹಾಗೂ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ.

ಕಾಂಗ್ರೆಸ್ ಏನೋ ಕರಾವಳಿ ಭಾಗದ ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿ ಮಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿದೆ. ಆದ್ರೆ ಕ್ಷೆತ್ರಗಳನ್ನ ಗೆಲ್ಲೋದು ಅಷ್ಟು ಸುಲಭವಾಗಿಲ್ಲ. ಯಾಕಂದ್ರೆ ಈ ಭಾಗದಲ್ಲಿ ಬಿಜೆಪಿ ನಾಯಕರ ಪ್ರಾಬಲ್ಯವೇ ಹೆಚ್ಚಿದೆ. ಎರಡು, ಮೂರು ಹೀಗೆ ನಾಲ್ಕೈದು ಬಾರಿ ಸಂಸದರಾದವರೇ ಇದ್ದಾರೆ. ಕಾಂಗ್ರೆಸ್ ನಾಯಕರು ಇದ್ರೂ ಕೂಡ ಲೋಕಸಭಾ ಕ್ಷೇತ್ರ ಗೆಲ್ಲೋಕೆ ಸಾಧ್ಯವಾಗ್ತಿಲ್ಲ. ಅಷ್ಟಕ್ಕೂ ಪ್ರಸ್ತುತ ಕರಾವಳಿ ಭಾಗದ ರಾಜಕೀಯ ಚಿತ್ರಣ ಹೇಗಿದೆ ಅನ್ನೋದನ್ನ ನೋಡೋದಾದ್ರೆ..

ಕರಾವಳಿ ಬಿಜೆಪಿ ಭದ್ರಕೋಟೆ!  

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ್ ಹೆಗಡೆ ಹಾಲಿ ಸಂಸದರು. ಪ್ರಭಾವಿ ಹಿಂದು ಹುಲಿ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಅನಂತ್ ಕುಮಾರ್ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಕಳೆದ ವರ್ಷ ನಡೆದ ರಾಜ್ಯ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಗೆದ್ದು ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿ ಹೊರಹೊಮ್ಮಿದೆ. ಇನ್ನು ಬಿಜೆಪಿಯಲ್ಲಿ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಸರಣಿ ಗೆಲುವು ಸಾಧಿಸಿದ್ದಾರೆ. ಈಗಾಗಲೇ ಹ್ಯಾಟ್ರಿಕ್ ಬಾರಿಸಿರುವ ಕಟೀಲ್ ನಾಲ್ಕನೇ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಕಟೀಲ್‌ ಅವರ ವಿರುದ್ಧ ಕ್ಷೇತ್ರದಲ್ಲಿ ವಿರೋಧಿ ಅಲೆ ಶುರುವಾಗಿದ್ದು, ಈ ಕ್ಷೇತ್ರಕ್ಕೆ ಅರುಣ್ ಪುತ್ತಿಲ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು 2014 ಮತ್ತು 2019ರಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ಚುನಾವಣೆಗೆ ಸ್ಪರ್ಧಿಸೋದಾಗಿ ಶೋಭಾ ಘೋಷಣೆ ಮಾಡಿಕೊಂಡಿದ್ದಾರೆ. ಆದ್ರೆ ಪ್ರಮೋದ್ ಮಧ್ವರಾಜ್ ಮತ್ತು ಸಿ.ಟಿ ರವಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಸದ್ಯದ ಮಟ್ಟಿಗೆ ಕರಾವಳಿಯ ಈ ಮೂರೂ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳೇ ಆಗಿದೆ. ಹಾಲಿ ಸಂಸದರೂ ಕೂಡ ರಾಷ್ಟ್ರಮಟ್ಟದಲ್ಲಿ ಪ್ರಭಾವ ಹೊಂದಿದ್ದಾರೆ. ಆದ್ರೆ ಮೂರೂ ಕ್ಷೇತ್ರಗಳಲ್ಲೂ ಆಡಳಿತ ವಿರೋಧಿ ಅಲೆ ಇದೆ. ಪಕ್ಷದಲ್ಲೂ ಭಿನ್ನಾಭಿಪ್ರಾಯಗಳಿವೆ. ಇದೇ ಕಾರಣಕ್ಕೆ ಟಿಕೆಟ್​ಗಾಗಿ ಪೈಪೋಟಿಗಳು ನಡೆಯುತ್ತಿವೆ. ಇದ್ರ ನಡುವೆ ಕಾಂಗ್ರೆಸ್ ಕರಾವಳಿ ಮೇಲೆ ಕಣ್ಣಿಟ್ಟಿದ್ದು ಬೃಹತ್ ಸಮಾವೇಶ ನಡೆಸಿದೆ. ಆದ್ರೆ ಈ ಸಮಾವೇಶದಿಂದ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲೋಕೆ ಸಾಧ್ಯನಾ..? ಅನ್ನೋದಕ್ಕೆ ಮತದಾರರೇ ಉತ್ತರ ಕೊಡ್ಬೇಕು.

Shwetha M