ಕೋಪಿಸಿಕೊಂಡು ಮಾತು ಬಿಟ್ಟಿದ್ದಾರೆಂದುಕೊಂಡ ಬಾಲಕ – 2 ದಿನ ತಾಯಿ ಶವದ ಜೊತೆಯೇ ಕಾಲ ಕಳೆದ!

ಕೋಪಿಸಿಕೊಂಡು ಮಾತು ಬಿಟ್ಟಿದ್ದಾರೆಂದುಕೊಂಡ ಬಾಲಕ – 2 ದಿನ ತಾಯಿ ಶವದ ಜೊತೆಯೇ ಕಾಲ ಕಳೆದ!

ಅವರದ್ದು ಮೊದಲೇ ನೊಂದಿದ್ದ ಕುಟುಂಬ. ವರ್ಷದ ಹಿಂದಷ್ಟೇ ಮನೆ ಯಜಮಾನ ತೀರಿಹೋಗಿದ್ರು. ಬದುಕಿನ ಆಧಾರವನ್ನೇ ಕಳೆದುಕೊಂಡಿದ್ದ ಪತ್ನಿ, ತನ್ನ ಮಗನ ಜೊತೆ ಹೇಗೋ ಬದುಕು ಕಟ್ಟಿಕೊಂಡಿದ್ರು. ಆದ್ರೆ ತಾಯಿ ಮಗನ ಬಾಳಲ್ಲಿ ವಿಧಿ ಮತ್ತೆ ಅಟ್ಟಹಾಸ ಮೆರೆದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. 14 ವರ್ಷದ ಬಾಲಕ ತನ್ನ ತಾಯಿಯ ಶವದೊಂದಿಗೆ ಎರಡು ದಿನ ಕಳೆದಿದ್ದಾನೆ. ಬೆಂಗಳೂರಿನ ಆರ್​.ಟಿ.ನಗರದ ಮನೆಯೊಂದರಲ್ಲಿ ಫೆ.26ರಂದು ಅಣ್ಣಮ್ಮ(44) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಸಾವಿನ ಸತ್ಯ ಗೊತ್ತಾಗದ ಮಗ, ತನ್ನ ತಾಯಿ ಯಾಕೋ ನನ್ನ ಜೊತೆ ಮಾತಾಡುತ್ತಿಲ್ಲ. ಎಲ್ಲೋ ಕೋಪ ಮಾಡಿಕೊಂಡು ಮಲಗಿದ್ದಾರೆ ಎಂದುಕೊಂಡೇ ಇದ್ದಾನೆ. ಹೀಗೆ ತನ್ನಮ್ಮನ ಮೃತದೇಹದ ಜೊತೆ 2 ದಿನ ಕಳೆದಿದ್ದಾನೆ.

ಇದನ್ನೂ ಓದಿ : ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ – ಇನ್ಮುಂದೆ ಎಲ್ಲಾ ವಾರದಲ್ಲೂ ಐದೇ ದಿನ ಕೆಲಸ!

ಬೆಂಗಳೂರಿನ ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಇರುವ ಮನೆಯಲ್ಲಿ ಫೆಬ್ರವರಿ 26 ರಂದು ಲೋ ಬಿಪಿ ಮತ್ತು ಶುಗರ್​ನಿಂದಾಗಿ ಅಣ್ಣಮ್ಮ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಫೆಬ್ರವರಿ‌ 28ರ ವರೆಗೂ ಬಾಲಕ ತನ್ನ ತಾಯಿಯ ಶವದ ಜೊತೆಗೆ ಕಾಲ ಕಳೆದಿದ್ದಾನೆ. ಹೊರಗೆ ಬಂದು ಊಟ, ತಿಂಡಿ‌ ತೆಗೆದುಕೊಂಡು‌ ಮತ್ತೆ ಮನೆ ಸೇರಿಕೊಳ್ಳುತ್ತಿದ್ದನಂತೆ. ರಾತ್ರಿ ಪೂರ್ತಿ ತಾಯಿಯ ಜೊತೆಯಲ್ಲೇ ಮಲಗಿ ಕಾಲ‌ ಕಳೆಯುತ್ತಿದ್ದನಂತೆ.

ಅಣ್ಣಮ್ಮ ಸಾವಿನ ಬಗ್ಗೆ ಬಾಲಕ ಏರಿಯಾದ ಜನರಿಗೆ ಕೊಂಚವೂ ಮಾಹಿತಿ ನೀಡಿಲ್ಲ. 2 ದಿನಗಳ ಬಳಿಕ ತನ್ನ ತಂದೆಯ ಸ್ನೇಹಿತರಿಗೆ ತನ್ನ ತಾಯಿ ನನ್ನ ಜೊತೆ ಮಾತನಾಡ್ತಿಲ್ಲ ಎಂದು ಹೇಳಿದ್ದನಂತೆ. ಆಗ ಸ್ನೇಹಿತರು ಮನೆಗೆ ಬಂದು ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ರು. ಆದ್ರೆ ಈಗ ತಾಯಿ ಕೂಡ ಮೃತಪಟ್ಟಿದ್ದು ಬಾಲಕ ತಬ್ಬಲಿಯಾಗಿದ್ದಾನೆ.

suddiyaana