‘ಬೆಟ್ಟದ ಹೂ’ವಾಗಿ ಅರಳಿ ‘ಪರಮಾತ್ಮ’ನ ಮುಡಿ ಸೇರಿದ ‘ಭಾಗ್ಯವಂತ’ – ಇಂದು ಅಪ್ಪು ಇಲ್ಲದ ಎರಡನೇ ಹುಟ್ಟುಹಬ್ಬ!

‘ಬೆಟ್ಟದ ಹೂ’ವಾಗಿ ಅರಳಿ ‘ಪರಮಾತ್ಮ’ನ ಮುಡಿ ಸೇರಿದ ‘ಭಾಗ್ಯವಂತ’ – ಇಂದು ಅಪ್ಪು ಇಲ್ಲದ ಎರಡನೇ ಹುಟ್ಟುಹಬ್ಬ!

ಡಾ. ರಾಜಕುಮಾರ್​-ಪಾರ್ವತಮ್ಮ ದಂಪತಿಯ ‘ಪೇಮದ ಕಾಣಿಕೆ’ಯಾಗಿ ಹುಟ್ಟಿ ‘ತಾಯಿಗೆ ತಕ್ಕ ಮಗ’ನಾಗಿ ಬೆಳೆಯುತ್ತಾ ‘ವಸಂತಗೀತೆ’ ಹಾಡುತ್ತಲೇ ‘ಭೂಮಿಗೆ ಬಂದ ಭಗವಂತ’ ಎಂದು ‘ಭಾಗ್ಯವಂತ’ನಾಗಿ ‘ಹೊಸಬೆಳಕು’ ತಂದ ‘ಭಕ್ತ ಪ್ರಹ್ಲಾದ’. ಇದ್ದಷ್ಟು ದಿನ ‘ಎರಡು ನಕ್ಷತ್ರಗಳ’ಂತೆ ಮಿನುಗುತ್ತಾ ‘ಚಲಿಸುವ ಮೋಡಗಳಲ್ಲಿ’ ಇದ್ದಕ್ಕಿದ್ದಂತೆ ‘ಕಾಣದಂತೆ ಮಾಯವಾದ’ವರು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಮನೆ ಮನೆಗಳಲ್ಲೂ ‘ಅಪ್ಪು’ವಾಗಿ ಮೆರೆದಿದ್ದ ಎಲ್ಲರ ಪ್ರೀತಿಯ ‘ಅಭಿ’ ಇವತ್ತು ನಮ್ಮೊಂದಿಗಿಲ್ಲ. ಇನ್ನೊಂದು ವಿಚಾರ ಅಂದ್ರೆ ಇವತ್ತು ‘ಅರಸು’ ಇಲ್ಲದ 2ನೇ ಹುಟ್ಟುಹಬ್ಬ.

‘ಬೆಟ್ಟದ ಹೂ’ವಾಗಿ ಅರಳಿ ರಾಷ್ಟ್ರಪ್ರಶಸ್ತಿಯ ಕಿರೀಟ ಪಡೆದಿದ್ದ ‘ರಾಮು’ ನಂತರ ‘ಪರಮಾತ್ಮ’ನಾಗಿದ್ದು ಈಗ ಇತಿಹಾಸ. ‘ಅಪ್ಪು’ ಚಿತ್ರದ ಮೂಲಕ ಹೀರೋ ಆಗಿ ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ಪುನೀತ್ ರಾಜ್ ಕುಮಾರ್ ‘ಪವರ್ ಸ್ಟಾರ್’ ಪಟ್ಟಕ್ಕೇರಿದ್ರು. ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ನೀಡುತ್ತಲೇ ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ರು. ನಗುಮೊಗದಲ್ಲೇ ಜಗವ ಗೆಲ್ಲುತ್ತಿದ್ದ ‘ದೊಡ್ಮನೆ ಅರಸ’ ‘ಗಂಧದ ಗುಡಿ’ಯಲ್ಲೂ ಘಮ ಬೀರಿದ್ರು. ಪ್ರಕೃತಿಯ ಜೊತೆಗೆ ಹೆಜ್ಜೆ ಹಾಕುತ್ತಾ ವನ್ಯಲೋಕದ ಮಹತ್ವ ಸಾರಿದ್ರು. ಹೀಗೆ ಎತ್ತರೆತ್ತರಕ್ಕೆ ಬೆಳೆಯುವಾಗಲೇ ವಿಧಿಯಾಟದ ಮುಂದೆ ಸೋತು ಹೋಗಿದ್ರು. ಹೃದಯ ಸ್ತಂಭನದಿಂದ ಉಸಿರನ್ನೇ ಚೆಲ್ಲಿದ್ರು.

ಇದನ್ನೂ ಓದಿ : ಪುನೀತ್​ರಂತೆಯೇ ಅಶ್ವಿನಿ ‘ಪವರ್’ಫುಲ್ ಕಿಕ್ – ವರ್ಕೌಟ್ ಹಿಂದಿನ ಸೀಕ್ರೆಟ್ ಏನು ಗೊತ್ತಾ..!?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದ್ರೆ ಕನ್ನಡಿಗರ ಪಾಲಿಗೆ ಮನೆಮಗನಿದ್ದಂತೆ. ಇವತ್ತು ಪುನೀತ್ ಇದ್ದಿದ್ದರೆ ಅವ್ರ ಹುಟ್ಟುಹಬ್ಬವನ್ನ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ರು. ಕಟೌಟ್, ಹಾಲಿನ ಅಭಿಷೇಕ, ರಕ್ತದಾನ, ಅನ್ನದಾನ ಅಂತಾ ಸಂಭ್ರಮಿಸುತ್ತಿದ್ರು. ಆದ್ರೆ ಅಪ್ಪು ನಮ್ಮೊಂದಿಗಿಲ್ಲ ಅನ್ನೋ ಕಹಿಸತ್ಯದ ನಡುವೆಯೇ ಇವತ್ತು 48ನೇ ಬರ್ತಡೇ ಆಚರಿಸುತ್ತಿದ್ದಾರೆ.

2021ರ ಅಕ್ಟೋಬರ್ 29 ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಕರಾಳ ದಿನ. ಜಿಮ್, ವರ್ಕೌಟ್ ಅಂತಾ ಸದಾ ಫಿಟ್ ಌಂಡ್ ಫೈನ್ ಆಗಿದ್ದ ಪುನೀತ್ ಆವತ್ತು ಹೃದಯ ಸ್ತಂಭನದಿಂದ ದಿಢೀರ್ ಉಸಿರು ಚೆಲ್ಲಿದ್ರು. ಅಪ್ಪು ಎಂಬ ಅಪ್ರತಿಮ ಕಲಾವಿದನ ಆಕಸ್ಮಿಕ ಅಗಲಿಕೆಗೆ ಭಾರತೀಯ ಚಿತ್ರರಂಗವೇ ಆಘಾತಗೊಂಡಿತ್ತು. ವಿದೇಶಿ ಮಾಧ್ಯಮಗಳಲ್ಲೂ ಪುನೀತ್ ನಿಧನದ ಬಗ್ಗೆ ವರದಿ ಮಾಡಲಾಗಿತ್ತು. ಮೂರು ದಿನಗಳ ಕಾಲ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಊರು, ಜಿಲ್ಲೆ, ರಾಜ್ಯ, ದೇಶಗಳ ಗಡಿ ಮೀರಿ ಲಕ್ಷಾಂತರ ಮಂದಿ ಅಂತಿಮ ದರ್ಶನ ಪಡೆದಿದ್ರು. ತಿಂಗಳುಗಟ್ಟಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ನಮಿಸಿದ್ರು. ಇಂದಿಗೂ ಸಹ ಸಾವಿರಾರು ಮನೆಗಳಲ್ಲಿ ಅಪ್ಪು ಫೋಟೋವನ್ನ ದೇವರಂತೆ ಪೂಜೆ ಮಾಡ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅಗಲಿಕೆ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಇಂದಿಗೂ ಕೂಡ ನೋವು, ನೆನಪು, ದುಃಖ ಕಡಿಮೆಯಾಗಿಲ್ಲ. ಹೀಗಾಗೇ ಅಪ್ಪು ಹೆಸರಿನಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನ ಮಾಡುತ್ತಿದ್ದಾರೆ. ಅದೇ ನೆನಪಿನಲ್ಲೇ ಇವತ್ತು ‘ಯುವರತ್ನ’ನ 48ನೇ ಹುಟ್ಟುಹಬ್ಬವನ್ನ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಕುಟುಂಬಸ್ಥರು ಅಲಂಕಾರ ಮಾಡಿದ್ದಾರೆ. ಸಾಕಷ್ಟು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ನಮಿಸುತ್ತಿದ್ದಾರೆ.

suddiyaana